ರಕ್ಷಿತ್ ಶೆಟ್ಟಿ ಹೇಗಿದ್ದಾರೆ, ಏನು ಮಾಡ್ತಿದ್ದಾರೆ? ಗೆಳೆಯ ಹೇಮಂತ್ ಕೊಟ್ಟರು ಉತ್ತರ

Rakshit Shetty: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕಾಣೆ ಆಗಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೊ: ಸೈಡ್ ಬಿ’ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳಾಗುತ್ತಾ ಬಂದಿದೆ. ಆ ಸಿನಿಮಾದ ಬಳಿಕ ಕಾಣೆಯಾದ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಈಗ ಏನು ಮಾಡುತ್ತಿದ್ದಾರೆ ಎಂಬುದು ಸಹ ಗೊತ್ತಿಲ್ಲ. ಇದೀಗ ರಕ್ಷಿತ್ ಅವರ ಆಪ್ತ ಗೆಳೆಯ ‘ಸಪ್ತ ಸಾಗರದಾಚೆ ಎಲ್ಲೊ’ ನಿರ್ದೇಶಕ ಹೇಮಂತ್ ರಾವ್ ತಮ್ಮ ಗೆಳೆಯನ ಬಗ್ಗೆ ಮಾಹಿತಿ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ಹೇಗಿದ್ದಾರೆ, ಏನು ಮಾಡ್ತಿದ್ದಾರೆ? ಗೆಳೆಯ ಹೇಮಂತ್ ಕೊಟ್ಟರು ಉತ್ತರ
Rakshit Shetty

Updated on: Feb 14, 2026 | 3:34 PM

‘ಸಪ್ತ ಸಾಗರದಾಚೆ ಎಲ್ಲೊ-ಸೈಡ್ ಬಿ’ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳಾಗುತ್ತಾ ಬಂದಿದೆ. ಆ ಸಿನಿಮಾದ ಬಿಡುಗಡೆ ವೇಳೆ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ (Rakshit Shetty) ಅದಾದ ಬಳಿಕ ಕಣ್ಮರೆ ಆಗಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾಕ್ಕೆ ಮುಂಚೆಯೇ ‘ರಿಚರ್ಡ್ ಆಂಟೊನಿ’ ಸಿನಿಮಾ ಘೋಷಿಸಿದ್ದ ರಕ್ಷಿತ್ ಶೆಟ್ಟಿ ಅದರ ಶೂಟಿಂಗ್ ಸಹ ಆರಂಭ ಮಾಡಿಲ್ಲ. ರಕ್ಷಿತ್ ಅಭಿಮಾನಿಗಳು ನೆಚ್ಚಿನ ನಟನ ಬಗ್ಗೆ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ರಕ್ಷಿತ್ ಕಾಣೆ ಆಗಿರುವ ಬಗ್ಗೆ ಮೀಮ್​​ಗಳು ಸಹ ಹರಿದಾಡುತ್ತಿರುತ್ತವೆ. ಇದೀಗ ರಕ್ಷಿತ್ ಅವರ ಗೆಳೆಯ ಹೇಮಂತ್ ರಾವ್, ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ.

ಹೇಮಂತ್ ರಾವ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ತಮ್ಮ ಸಿನಿಮಾ ಜರ್ನಿ, ಕನ್ನಡ ಚಿತ್ರರಂಗದ ಓರೆ-ಕೋರೆಗಳು, ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಹೀಗೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದೇ ಸಂದರ್ಶನದ ಅಂತ್ಯದಲ್ಲಿ ವ್ಯಕ್ತಿಯೊಬ್ಬರು, ‘ರಕ್ಷಿತ್ ಶೆಟ್ಟಿ ಅವರು ಹೇಗಿದ್ದಾರೆ? ಅವರಿಗೆ ಒಂದು ಕರೆ ಮಾಡಿ’ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಯ ಮನವಿಗೆ ಹೇಮಂತ್ ರಾವ್ ಸ್ಪಂದಿಸಿದ್ದಾರೆ.

