Krrish 4: ‘ಕ್ರಿಶ್​ 4’ ಚಿತ್ರದ ಬಗ್ಗೆ ಅಪ್​ಡೇಟ್​ ನೀಡಿದ ಹೃತಿಕ್​ ರೋಷನ್​; ಅಚ್ಚರಿ ಮೂಡಿಸಿದ ಹೊಸ ಮಾಸ್ಕ್​

Hrithik Roshan:: ‘ಕ್ರಿಶ್​ 4’ ಚಿತ್ರದಲ್ಲಿ ಹೃತಿಕ್​ ರೋಷನ್​ ದ್ವಿಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸೂಪರ್​ ಹೀರೋ ಜೊತೆಗೆ ಸೂಪರ್​ ವಿಲನ್​ ಕೂಡ ಅವರೇ ಆಗಿರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Krrish 4: ‘ಕ್ರಿಶ್​ 4’ ಚಿತ್ರದ ಬಗ್ಗೆ ಅಪ್​ಡೇಟ್​ ನೀಡಿದ ಹೃತಿಕ್​ ರೋಷನ್​; ಅಚ್ಚರಿ ಮೂಡಿಸಿದ ಹೊಸ ಮಾಸ್ಕ್​
ಹೃತಿಕ್​ ರೋಷನ್​

Updated on: Jun 24, 2021 | 9:56 AM

ಭಾರತೀಯ ಸಿನಿಮಾರಂಗದಲ್ಲಿ ಸೂಪರ್​ ಹೀರೋ ಕಾನ್ಸೆಪ್ಟ್​ ಅನ್ನು ಚೆನ್ನಾಗಿ ಪರಿಚಯಿಸಿದ ಸಿನಿಮಾ ಕ್ರಿಶ್​. ಈ ಸಿನಿಮಾ ನೋಡಿ ಎಲ್ಲ ವರ್ಗದ ಪ್ರೇಕ್ಷಕರು ಫಿದಾ ಆಗಿದ್ದರು. ಬಳಿಕ ಅದರ ಸೀಕ್ವೆಲ್​ ಕೂಡ ಬಂತು. ಈಗ ‘ಕ್ರಿಶ್​ 4’ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ. ಸ್ವತಃ ಹೃತಿಕ್​ ರೋಷನ್​ ಅವರು ಒಂದು ಚಿಕ್ಕ ವಿಡಿಯೋ ತುಣುಕನ್ನು ಹಂಚಿಕೊಂಡು, ಅಭಿಮಾನಿಗಳ ಕೌತುಕ ಕೆರಳಿಸುವ ಕೆಲಸ ಮಾಡಿದ್ದಾರೆ.

ಬಹಳ ದಿನಗಳಿಂದಲೂ ‘ಕ್ರಿಶ್​ 4’ ಬಗ್ಗೆ ಸುದ್ದಿ ಕೇಳಿಬರುತ್ತಿತ್ತು. ಎಲ್ಲರೂ ಅಂದುಕೊಂಡಂತೆ ಆಗಿದ್ದರೆ 2020ರಲ್ಲಿಯೇ ಈ ಸಿನಿಮಾ ತೆರೆಕಾಣಬೇಕಿತ್ತು. ಆದರೆ ನಿರ್ದೇಶಕ, ಹೃತಿಕ್​ ರೋಷನ್​ ತಂದೆ ರಾಕೇಶ್​ ರೋಷನ್​ ಅವರು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ಆರಂಭಿಸಿದ್ದರಿಂದ ಚಿತ್ರದ ಕೆಲಸಗಳು ನಿಂತಿದ್ದವು. ಅಲ್ಲದೆ, ಲಾಕ್​ಡೌನ್​ ಮತ್ತು ಕೊರೊನಾ ವೈರಸ್​ ಕಾರಣದಿಂದಾಗಿಯೂ ವಿಳಂಬ ಆಗಿತ್ತು. ಆದರೆ ಈಗ ಕಾಲ ಕೂಡಿಬಂದಂತೆ ಕಾಣುತ್ತಿದೆ.

