ಫ್ರೆಂಚ್ ನಟ ಗ್ಯಾಸ್ಪಾರ್ಡ್ ಯುಲಿಯೋಲ್ (Gaspard Ulliel) ಅವರು ಮಂಗಳವಾರ (ಜನವರಿ 18) ನಡೆದ ಸ್ಕೀ ಅಪಘಾತದಲ್ಲಿ (Ski Accident) ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾರ್ವೆಲ್ ಸರಣಿಯ ‘ಮೂನ್ ನೈಟ್’ ಸೀರಿಸ್ನಲ್ಲಿ (Moon Knight) ಗ್ಯಾಸ್ಪಾರ್ಡ್ ಯುಲಿಯೋಲ್ ಅಭಿನಯಿಸಿದ್ದರು. ಈ ಚಿತ್ರ ಈ ವರ್ಷ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲೇ ಅವರು ಕೊನೆಯುಸಿರು ಎಳೆದಿರುವುದು ತೀವ್ರ ನೋವಿನ ಸಂಗತಿ. ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ಗ್ಯಾಸ್ಪಾರ್ಡ್ ಯುಲಿಯೋಲ್ ನಿಧನಕ್ಕೆ ಫ್ರಾನ್ಸ್ ದೇಶದವರು ಸಂತಾಪ ಸೂಚಿಸಿದ್ದಾರೆ.
ಮಂಗಳವಾರ ಫ್ರಾನ್ಸ್ನ ಸವೊಯಿ ಭಾಗದಲ್ಲಿ ಗ್ಯಾಸ್ಪಾರ್ಡ್ ಹಿಮದ ಮೇಲೆ ಸ್ಕೀಯಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಅಪಘಾತ ಸಂಭವಿಸಿದೆ. ಇಳಿಜಾರು ಪ್ರದೇಶದಲ್ಲಿ ಬಿದ್ದಿದ್ದರಿಂದ ಗ್ಯಾಸ್ಪಾರ್ಡ್ ಯುಲಿಯೋಲ್ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅವರು ಚೇತರಿಸಿಕೊಳ್ಳಲೇ ಇಲ್ಲ. ಬುಧವಾರ (ಜನವರಿ 19) ಗ್ಯಾಸ್ಪಾರ್ಡ್ ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಕುಟುಂಬದವರು ಖಚಿತಪಡಿಸಿದ್ದಾರೆ.
ಫ್ರೆಂಚ್ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಅವರು ಗ್ಯಾಸ್ಪಾರ್ಡ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ಗ್ಯಾಸ್ಪಾರ್ಡ್ ನೀವು ಸಿನಿಮಾ ಜತೆ ಬೆಳೆದಿರಿ. ಸಿನಿಮಾ ಕೂಡ ಗ್ಯಾಸ್ಪಾರ್ಡ್ ಜತೆ ಬೆಳೆಯಿತು. ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದರು. ನಾವು ಇನ್ನುಮುಂದೆ ಅವರನ್ನು ನೋಡುವುದಿಲ್ಲ. ನಾವು ಓರ್ವ ಫ್ರೆಂಚ್ ನಟನನ್ನು ಕಳೆದುಕೊಂಡಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
Shocked and saddened to hear about the death of Gaspard Ulliel at such a young age in a skiing accident. I have such fond memories of working with him all those years ago on Hannibal Rising. Rest in peace, dear friend. pic.twitter.com/U1gmxMvHJE
— Peter Webber (@PeterWebber) January 19, 2022
ಸೋಶಿಯಲ್ ಮೀಡಿಯಾದಲ್ಲಿ ಗ್ಯಾಸ್ಪಾರ್ಡ್ ಸಾವಿಗೆ ಸಂತಾಪ ಸೂಚಿಸಲಾಗುತ್ತಿದೆ. ಫಿಲ್ಮ್ ಮೇಕರ್ ಪೀಟರ್ ವೆಬ್ಬರ್, ಫ್ರೆಂಚ್ ಡೈರೆಕ್ಟರ್ ಕ್ಸೇವಿಯರ್ ಡೋಲನ್ ಸೇರಿ ಅನೇಕರು ಗ್ಯಾಸ್ಪಾರ್ಡ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.
‘ಮೂನ್ ನೈಟ್’ನಲ್ಲಿ ಗ್ಯಾಸ್ಪಾರ್ಡ್ ಅವರು ಮಿಡ್ನೈಟ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2016ರ ಕೆನಡಾ-ಫ್ರೆಂಚ್ ಸಿನಿಮಾ ‘ಇಟ್ ಈಸ್ ಓನ್ಲಿ ದಿ ಎಂಡ್ ಆಫ್ ದಿ ವರ್ಲ್ಡ್’ ಸಿನಿಮಾದಲ್ಲಿ ನಟಿಸಿದ್ದರು. ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ನಾಗ ಚೈತನ್ಯ ತುಂಬಾನೇ ಮುಗ್ಧ ಎಂದು ಹೊಗಳಿದ್ದ ಸಮಂತಾ; ವೈರಲ್ ಆಗುತ್ತಿದೆ ಹಳೆಯ ವಿಡಿಯೋ