ಹೇಮಂತ್ ರಾವ್ ಅವರು, ರಕ್ಷಿತ್ ಶೆಟ್ಟಿ ಅವರಿಗೆ ಕರೆ ಮಾಡಲು ನಿರಾಕರಿಸಿದ್ದಾರೆ. ನಾನು ಅವರ ಖಾಸಗಿತನವನ್ನು ಹಾಳು ಮಾಡಲು ಇಷ್ಟಪಡುವುದಿಲ್ಲ, ಅವರ ಖಾಸಗಿ ತನವನ್ನು ಗೌರವಿಸಬೇಕಾದುದು ನನ್ನ ಕರ್ತವ್ಯ ಎಂದಿರುವ ಹೇಮಂತ್ ರಾವ್, ‘ರಕ್ಷಿತ್ ಶೆಟ್ಟಿ ಆರಾಮವಾಗಿದ್ದಾರೆ. ಬಹಳ ಚೆನ್ನಾಗಿದ್ದಾರೆ. ಯಾರೂ ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಅವರು ಒಂದು ಅದ್ಭುತವಾದ ಚಿತ್ರಕತೆಯನ್ನು ಬರೆಯುತ್ತಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್’ನಲ್ಲಿ ಒಂದು ಡ್ರ್ಯಾಗನ್ ಬರುತ್ತದಲ್ಲ, ಅದೇ ರೀತಿ ರಕ್ಷಿತ್ ಸಹ ಅದ್ಧೂರಿಯಾಗಿ ಎಂಟ್ರಿ ಕೊಡಲಿದ್ದಾರೆ’ ಎಂದಿದ್ದಾರೆ ಹೇಮಂತ್.

ಇದನ್ನೂ ಓದಿ:ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ

‘ರಕ್ಷಿತ್ ಶೆಟ್ಟಿ ಅಂಥಹಾ ಅದ್ಭುತ ವ್ಯಕ್ತಿಯನ್ನು ನಾನು ನೋಡಿಲ್ಲ. ಆತ ಮಹಾನ್ ಸಿನಿಮಾ ಪ್ರೇಮಿ. ಬಹಳ ಶ್ರಮಜೀವಿ, ಯಾವುದಲ್ಲಾದರೂ ತೊಡಗಿಕೊಂಡರೆ ಪೂರ್ಣವಾಗಿ ಅದರಲ್ಲೇ ತೊಡಗಿಕೊಳ್ಳುತ್ತಾರೆ. ರಕ್ಷಿತ್ ಶೆಟ್ಟಿಯ ವ್ಯಕ್ತಿತ್ವದ ಬಗ್ಗೆ, ಗುಣಗಳ ಬಗ್ಗೆ ಮಾತನಾಡುವುದಾದರೆ ಬಹಳ ಮಾತನಾಡಬಹುದು. ನೀವೆಲ್ಲರೂ ಹೇಗೆ ಮತ್ತೆ ರಕ್ಷಿತ್ ಅನ್ನು ಪರದೆಯ ಮೇಲೆ ನೋಡಲು ಕಾಯುತ್ತಿದ್ದೀರೋ ಹಾಗೆಯೇ ನಾನು ಸಹ ಅವರನ್ನು ಮತ್ತೆ ಪರದೆಯ ಮೇಲೆ ನೋಡಲು ಕಾಯುತ್ತಿದ್ದೇನೆ. ನಾನು ಬರೆಯುವ ಪ್ರತಿ ಕತೆಯನ್ನೂ ಅವನಿಗೆ (ರಕ್ಷಿತ್ ಶೆಟ್ಟ) ತೋರಿಸಿ, ಮಾಡ್ತೀಯ ಎಂದು ಕೇಳುತ್ತೀನಿ. ನಾನು ಸಹ ನಿಮ್ಮಂತೆ ಅವರನ್ನು ಮತ್ತೆ ನೋಡಲು ಕಾಯುತ್ತಿದ್ದು, ಅದು ಶೀಘ್ರದಲ್ಲಿಯೇ ನೆರವೇರಲಿದೆ’ ಎಂದಿದ್ದಾರೆ ಹೇಮಂತ್ ರಾವ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Sat, 14 February 26