
ಒಂದೇ ಹೆಸರಿನಲ್ಲಿ ಎರಡು ಸಿನಿಮಾ ತಯಾರಾದರೆ ಪ್ರೇಕ್ಷಕರಲ್ಲಿ ಗೊಂದಲ ಉಂಟಾಗುತ್ತದೆ. ಆ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದರಂತೂ ಗೊಂದಲ ಮತ್ತಷ್ಟು ಹೆಚ್ಚಾಗುತ್ತದೆ. ತಮಿಳಿನ ‘ಜೈಲರ್’ (Jailer Movie) ಮತ್ತು ಮಲಯಾಳಂ ಭಾಷೆಯ ‘ಜೈಲರ್’ ಸಿನಿಮಾಗಳ ನಡುವೆ ಅಂಥದ್ದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಎರಡೂ ಸಿನಿಮಾಗಳು ಒಂದೇ ದಿನಾಂಕದಲ್ಲಿ ಬಿಡುಗಡೆ ಆಗಲು ತಯಾರಾಗಿದ್ದವು. ಆದರೆ ಕೊನೇ ಕ್ಷಣದಲ್ಲಿ ಈ ಕ್ಲ್ಯಾಶ್ ತಪ್ಪಿದೆ. ರಜನಿಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾದ ಅಬ್ಬರಕ್ಕೆ ಮಲಯಾಳಂ ಭಾಷೆಯ ‘ಜೈಲರ್’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಆ ಮೂಲಕ ಪ್ರೇಕ್ಷಕರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಮೊದಲಿನ ಪ್ಲ್ಯಾನ್ ಪ್ರಕಾರವೇ ರಜನಿಕಾಂತ್ ಅವರ ಸಿನಿಮಾ ಆಗಸ್ಟ್ 10ರಂದು ಅದ್ದೂರಿಯಾಗಿ ತೆರೆ ಕಾಣಲಿದೆ.
ಮಲಯಾಳಂನ ‘ಜೈಲರ್’ ಸಿನಿಮಾಗೆ ಸಕ್ಕಿರ್ ಮದಥಿಲ್ ನಿರ್ದೇಶನ ಮಾಡಿದ್ದಾರೆ. ಇತ್ತ, ತಮಿಳಿನ ‘ಜೈಲರ್’ ಸಿನಿಮಾವನ್ನು ನೆಲ್ಸನ್ ನಿರ್ದೇಶಿಸಿದ್ದಾರೆ. ಎರಡರಲ್ಲಿ ಒಂದು ಸಿನಿಮಾದ ಟೈಟಲ್ ಬದಲಾಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಮಲಯಾಳಂ ಭಾಷೆಯ ‘ಜೈಲರ್’ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿದ್ದರಿಂದ ಪ್ರೇಕ್ಷಕರ ಗೊಂದಲ ನಿವಾರಣೆ ಆಗಿದೆ. ಸದ್ಯಕ್ಕೆ ಟೈಟಲ್ ವಿವಾದ ತಣ್ಣಗಾಗಿದೆ.
ಇದನ್ನೂ ಓದಿ: ‘ಜೈಲರ್’ ಬಿಡುಗಡೆ ಪ್ರಯುಕ್ತ ಆ.10ರಂದು ರಜೆ ಘೋಷಿಸಿದ ಖಾಸಗಿ ಕಂಪನಿಗಳು; ಅಬ್ಬಬ್ಬಾ ಇದು ರಜನಿಕಾಂತ್ ಹವಾ
ಟೈಟಲ್ ಬದಲಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಸಿನಿಮಾ ತಂಡಗಳು ಕೋರ್ಟ್ ಮೆಟ್ಟಿಲು ಏರಿವೆ. ರಜನಿಕಾಂತ್ ಅವರ ಸಿನಿಮಾಗೆ ಹೋಲಿಸಿದರೆ ಮಲಯಾಳಂನ ‘ಜೈಲರ್’ ಸಿನಿಮಾದ ಬಜೆಟ್ ಬಹಳ ಚಿಕ್ಕದ್ದು. ಹಾಗಿದ್ದರೂ ಕೂಡ ಒಂದೇ ಶೀರ್ಷಿಕೆಯ 2 ಸಿನಿಮಾಗಳು ಒಂದೇ ದಿನ ರಿಲೀಸ್ ಆಗುವುದು ಉತ್ತಮ ಬೆಳವಣಿಗೆ ಅಲ್ಲ. ಹಾಗಾಗಿ ಈ ಚಿತ್ರಗಳ ನಡುವಿನ ಪೈಪೋಟಿಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಈಗ ರಜನಿಕಾಂತ್ ಅವರ ಚಿತ್ರಕ್ಕೆ ಮಲಯಾಳಂ ಭಾಷೆಯ ‘ಜೈಲರ್’ ಸಿನಿಮಾ ದಾರಿ ಮಾಡಿಕೊಟ್ಟಿದೆ.
ಕಾಲಿವುಡ್ನ ‘ಜೈಲರ್’ ಚಿತ್ರವು ಕನ್ನಡ, ತಮಿಳು, ಮಲಯಾಳಂ, ಹಿಂದಿ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಜನಿಕಾಂತ್ ಮಾತ್ರವಲ್ಲದೇ ಜಾಕಿ ಶ್ರಾಫ್, ಶಿವರಾಜ್ಕುಮಾರ್, ಮೋಹನ್ಲಾಲ್ ಮುಂತಾದವರು ನಟಿಸಿದ್ದಾರೆ. ಆ ಕಾರಣದಿಂದ ಹೆಚ್ಚು ಹೈಪ್ ಕ್ರಿಯೇಟ್ ಆಗಿದೆ. ಈಗಾಗಲೇ ಬುಕಿಂಗ್ ಓಪನ್ ಆಗಿದ್ದು, ಅನೇಕ ಕಡೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸುವ ಸಾಧ್ಯತೆ ದಟ್ಟವಾಗಿದೆ. ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ ‘ಕಾವಾಲಾ..’ ಹಾಡು ಸೂಪರ್ ಹಿಟ್ ಆಗಿದ್ದು ಕೂಡ ‘ಜೈಲರ್’ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.