ಕಂಗನಾ ರಣಾವತ್ ಅವರಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಅವರು ನಟನೆ ಜತೆಗೆ ಆಗಾಗ ವಿವಾದದ ಮೂಲಕವೂ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಪಾಸ್ಪೋರ್ಟ್ ನವೀಕರಿಸಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಕಂಗನಾ ಕಳೆದ ವರ್ಷ ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಇವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ದೂರನ್ನು ಪರಿಶೀಲಿಸಿದ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಸೆಪ್ಟೆಂಬರ್ 15ರಂದು ಕಂಗನಾ ಅವರ ಪಾಸ್ಪೋರ್ಟ್ ಅವಧಿ ಪೂರ್ಣಗೊಳ್ಳುತ್ತಿದೆ. ಹೀಗಾಗಿ, ಅದನ್ನು ನವೀಕರಿಸಲು ಕಂಗನಾ ತೆರಳಿದ್ದರು. ಆದರೆ, ಕಂಗನಾ ವಿರುದ್ಧ ಎಫ್ಐಆರ್ ದಾಖಲಾಗಿರುವುದರಿಂದ ಪಾಸ್ಪೋರ್ಟ್ ನವೀಕರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಂಗನಾ ಎಷ್ಟೇ ಮನವಿ ಮಾಡಿಕೊಂಡರೂ ಈ ಮನವಿಗೆ ಅಧಿಕಾರಿಗಳು ಒಪ್ಪಿಲ್ಲ. ಈ ಕಾರಣಕ್ಕೆ ಕಂಗನಾ ಬಾಂಬೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಂಗನಾ ಸಿನಿಮಾ ಶೂಟಿಂಗ್ಗಾಗಿ ಆಗಸ್ಟ್ 30ರವರೆಗೆ ಹಂಗೇರಿಯಲ್ಲೇ ಇರಬೇಕಾಗುತ್ತದೆ. ಈ ಸಿನಿಮಾಗಾಗಿ ನಿರ್ಮಾಪಕರು ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಇಡೀ ಚಿತ್ರತಂಡ ಅಲ್ಲಿಗೆ ತೆರಳುತ್ತಿರುವುದರಿಂದ ಮೊದಲೇ ಎಲ್ಲವೂ ಬುಕ್ ಆಗಿದೆ. ಶೂಟಿಂಗ್ ವಿಸ್ತರಣೆ ಕೂಡ ಆಗಬಹುದು. ಹೀಗಾಗಿ, ಪಾಸ್ಪೋರ್ಟ್ ರಿನಿವಲ್ ಆಗಲೇಬೇಕಿದೆ. ದಯವಿಟ್ಟು ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಬೇಕು ಎಂದು ಕಂಗನಾ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇತ್ತೀಚೆಗೆ ಲಾಕ್ಡೌನ್ನಿಂದ ಅನುಭವಿಸುತ್ತಿರುವ ಕಷ್ಟದ ಬಗ್ಗೆ ಕಂಗನಾ ಹೇಳಿಕೊಂಡಿದ್ದರು, ‘ನನ್ನ ಒಟ್ಟು ಆದಾಯದಲ್ಲಿ ಶೇ.45 ತೆರಿಗೆ ಪಾವತಿ ಮಾಡುತ್ತೇನೆ. ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ನಟಿ ನಾನು. ಆದರೆ, ಕೆಲಸ ಇಲ್ಲದೆ, ಕಳೆದ ವರ್ಷದ ಅರ್ಧದಷ್ಟು ತೆರಿಗೆಯನ್ನು ಮಾತ್ರ ಪಾವತಿ ಮಾಡಿದ್ದೇನೆ. ಹೀಗಾಗಿದ್ದು ನನ್ನ ಜೀವನದಲ್ಲಿ ಇದೆ ಮೊದಲು’ ಎಂದು ಕಂಗನಾ ಬಣ್ಣಿಸಿದ್ದರು.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್; ತೆರಿಗೆ ಕಟ್ಟಲೂ ಆಗದೆ ಒದ್ದಾಡುತ್ತಿದ್ದಾರೆ ಕಂಗನಾ ರಣಾವತ್; ಅಳಲು ತೋಡಿಕೊಂಡ ನಟಿ