ಹಾಲಿವುಡ್ನ ಹಾಟ್ ಹಾಟ್ ನಟಿ ಆಂಜೆಲಿನಾ ಜೋಲಿ ಇನ್ಸ್ಟಾಗ್ರಾಮ್ಗೆ ಎಂಟ್ರಿ ಕೊಟ್ಟಿದ್ದಾರೆ. ಜಸ್ಟ್ 14 ಗಂಟೆಯೊಳಗೆ ಅವರ ಫಾಲೋವರ್ಸ್ ಸಂಖ್ಯೆ 45 ಲಕ್ಷ ಆಗಿದೆ. ಅದರಲ್ಲಿ ಫೇಸ್ಬುಕ್ನ ಚೀಫ್ ಆಪರೇಟಿಂಗ್ ಆಫೀಸರ್ ಶೆರಿಲ್ ಸ್ಯಾಂಡ್ಬರ್ಗ್ ಕೂಡ ಇದ್ದಾರೆ. ಅಫ್ಘಾನಿಸ್ತಾನದ ಬೆಳವಣಿಗೆಯಿಂದ ತೀವ್ರವಾಗಿ ಆಗಿದೆ ಎಂದು ಹೇಳಿಕೊಂಡಿರುವ ಅವರು, ಅಲ್ಲಿರುವ ಜನರ ಧ್ವನಿಯನ್ನು ಈ ಪ್ಲಾಟ್ಫಾರ್ಮ್ ಮೂಲಕ ತಲುಪಿಸುವುದಾಗಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗದಂತೆ ಆಗಿರುವ ಮತ್ತು ಆ ಸಂವಹನದ ಸಾಮರ್ಥ್ಯವನ್ನು ಕಳೆದುಕೊಂಡ ಅಫ್ಘಾನಿಸ್ತಾನದ ಜನರ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ ಆಂಜೆಲಿನಾ ಜೋಲಿ. “ಜಗತ್ತಿನಾದ್ಯಂತ ತಮ್ಮ ಪ್ರಾಥಮಿಕ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವವರ ಪರವಾದ ಧ್ವನಿ ಹಾಗೂ ಕಥೆಯನ್ನು ಹಂಚಿಕೊಳ್ಳಲು ಇನ್ಸ್ಟಾಗ್ರಾಮ್ಗೆ ಬಂದಿದ್ದೇನೆ,” ಎಂದು 46 ವರ್ಷದ ಆಸ್ಕರ್ ಪ್ರಶಸ್ತಿ ವಿಜೇತೆ ಜೋಲಿ ಹೇಳಿದ್ದಾರೆ.
ಅವರ ಮೊದಲ ಪೋಸ್ಟ್ ಆಫ್ಘನ್ನ ಹದಿಹರೆಯದ ಹೆಣ್ಣುಮಗಳೊಬ್ಬಳು ಬರೆದ ಪತ್ರವಾಗಿದೆ. ತಾಲಿಬಾನ್ಗಳು ಕೈ ವಶ ಮಾಡಿಕೊಂಡ ದೇಶದಲ್ಲಿ ಹೇಗೆ ಭಯ ಮನೆ ಮಾಡಿದೆ ಎಂಬುದನ್ನು ಹೇಳಿಕೊಂಡ ಪತ್ರ ಅದು. ಅದರಲ್ಲಿ, ಈಗಿನ ಸನ್ನಿವೇಶಕ್ಕೆ ಅಫ್ಘಾನಿಸ್ತಾನದಲ್ಲಿ ತನ್ನ ಶಾಲೆಗೆ ಹೋಗುವುದು ಎಷ್ಟು ಕಷ್ಟ ಎಂಬುದನ್ನು ಆ ಹೆಣ್ಣುಮಗಳು ಹೇಳಿಕೊಂಡಿರುವುದು ಒಳಗೊಂಡಿದೆ. “ನಮಗೆಲ್ಲರಿಗೂ ಹಕ್ಕಿತ್ತು, ನಮ್ಮ ಹಕ್ಕುಗಳಿಗಾಗಿ ಮುಕ್ತವಾಗಿ ಎದುರಿಸಬಹುದಿತ್ತು. ಆದರೆ ಅವರು ಬಂದರು, ನಾವೆಲ್ಲ ಅವರಿಗೆ ಹೆದರುತ್ತಿದ್ದೇವೆ, ನಮ್ಮೆಲ್ಲ ಕನಸುಗಳು ಕಮರಿಹೋದವು ಎಂಬ ಚಿಂತೆ ಈಗ ನಮ್ಮನ್ನು ಆವರಿಸಿದೆ,” ಎಂದು ಆ ಹೆಣ್ಣುಮಗಳು ಬರೆದಿದ್ದಾರೆ.
ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ಬಿಟ್ಟು ಹೋದ ಮೇಲೆ, ಕಳೆದ ಭಾನುವಾರ ಕಾಬೂಲ್ ಅನ್ನು ತಾಲಿಬಾನ್ಗಳು ತಮ್ಮ ವಶಕ್ಕೆ ಪಡೆದರು. ಕಳೆದ ಎರಡು ದಶಕಗಳಿಂದ ಅಮೆರಿಕ ಸೇರಿದಂತೆ ಅದರ ಮಿತ್ರ ರಾಷ್ಟ್ರಗಳು ಅಫ್ಘಾನಿಸ್ತಾನದಲ್ಲಿ ತರಲು ಯತ್ನಿಸಿದ ಬದಲಾವಣೆಗಳು ಹೊಳೆಯಲ್ಲಿ ಹುಣಸೇಹಣ್ಣು ಕಿವುಚಿದಂತಾಗಿದೆ. ಅಂದಹಾಗೆ ಅಂಜೆಲಿನಾ ಜೋಲಿ 20 ವರ್ಷಗಳ ಹಿಂದೆ, 9/11ಗೂ ಮುನ್ನ ಅಫ್ಘಾನಿಸ್ತಾನ ಗಡಿಯಲ್ಲಿ ಎರಡು ವಾರಗಳ ಕಾಲ ತಾವು ಇದ್ದದ್ದನ್ನು, ತಾಲಿಬಾನ್ಗೆ ಹೆದರಿ ನಿರಾಶ್ರಿತರಾಗಿ ಓಡಿ ಬಂದಿದ್ದವರನ್ನು ಭೇಟಿ ಆಗಿದ್ದ ಕ್ಷಣಗಳನ್ನು ಆಕೆ ನೆನಪು ಮಾಡಿಕೊಂಡಿದ್ದಾರೆ. ಹೇಗೆ ಬದ್ಧತೆಯಿಂದ ಇತರರು ಅವರಿಗಾಗಿ ಶ್ರಮ ಪಡುತ್ತಿದ್ದಾರೋ ನಾನು ಕೂಡ ಶ್ರಮಿಸುತ್ತೇನೆ. ಮತ್ತು ನೀವು ಸಹ ನನ್ನ ಜತೆಗೆ ಸೇರಿಕೊಳ್ಳುತ್ತೀರಿ ಅಂತ ಅಂದುಕೊಳ್ಳುತ್ತೇನೆ ಎನ್ನುತ್ತಾ ತಮ್ಮ ಪೋಸ್ಟ್ ಕೊನೆಗೊಳಿಸಿದ್ದಾರೆ ಜೋಲಿ.
ಇನ್ಸ್ಟಾಗ್ರಾಮ್ಗೆ ಜೋಲಿ ಎಂಟ್ರಿ ಕೊಟ್ಟಾಗಿನಿಂದ ಹತ್ತಿರಹತ್ತಿರ 15 ಲಕ್ಷ ಲೈಕ್ಸ್ಗಳು ಬಂದಿವೆ. ಆಕೆ ಕೂಡ ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿನ ಮಹಿಳೆಯರು ಮತ್ತು ಮಕ್ಕಳ ಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಆಫ್ಘನ್ ಹೆಣ್ಣುಮಗಳ ಪೂರ್ತಿ ಪತ್ರ ಹಾಗೂ ಅದರ ಜತೆಗೆ ಕ್ಯಾಮೆರಾಗೆ ಬೆನ್ನು ತೋರಿಸಿ ನಿಂತಿರುವ ಏಳು ಮಹಿಳೆಯರ ಫೋಟೋ ಕೂಡ ಜೋಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್
(Hollywood Actress Angelina Jolie Debut In to Instagram To Support Afghan People Got 45 Lakhs Followers Within 14 hours)