
ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾ ಹಲವಾರು ಅಡೆ-ತಡೆಗಳನ್ನು ದಾಟಿಕೊಂಡು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಯ್ತು. ಸಿನಿಮಾಕ್ಕೆ ನಿರೀಕ್ಷಿತ ಯಶಸ್ಸು ದೊರಕಲಿಲ್ಲ. ಚಿತ್ರಮಂದಿರದ ಬಳಿಕ ಈ ಸಿನಿಮಾ ಒಟಿಟಿಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಕೆಲವು ಅಭಿಮಾನಿಗಳು ಕಾದಿದ್ದರು ಆದರೆ ಸಿನಿಮಾದ ಒಟಿಟಿ ಬಿಡುಗಡೆ ತಡವಾಗುತ್ತಲೇ ಬಂತು. ಇದೀಗ ಕೊನೆಗೂ ಸಿನಿಮಾ ಒಟಿಟಿಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಏಳು ತಿಂಗಳ ಬಳಿಕ ಇದೀಗ ಸಿನಿಮಾ ಒಟಿಟಿಗೆ ಬರುತ್ತಿದೆ.
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೇ ತಿಂಗಳ 17ನೇ ತಾರೀಖಿಗೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಜುಲೈ 17ರಿಂದ ‘ಡೆವಿಲ್’ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವೇ ಲಭ್ಯ ಇರಲಿದೆಯಾ? ಬೇರೆ ಭಾಷೆಗಳಲ್ಲಿಯೂ ಡಬ್ಬಿಂಗ್ ಆಗಲಿದೆಯಾ ಇತ್ಯಾದಿ ಮಾಹಿತಿ ಸದ್ಯಕ್ಕಿಲ್ಲ. ಮೂಲಗಳ ಪ್ರಕಾರ, ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವೇ ಒಟಿಟಿಯಲ್ಲಿ ಲಭ್ಯವಿರಲಿದೆ ಎನ್ನಲಾಗುತ್ತಿದೆ. ಇನ್ನು ‘ಡೆವಿಲ್’ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಸಹ ಜೀ ಸಂಸ್ಥೆಯವರೇ ಖರೀದಿ ಮಾಡಿದ್ದು, ಕೆಲವೇ ದಿನಗಳಲ್ಲಿ ಜೀ ಚಾನೆಲ್ನಲ್ಲಿ ವರ್ಲ್ಡ್ ಪ್ರೀಯಮರ್ ಸಹ ಆಗಲಿದೆ.
‘ಡೆವಿಲ್’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಜೀ5 ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ‘ಡೆವಿಲ್’ ಸಿನಿಮಾದ ವಿಡಿಯೋ ತುಣುಕುಗಳನ್ನು ಹಂಚಿಕೊಂಡಿರುವ ಜೀ5, ‘ಅಧಿಕಾರದ ಆಟದಲ್ಲಿ ಇವನದೇ ರೂಲ್ಸ್. ಸಿಂಹಾಸನ ಒಂದೇ, ಅದರ ಮೇಲೆ ಕೂರೋ ರಾಜನೂ ಒಬ್ಬನೇ… “ದಿ ಡೆವಿಲ್”. ಜುಲೈ 17ರಿಂದ Zee 5 ಕನ್ನಡದಲ್ಲಿ ಸ್ಟ್ರೀಮ್ ಆಗುತ್ತಿದೆ’ ಎಂದು ಬರೆದುಕೊಂಡಿದೆ.
ಇದನ್ನೂ ಓದಿ:‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’; ಯುವ ರೈತ ಚೇತನ್
‘ಡೆವಿಲ್’ ಸಿನಿಮಾ 2023 ರಲ್ಲಿ ಘೋಷಣೆ ಆಯ್ತು. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದರು. ಆಗ ಸಿನಿಮಾದ ಚಿತ್ರೀಕರಣ ನಿಂತು ಹೋಯ್ತು. ಕೆಲ ತಿಂಗಳುಗಳ ಬಳಿಕ ದರ್ಶನ್, ಜಾಮೀನಿನ ಮೇಲೆ ಬಿಡುಗಡೆ ಆದರು. ಆಗ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮುಂದುವರೆಸಿ, ಚಿತ್ರೀಕರಣ ಪೂರ್ತಿ ಮಾಡಿಕೊಟ್ಟರು, ಡಬ್ಬಿಂಗ್ ಸಹ ಮಾಡಿಕೊಟ್ಟರು. ಅದೆಲ್ಲ ಮುಗಿಯುತ್ತಿದ್ದಂತೆ ಸುಪ್ರೀಂಕೋರ್ಟ್, ದರ್ಶನ್ ಅವರ ಜಾಮೀನು ರದ್ದು ಮಾಡಿತು. ದರ್ಶನ್ ಜೈಲಿನಲ್ಲಿರುವಾಗಲೇ ‘ಡೆವಿಲ್’ ಸಿನಿಮಾ ಬಿಡುಗಡೆ ಆಯ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈಗ ಹಲವು ತಿಂಗಳುಗಳ ಬಳಿಕ ಒಟಿಟಿಗೆ ಬಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Sat, 11 July 26