ಅದ್ದೂರಿಯಾಗಿ ನಡೆದ ‘ಹನುಮಾನ್’ ನಟ ತೇಜ ಸಜ್ಜ ನಿಶ್ಚಿತಾರ್ಥ; ಚಿರಂಜೀವಿ, ನಾನಿ ಸೇರಿ ತಾರೆಯರ ದಂಡು
‘ಹನುಮಾನ್’ ಖ್ಯಾತಿಯ ನಟ ತೇಜ ಸಜ್ಜ ಹೈದರಾಬಾದ್‌ನಲ್ಲಿ ಮೌರ್ಯ ಎಂಬುವವರ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರವಿತೇಜ, ನಾನಿ ಸೇರಿದಂತೆ ಹಲವು ತಾರೆಯರು ಮತ್ತು ರಾಜಕೀಯ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದು, ಡಿಸೆಂಬರ್‌ನಲ್ಲಿ ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ.

ಮುಖ್ಯಾಂಶಗಳು
- ನಿಶ್ಚಿತಾರ್ಥದ ಸಂಭ್ರಮದಲ್ಲಿ ಮಿಂಚಿದ ತೇಜ ಸಜ್ಜ ಮತ್ತು ಮೌರ್ಯ ಜೋಡಿ
- ಚಿರಂಜೀವಿ, ನಾನಿ ಸೇರಿ ಸಮಾರಂಭಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು
- ಯಾರು ಈ ಮೌರ್ಯ? ಡಿಸೆಂಬರ್‌ನಲ್ಲಿ ಉದಯಪುರದಲ್ಲಿ ಅದ್ಧೂರಿ ಮದುವೆ
‘ಹನುಮಾನ್’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ ತೆಲುಗು ನಟ ತೇಜ ಸಜ್ಜ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನವೆಂಬರ್ 16ರ ಸೋಮವಾರ ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಮೌರ್ಯ ಎಂಬುವವರ ಜೊತೆ ತೇಜ ನಿಶ್ಚಿತಾರ್ಥ ನೆರವೇರಿದೆ. ಈ ಖಾಸಗಿ ಸಮಾರಂಭದಲ್ಲಿ ಟಾಲಿವುಡ್ ದಿಗ್ಗಜರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ. ನಿಶ್ಚಿತಾರ್ಥದ ಸುಂದರ ಫೋಟೋಗಳು ಈಗ ವೈರಲ್ ಆಗಿವೆ.
ನಿಶ್ಚಿತಾರ್ಥದ ಸಂಭ್ರಮದಲ್ಲಿ ತೇಜ ಸಜ್ಜ ತಿಳಿ ಗುಲಾಬಿ ಬಣ್ಣದ ಕುರ್ತಾ ಮತ್ತು ನೆಹರು ಜಾಕೆಟ್ ಧರಿಸಿ ಮಿಂಚಿದ್ದಾರೆ. ವಧು ಮೌರ್ಯ ತಿಳಿ ಹಸಿರು ಹಾಗೂ ಚಿನ್ನದ ಬಣ್ಣದ ಎಂಬ್ರಾಯ್ಡರಿ ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ಈ ಜೋಡಿಯ ಮ್ಯಾಚಿಂಗ್ ಉಡುಗೆ ಎಲ್ಲರ ಗಮನ ಸೆಳೆದಿದೆ. ಮೆಗಾಸ್ಟಾರ್ ಚಿರಂಜೀವಿ, ರವಿತೇಜ, ನಾನಿ, ರಾಣಾ ದಗ್ಗುಬಾಟಿ, ಅಡಿವಿ ಶೇಷ್ ಹಾಗೂ ನಿಧಿ ಅಗರ್ವಾಲ್ ಸೇರಿದಂತೆ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ತೆಲಂಗಾಣ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ, ಕೇಂದ್ರ ಸಚಿವ ಕಿಶನ್ ರೆಡ್ಡಿ, ನಿರ್ಮಾಪಕರಾದ ಅಲ್ಲು ಅರವಿಂದ್, ದಿಲ್ ರಾಜು, ಸುರೇಶ್ ಬಾಬು ಹಾಗೂ ನಿರ್ದೇಶಕ ಪ್ರಶಾಂತ್ ವರ್ಮಾ ಸೇರಿದಂತೆ ಅನೇಕ ಗಣ್ಯರು ನವಜೋಡಿಗೆ ಆಶೀರ್ವದಿಸಿದ್ದಾರೆ. ತೇಜ ಕೈಹಿಡಿಯುತ್ತಿರುವ ಮೌರ್ಯ ಅವರಿಗೆ ಸಿನಿಮಾ ರಂಗದ ಹಿನ್ನೆಲೆಯಿಲ್ಲ. ಅಮೆರಿಕದಲ್ಲಿ ಬೆಳೆದಿರುವ ಅವರು ತಮ್ಮ ತಂದೆಯೊಂದಿಗೆ ಟೆಕ್ನಾಲಜಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಹಿರಿಯರು ನಿಶ್ಚಯಿಸಿದ ಮದುವೆಯಾಗಿದೆ.
The Hon’ble Governor of Telangana, Shri Shiv Pratap Shukla, graced the ring ceremony of popular film actor Shri Teja Sajja, held at Taj Krishna, Banjara Hills, Hyderabad.
💍 On the joyous occasion, the Hon’ble Governor extended his heartfelt congratulations and warmest wishes to the couple, wishing them a beautiful journey ahead filled with love, happiness, harmony and togetherness. ✨ @tejasajja123
— Governor of Telangana (@tg_governor) November 16, 2026
ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಮದುವೆಯ ಬಗ್ಗೆ ತೇಜ ಸಜ್ಜ ಸುಳಿವು ನೀಡಿದ್ದರು. ಇದೀಗ ನಿಶ್ಚಿತಾರ್ಥ ಮುಗಿಸಿರುವ ಈ ಜೋಡಿ, ಮುಂಬರುವ ಡಿಸೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಲಿದ್ದಾರೆ ಎನ್ನಲಾಗಿದೆ. ಮದುವೆಯ ನಂತರ ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗಾಗಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನೂ ಆಯೋಜಿಸಲಾಗುವುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಒಟಿಟಿಗೆ ಬರುತ್ತಿದೆ ‘ಹನುಮಾನ್ ಅಂಶ್’: ಯಾವಾಗ? ಎಲ್ಲಿ ನೋಡಬಹುದು?
ವೃತ್ತಿಜೀವನದ ವಿಚಾರಕ್ಕೆ ಬಂದರೆ, ‘ಹನುಮಾನ್’ ನಂತರ ‘ಮಿರಾಯ್’ ಚಿತ್ರದ ಮೂಲಕವೂ ತೇಜ ಸಜ್ಜ ದೊಡ್ಡ ಯಶಸ್ಸು ಕಂಡಿದ್ದಾರೆ. ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ‘ದಿ ಟ್ರೇಟರ್ಸ್’ ತೆಲುಗು ರಿಯಾಲಿಟಿ ಶೋ ಅನ್ನು ಅವರು ನಿರೂಪಣೆ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯ ಅಧಿಕೃತ ದಿನಾಂಕವನ್ನು ತೇಜ ಘೋಷಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:07 am, Tue, 17 November 26




