
ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿನಿಮಾ ಬಿಡುಗಡೆ ಆದ ಕೇವಲ 21 ದಿಗಳಲ್ಲಿ 1000 ಕೋಟಿ ಕಲೆಕ್ಷನ್ ದಾಟಿದೆ. ಗಮನಿಸಬೇಕಾದ ಅಂಶವೆಂದರೆ ‘ಧುರಂಧರ್’ ಪ್ಯಾನ್ ಇಂಡಿಯಾ ಸಿನಿಮಾ ಸಹ ಅಲ್ಲ. ಹಿಂದಿ ಹೊರತಾಗಿ ಬೇರೆ ಯಾವ ಭಾಷೆಯಲ್ಲಿಯೂ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಸಹ ಗಳಿಕೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ದಾಟುತ್ತಾ ಸಾಗುತ್ತಿದೆ. ಸಿನಿಮಾನಲ್ಲಿ ನಟಿಸಿರುವ ನಟ-ನಟಿಯರು, ಕೆಲಸ ಮಾಡಿರುವ ತಂತ್ರಜ್ಙರಿಗೆ ಒಳ್ಳೆಯ ಗುರುತು, ಗೌರವ ಸಿಗುತ್ತಿದೆ. ಅಂದಹಾಗೆ ನಟಿ ತಮನ್ನಾ ಭಾಟಿಯಾ ಸಹ ‘ಧುರಂಧರ್’ ಸಿನಿಮಾನಲ್ಲಿ ನಟಿಸಬೇಕಿತ್ತು, ಆದರೆ ನಿರ್ದೇಶಕ ಆದಿತ್ಯ ಧರ್ ಕಡ್ಡಾಯವಾಗಿ ತಮನ್ನಾ ಬೇಡವೇ ಬೇಡ ಎಂದುಬಿಟ್ಟರಂತೆ. ಕಾರಣ ಏನು?
‘ಧುರಂಧರ್’ ಸಿನಿಮಾನಲ್ಲಿ ‘ಶರಾರತ್’ ಹೆಸರಿನ ಹಾಡೊಂದಿದೆ. ಆ ಹಾಡಿಗೆ ವಿಜಯ್ ಗಂಗೂಲಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ‘ಶರಾರತ್’ ಹಾಡು ಕೇಳಿದ ಕೂಡಲೇ ಈ ಹಾಡಿಗೆ ತಮನ್ನಾ ಭಾಟಿಯಾ ಡ್ಯಾನ್ಸ್ ಮಾಡಿದರೆ ಬಹಳ ಚೆನ್ನಾಗಿ ಇರುತ್ತದೆ ಎಂದು ವಿಜಯ್ ಗಂಗೂಲಿ ಅವರಿಗೆ ಅನಿಸಿತಂತೆ. ಇದೇ ವಿಷಯವನ್ನು ನಿರ್ದೇಶಕ ಆದಿತ್ಯ ಧರ್ ಬಳಿ ವಿಜಯ್ ಹೇಳಿಕೊಂಡಿದ್ದಾರೆ. ಆದರೆ ಆದಿತ್ಯ ಅವರು ಕೂಡಲೇ ‘ತಮನ್ನಾ ಬೇಡ’ ಎಂದು ಬಿಟ್ಟರಂತೆ.
ಆದಿತ್ಯ ಅವರು ತಮನ್ನಾ ಅವರನ್ನು ನಿರಾಕರಿಸಲು ಯಾವುದೇ ವೈಯಕ್ತಿಕ ಕಾರಣ ಇಲ್ಲ. ಆದಿತ್ಯ ಅವರ ಅಭಿಪ್ರಾಯದಂತೆ, ತಮನ್ನಾ ಭಾಟಿಯಾ ಬಹಳ ಜನಪ್ರಿಯ ನಟಿ, ಅವರು ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡರೆ ಆ ಹಾಡು ಹಿಟ್ ಆಗುತ್ತದೆ, ಆ ಹಾಡಿಗಾಗಿ ಜನ ಸಿನಿಮಾಕ್ಕೆ ಬರುವುದು ಸಹ ಇದೆ, ಆದರೆ ಹಾಗೆ ಆಗುವುದು ಆದಿತ್ಯಗೆ ಇಷ್ಟವಿರಲಿಲ್ಲವಂತೆ. ‘ಶರಾರತ್’ ಹಾಡು ಸಿನಿಮಾದಿಂದ ಪ್ರತ್ಯೇಕವಾಗಿದೆ, ಅದೊಂದು ‘ಸೇರಿಸಲಾಗಿರುವ ಐಟಂ ಹಾಡು’ ಎನಿಸಬಾರದು ಎಂಬುದು ಅವರ ಆಲೋಚನೆ ಆಗಿತ್ತಂತೆ.
ಇದನ್ನೂ ಓದಿ:‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ತಮನ್ನಾ ಆ ಹಾಡಿನಲ್ಲಿ ನಟಿಸಿದರೆ ಜನ ಕತೆಗಿಂತಲೂ ಹಾಡಿಗೆ ಪ್ರತ್ಯೇಕ ಪ್ರಾಮುಖ್ಯತೆ ನೀಡುತ್ತಾರೆ. ಹಾಡಿನ ಸುತ್ತ ನಡೆಯುತ್ತಿರುವ ಕತೆಗೇ ಜನ ಮಹತ್ವ ನೀಡಬೇಕು, ಹಾಡು ಕತೆಯಿಂದ ಪ್ರತ್ಯೇಕವಾಗಬಾರದು ಎಂಬ ಕಾರಣಕ್ಕೆ ತಮನ್ನಾರನ್ನು ಹಾಕಿಕೊಳ್ಳಲಿಲ್ಲವಂತೆ, ಬದಲಿಗೆ ‘ಶರಾರತ್’ ಹಾಡಿನಲ್ಲಿ ಇಬ್ಬರು ನಟಿಯರನ್ನು ಹಾಕಿಕೊಂಡಿದ್ದಾರೆ. ಅದು ಸಹ ಆದಿತ್ಯ ಅವರದ್ದೇ ಐಡಿಯಾ ಅಂತೆ, ಇಬ್ಬರು ನಟಿಯರು ಇದ್ದರೆ ಒಬ್ಬರ ಮೇಲೆ ಪ್ರೇಕ್ಷಕರ ಗಮನ ನಿಲ್ಲುವುದಿಲ್ಲ ಎಂಬುದು ಅವರ ಆಲೋಚನೆ ಆಗಿತ್ತಂತೆ.
‘ಧುರಂಧರ್’ ಸಿನಿಮಾನಲ್ಲಿ ರಣ್ವೀರ್ ಸಿಂಗ್, ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅಕ್ಷಯ್ ಕುಮಾರ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್, ಮಾಧವನ್ ಅವರುಗಳು ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಸಾರಾ ಅರ್ಜುನ್ ನಟಿಸಿದ್ದಾರೆ. ಸಿನಿಮಾದ ಸೀಕ್ವೆಲ್ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.