‘ಜನ ನಾಯಗನ್’ ಸಿನಿಮಾ ಸೋರಿಕೆ: ಮೂವರ ಬಂಧನ

Jana Nayagan movie: ವಿಜಯ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಮುನ್ನವೇ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ. ಈ ಕುರಿತು ಈಗಾಗಲೇ ದೂರು ದಾಖಲಾಗಿದ್ದು, ತಮಿಳುನಾಡು ಸೈಬರ್ ಕ್ರೈಮ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ತಾತ್ಕಾಲಿಕ ನೌಕರನೊಬ್ಬನಿಂದಾಗಿ ‘ಜನ ನಾಯಗನ್’ ಸಿನಿಮಾ ಸೋರಿಕೆ ಆಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

‘ಜನ ನಾಯಗನ್’ ಸಿನಿಮಾ ಸೋರಿಕೆ: ಮೂವರ ಬಂಧನ
ಜನ ನಾಯಗನ್

Updated on: Apr 16, 2026 | 6:47 PM

ನಟ ಮತ್ತು ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಸಂಸ್ಥಾಪಕ ವಿಜಯ್ (Thalapaty Vijay) ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಮುನ್ನವೇ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ. ಈ ಕುರಿತು ಈಗಾಗಲೇ ದೂರು ದಾಖಲಾಗಿದ್ದು, ತಮಿಳುನಾಡು ಸೈಬರ್ ಕ್ರೈಮ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ತಾತ್ಕಾಲಿಕ ನೌಕರನೊಬ್ಬನಿಂದಾಗಿ ‘ಜನ ನಾಯಗನ್’ ಸಿನಿಮಾ ಸೋರಿಕೆ ಆಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬುಧವಾರ (ಏಪ್ರಿಲ್ 15) ಈ ಪ್ರಕರಣದ ಮುಖ್ಯ ಆರೋಪಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಏಪ್ರಿಲ್ 9 ರಂದು ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಮತ್ತು ನಂತರ ಪೂರ್ಣ ಎಚ್‌ಡಿ (HD) ಆವೃತ್ತಿಯು ಪೈರಸಿ ಸೈಟ್‌ಗಳಲ್ಲಿ ಕಾಣಿಸಿಕೊಂಡಿತ್ತು. ಇದು ಚಿತ್ರತಂಡ ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಡಿಟಿಂಗ್ ಸ್ಟುಡಿಯೋದಿಂದ ಸಿನಿಮಾ ಲೀಕ್ ಆಗಿದ್ದು, ಸ್ಟುಡಿಯೋನಲ್ಲಿ ಬೇರೆ ಸಿನಿಮಾಕ್ಕೆ ಕೆಲಸ ಮಾಡಲು ಬಂದಿದ್ದ ತಾತ್ಕಾಲಿಕ ನೌಕರನೊಬ್ಬ ‘ಜನ ನಾಯಗನ್’ ಸಿನಿಮಾವನ್ನು ಅಲ್ಲಿನ ಕಂಪ್ಯೂಟರ್​​ಗಳಿಂದ ಡೌನ್​​ಲೋಡ್ ಮಾಡಿಕೊಂಡು ಆ ಬಳಿಕ ಬಿಡುಗಡೆ ಮಾಡಿದ್ದಾನೆ. ಇದೀಗ ಪೊಲೀಸರು ಆತನನ್ನೂ ಸೇರಿದಂತೆ ಆತನಿಗೆ ಸಹಕಾರ ನೀಡಿದ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಮಾತ್ರವಲ್ಲದೆ ಪೊಲೀಸರು ಈವರೆಗೆ 300ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಿದ್ದಾರೆ. ಕ್ಲೌಡ್ ಸ್ಟೋರೇಜ್ ಮತ್ತು ಡ್ರೈವ್ ಲಿಂಕ್‌ಗಳ ಮೂಲಕ ಚಿತ್ರವನ್ನು ಹಂಚುತ್ತಿದ್ದವರನ್ನು ಪತ್ತೆಹಚ್ಚಲು ಡಿಜಿಟಲ್ ವಿಧಿವಿಜ್ಞಾನದ ನೆರವು ಪಡೆಯಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಆಶಾ ಭೋಸ್ಲೆಗೆ ಸುಮಲತಾ-ವಿಜಯ್ ಪ್ರಕಾಶ್ ವಿಶೇಷ ಗೌರವ

‘ಜನ ನಾಯಗನ್’ ಸಿನಿಮಾ ಜನವರಿ 9 ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಸೆನ್ಸಾರ್ ಪ್ರಮಾಣಪತ್ರ ನೀಡಲು ವಿಳಂಬ ಮಾಡಿತು. ಚಿತ್ರದಲ್ಲಿನ ಕೆಲವು ರಾಜಕೀಯ ಮತ್ತು ಧಾರ್ಮಿಕ ಅಂಶಗಳು ಸಮಾಜದಲ್ಲಿ ಅಶಾಂತಿ ಮೂಡಿಸಬಹುದು ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಈ ವಿಷಯವನ್ನು ರಿವೈಸಿಂಗ್ ಕಮಿಟಿಗೆ ವರ್ಗಾಯಿಸಿತ್ತು. ಆದರೆ ಈ ವರೆಗೆ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಿಲ್ಲ.

ವಿಜಯ್ ಅವರ ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಈ ವಿಳಂಬದ ಹಿಂದೆ ರಾಜಕೀಯ ಹಸ್ತಕ್ಷೇಪವಿದೆ ಎಂದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಅನೇಕ ನಟರು ಪೈರಸಿ ಮತ್ತು ಸೆನ್ಸಾರ್ ವಿಳಂಬವನ್ನು ಖಂಡಿಸಿದ್ದಾರೆ. ಸಿಬಿಎಫ್​​ಸಿಯಿಂದಲೇ ಸಿನಿಮಾ ಲೀಕ್ ಆಗಿದೆ ಎಂದು ಸಹ ಆರೋಪಿಸಲಾಗಿತ್ತು. ಆದರೆ ತನಿಖೆಯಿಂದ ಇದೀಗ ಸಿಬಿಎಫ್​​ಸಿಯಿಂದ ಲೀಕ್ ಆಗಿಲ್ಲ ಎಂಬುದು ಪತ್ತೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us