ರಾಕೇಶ್​ ರೋಷನ್​ ಅವರು ಚೇತರಿಸಿಕೊಂಡಿದ್ದು, ಈಗ ಅವರು ‘ಕ್ರಿಶ್​ 4’ ಕೆಲಸಗಳ ಕಡೆಗೆ ಗಮನ ಹರಿಸಿದ್ದಾರೆ ಎನ್ನಲಾಗಿದೆ. ಕ್ರಿಶ್​ ಚಿತ್ರ ತೆರೆಕಂಡು 15 ವರ್ಷ ಕಳೆದಿದೆ. ಆ ಸಲುವಾಗಿ ಸೋಶಿಯಲ್​ ಮೀಡಿಯಾದಲ್ಲಿ ಹೃತಿಕ್​ ರೋಷನ್​ ಅವರು ಒಂದು ಚಿಕ್ಕ ಟೀಸರ್ ಹಂಚಿಕೊಂಡಿದ್ದಾರೆ. ‘ಭೂತಕಾಲ ಮುಗಿಯಿತು. ಭವಿಷ್ಯ ಕಾಲ ಏನನ್ನು ತರುತ್ತದೆ ಅಂತ ನೋಡೋಣ. ಕ್ರಿಶ್​ 4’ ಎಂಬ ಕ್ಯಾಪ್ಷನ್​ ಜೊತೆಗೆ ಅವರು ಟೀಸರ್​ ಹಂಚಿಕೊಂಡಿದ್ದಾರೆ.

ಈ ಟೀಸರ್​ನಲ್ಲಿ ಹೃತಿಕ್​ ರೋಷನ್​ ಅವರು ಮಾಸ್ಕ್​ ಕಿತ್ತು ಎಸೆಯುವ ದೃಶ್ಯ ಇದೆ. ಅಲ್ಲದೆ, ಇಷ್ಟು ವರ್ಷಗಳ ಕಾಲ ಕಾಣಿಸಿಕೊಂಡಿದ್ದ ಕಪ್ಪು ಮಾಸ್ಕ್​ ಬದಲಿಗೆ ನೀಲಿ ಬಣ್ಣದ ಮಾಸ್ಕ್​ ಬಳಸಲಾಗಿದೆ. ಈ ಟ್ವಿಸ್ಟ್​ ಏನು ಎಂಬ ಕುತೂಹಲ ಈಗ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಅಲ್ಲದೆ, ಬಿಟೌನ್​ ಅಂಗಳದಲ್ಲಿ ಹಲವು ಗುಸುಗುಸು ಕೂಡ ಕೇಳಿಬರುತ್ತಿದೆ. ‘ಕ್ರಿಶ್​ 4’ ಚಿತ್ರದಲ್ಲಿ ಹೃತಿಕ್​ ರೋಷನ್​ ದ್ವಿಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸೂಪರ್​ ಹೀರೋ ಜೊತೆಗೆ ಸೂಪರ್​ ವಿಲನ್​ ಕೂಡ ಅವರೇ ಆಗಿರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ:

ಹೃತಿಕ್​ ಜತೆ ಕೈ ಜೋಡಿಸಲಿದ್ದಾರೆ ದಕ್ಷಿಣ ಭಾರತದ ಹೀರೋ: 150 ಕೋಟಿ ದಾಟಲಿದೆ ಸಿನಿಮಾ ಬಜೆಟ್​!

ಹೃತಿಕ್​ ಜೊತೆ ರೊಮ್ಯಾನ್ಸ್​ ಮಾಡಲಿದ್ದಾರೆ ದೀಪಿಕಾ ಪಡುಕೋಣೆ: ಈ ಚಿತ್ರಕ್ಕೆ ನಿರ್ದೇಶಕರಾರು ಗೊತ್ತಾ?

Published On - 9:55 am, Thu, 24 June 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us