
‘ಗೇಮ್ ಆಫ್ ಥ್ರೋನ್ಸ್’ ವಿಶ್ವದಾದ್ಯಂತ ಅತಿ ದೊಡ್ಡ ಅಭಿಮಾನಿ ವರ್ಗವುಳ್ಳ ಸಾರ್ವಕಾಲಿಕ ಶ್ರೇಷ್ಠ ಟಿವಿ ಸರಣಿ. ವಿಶ್ವ ಮನರಂಜನಾ ಕ್ಷೇತ್ರದ ಇತಿಹಾಸದಲ್ಲಿ ಇಷ್ಟು ಜನಪ್ರಿಯತೆ ಗಳಿಸಿದ ಮತ್ತೊಂದು ವೆಬ್ ಸರಣಿ ಈ ವರೆಗೆ ನಿರ್ಮಾಣ ಆಗಿಲ್ಲ. ಈಗಾಗಲೇ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಎರಡು ಸೀಕ್ವೆಲ್ ವೆಬ್ ಸರಣಿಗಳು ನಿರ್ಮಾಣವಾಗಿ ಪ್ರದರ್ಶನವಾಗುತ್ತಿವೆ. ಇದೀಗ ಈ ವೆಬ್ ಸರಣಿ ದೊಡ್ಡ ಪರದೆಗೆ ಬರಲು ರೆಡಿಯಾಗಿದೆ. ‘ಗೇಮ್ ಆಫ್ ಥ್ರೋನ್ಸ್’ ಸಿನಿಮಾ ರೂಪದಲ್ಲಿ ಬಂದರೆ ಹಿಂದಿನ ದಾಖಲೆಗಳು ಪುಡಿಗಟ್ಟುವುದು ಖಾತ್ರಿ ಎನ್ನಲಾಗುತ್ತಿದೆ.
ಜಾರ್ಜ್ ಆರ್ಆರ್ ಮಾರ್ಟಿನ್ ಬರೆದಿರುವ ಸುದೀರ್ಘ ಕತೆಯ ಭಾಗಗಳನ್ನು ಆಧರಿಸಿ ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿ ನಿರ್ಮಿಸಲಾಗಿತ್ತು. ಈಗ ಸಿನಿಮಾ ಆಗುತ್ತಿರುವುದು ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿಗೆ ಆಯ್ದುಕೊಂಡಿದ್ದ ಕತೆಯಲ್ಲ ಬದಲಿಗೆ ಅದೇ ಬೃಹತ್ ಕಾದಂಬರಿಯ ಭಾಗವಾಗಿರುವ ಬೇರೊಂದು ಕತೆಯಾಗಿದೆ. ಈಗ ನಿರ್ಮಾಣ ಆಗಲಿರುವ ಸಿನಿಮಾಕ್ಕೆ ‘ಗೇಮ್ ಆಫ್ ಥ್ರೋನ್ಸ್: ಏಗಾನ್ಸ್ ಕಾನ್ವೆಸ್ಟ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾ ‘ಗೇಮ್ ಆಫ್ ಥ್ರೋನ್ಸ್’ ಬೃಹತ್ ಕತೆಯ ಆರಂಭದಲ್ಲಿ ಬರುವ ‘ಏಗಾನ್’ ಪಾತ್ರವನ್ನು ಪ್ರಮುಖವಾಗಿ ಆಧರಿಸಿದ್ದಾಗಿರಲಿದೆ.
‘ಗೇಮ್ ಆಫ್ ಥ್ರೋನ್ಸ್’ ಕತೆಯಲ್ಲಿ ಅತ್ಯಂತ ಪ್ರಮುಖ ಕುಟುಂಬ ಆಗಿರುವ ಟಾರ್ಗೇರಿಯನ್ನ ಮೊಟ್ಟ ಮೊದಲ ದೊರೆ ಅಥವಾ ಟಾರ್ಗೆರಿಯನ್ನ ರಾಜವಂಶದ ಸಂಸ್ಥಾಪಕ ‘ಏಗಾನ್ ದಿ ಫಸ್ಟ್’ ಮತ್ತು ಆತನ ವಿಜಯದ ರೋಚಕ ಕಥೆಯನ್ನು ಈ ಸಿನಿಮಾನಲ್ಲಿ ತೋರಿಸಲಾಗುತ್ತದೆ. ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿಯ ಕತೆ ನಡೆಯುವ ಶತಮಾನಗಳ ಮುಂಚೆ ನಡೆಯುವ ಕತೆಯನ್ನು ಈ ಸಿನಿಮಾನಲ್ಲಿ ತೋರಿಸಲಾಗುತ್ತದೆ. ಏಗಾನ್ ತನ್ನ ಇಬ್ಬರು ಸಹೋದರಿ (ಪತ್ನಿಯರು ಕೂಡ) ವಿಸೆನ್ಯಾ ಮತ್ತು ರೇನಿಸ್ ಜೊತೆಗೂಡಿ ಮೂರು ಬೃಹತ್ ಡ್ರಾಗನ್‌ಗಳೊಂದಿಗೆ ವೆಸ್ತೆರೋಸ್ ಮೇಲೆ ದಾಳಿ ಮಾಡಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಸಾಹಸಗಾಥೆ ಇದರಲ್ಲಿದೆ.
ಇದನ್ನೂ ಓದಿ:‘ಗೇಮ್ ಆಫ್ ಥ್ರೋನ್ಸ್’ ಸರಣಿಯಲ್ಲಿ ನಟಿಸಿದ ಕಲಾವಿದ ನಿಧನ
ಈ ಸಿನಿಮಾ ಅನ್ನು ಖ್ಯಾತ ನಿರ್ದೇಶಕ ಕ್ರಿಸ್ಟೊಫರ್ ನೋಲನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಅದು ಸುಳ್ಳಾಗಿದ್ದು, ಸಿನಿಮಾ ಅನ್ನು ಓವನ್ ಹ್ಯಾರಿಸ್ ನಿರ್ದೇಶನ ಮಾಡಲಿದ್ದಾರೆ. ಬ್ಯೂ ವಿಲಿಮಾನ್ ಚಿತ್ರಕಥೆ ಬರೆದಿದ್ದಾರೆ. ಸಿನಿಮಾದ ಪಾತ್ರವರ್ಗ ಮತ್ತು ಕಥೆಯ ಸಂಪೂರ್ಣ ವಿವರಗಳು ಸದ್ಯಕ್ಕೆ ಗೌಪ್ಯವಾಗಿಡಲಾಗಿದ್ದು. ಸಿನಿಮಾ ಅನ್ನು 2029ರಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಣ ಸಂಸ್ಥೆ ಹೇಳಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