
ದಳಪತಿ ವಿಜಯ್ (Thalapathy Vijay) ತಮ್ಮ ಕೊನೆಯ ಸಿನಿಮಾಕ್ಕೆ ‘ಜನ ನಾಯಗನ್’ ಎಂದು ಹೆಸರಿಟ್ಟಿದ್ದಾರೆ. ವಿಜಯ್ ರಾಜಕೀಯಕ್ಕೆ ಪ್ರವೇಶಿಸಿದ್ದು, ಸಿನಿಮಾ ಅನ್ನು ತಮ್ಮ ರಾಜಕೀಯ ಅಜೆಂಡಕ್ಕೆ ಪ್ರಚಾರ ಕೊಡಲು ಟೂಲ್ ಆಗಿ ಬಳಸುತ್ತಿದ್ದಾರೆ. ವಿಪರ್ಯಾಸವೆಂದರೆ ‘ಜನ ನಾಯಗನ್’ (ಜನ ನಾಯಕ) ಎಂದು ಹೆಸರಿಟ್ಟುಕೊಂಡು ಬೆಂಗಳೂರಿನ ಸಿನಿಮಾ ಪ್ರೇಮಿಗಳ ಲೂಟಿಗೆ ಇಳಿದಿದ್ದಾರೆ ನಟ ವಿಜಯ್ ಮತ್ತು ‘ಜನ ನಾಯಗನ್’ ಚಿತ್ರತಂಡ. ಹೇಗದು? ವಿವರ ಇಲ್ಲಿದೆ ನೋಡಿ…
‘ಜನ ನಾಯಗನ್’ ತಮಿಳು (ಕನ್ನಡ ಡಬ್ ಇಲ್ಲ) ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಜನವರಿ 09ರ ಬೆಳಿಗ್ಗೆ 6:30ಕ್ಕೆ ವಿಶೇಷ ಶೋ ಪ್ರದರ್ಶನವಾಗುತ್ತಿದ್ದು, ಬೆಂಗಳೂರಿನಲ್ಲೂ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಬೆಂಗಳೂರಿನಲ್ಲಿ ಪ್ರತಿ ಟಿಕೆಟ್ ದರ 1000 ರೂಪಾಯಿಗಳಿಗೂ ಹೆಚ್ಚಿದೆ. ಪ್ರಸ್ತುತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರವೇ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಸಿಂಗಲ್ ಸ್ಕ್ರೀನ್ಗಳಲ್ಲಿಯೇ ಟಿಕೆಟ್ ದರ 800 ರಿಂದ ಪ್ರಾರಂಭವಾಗುತ್ತಿದ್ದು, ಕೆಲವೆಡೆ 1200 ರೂಪಾಯಿಗಳು ಸಹ ನಿಗದಿಪಡಿಸಲಾಗಿದೆ.
ಮಧ್ಯಮ ವರ್ಗದ ಚಿತ್ರಮಂದಿರಗಳು ಎನಿಸಿಕೊಂಡಿದ್ದ ವೀರೇಶ್, ನವರಂಗ ಅಂಥಹಾ ಚಿತ್ರಮಂದಿರಗಳಲ್ಲಿಯೂ ಸಹ ‘ಜನ ನಾಯಗನ್’ ಸಿನಿಮಾದ ಟಿಕೆಟ್ನ ಆರಂಭಿಕ ದರವೇ 800 ರೂಪಾಯಿಗಳಿವೆ. ಬಾಲ್ಕನಿ ಟಿಕೆಟ್ ದರ 1000 ರೂಪಾಯಿಗಳಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಮುಂಗಡ ಬುಕಿಂಗ್ ಇನ್ನೂ ಆರಂಭ ಆಗಿಲ್ಲ, ಸಿಂಗಲ್ ಸ್ಕ್ರೀನ್ಗಳಲ್ಲಿಯೇ 1000 ರೂಪಾಯಿ ಇರುವ ಟಿಕೆಟ್ ದರ ಮಲ್ಟಿಪ್ಲೆಕ್ಸ್ಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆ ಇದೆ. ಒಟ್ಟಾರೆ, ವಿಜಯ್, ಬೆಂಗಳೂರಿನ ಸಿನಿಮಾ ಪ್ರೇಮಿಗಳನ್ನು ದೋಚಲೆಂದೇ ಬಂದಂತಿದೆ.
ಇದನ್ನೂ ಓದಿ:ಕರೂರು ಘಟನೆಯಿಂದ ‘ಜನ ನಾಯಗನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್ಡೇಟ್
ಲೂಟಿಗೆ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಂತಿದೆ ‘ಜನ ನಾಯಗನ್’ ಚಿತ್ರತಂಡ, ಏಕೆಂದರೆ ಈ ಮುಂಗಡ ಬುಕಿಂಗ್, ವಿಶೇಷ ಶೋ ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ. ಚೆನ್ನೈ, ಹೈದರಾಬಾದ್ನಲ್ಲಿ ಇನ್ನೂ ಮುಂಗಡ ಬುಕಿಂಗ್ ಆರಂಭವೇ ಆಗಿಲ್ಲ. ಆರಂಭ ಆದರೂ ಸಹ ಚೆನ್ನೈನಲ್ಲಿ ತೀರ ಹೆಚ್ಚೆಂದರೆ 300 ರೂಪಾಯಿ ವಿಶೇಷ ಶೋಗೆ ಹಾಗೂ 100 ರೂಪಾಯಿ ಸಾಮಾನ್ಯ ಶೋಗೆ ಬೆಲೆ ಇರಲಿದೆ. ವಿಜಯ್ ಅವರ ಈ ಹಿಂದಿನ ಸಿನಿಮಾಗಳಿಗೆ ಚೆನ್ನೈನಲ್ಲಿ ಇಷ್ಟೆ ಟಿಕೆಟ್ ಬೆಲೆ ಇತ್ತು. ಹೈದರಾಬಾದ್ನಲ್ಲಿಯೂ ಸಹ ಇದೇ ಪರಿಸ್ಥಿತಿ ಇರಲಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
‘ಜನ ನಾಯಗನ್’ ವಿಜಯ್ ಅವರ ಕೊನೆಯ ಸಿನಿಮಾ ಆಗಿರಲಿದೆ. ರಾಜಕೀಯ ಪಕ್ಷ ಕಟ್ಟಿರುವ ವಿಜಯ್, ‘ಜನ ನಾಯಗನ್’ ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ್ ಕೇಸರಿ’ ಸಿನಿಮಾದ ರೀಮೇಕ್ ಎನ್ನಲಾಗುತ್ತಿದ್ದು, ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ, ಮಲಯಾಳಂ ನಟಿ ಮಮಿತಾ ಬಿಜು ಸಹ ನಟಿಸಿದ್ದಾರೆ. ಬಾಬಿ ಡಿಯೋಲ್ ವಿಲನ್. ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್. ಕನ್ನಡದ ‘ಸಖತ್’, ‘ಬೈ ಟು ಲವ್’ ಸಿನಿಮಾಗಳನ್ನು ನಿರ್ಮಿಸಿರುವ ಕೆವಿಎನ್, ಪ್ರಸ್ತುತ ‘ಟಾಕ್ಸಿಕ್’, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Wed, 31 December 25