6 ವರ್ಷಗಳ ಪ್ರೀತಿ ಬಳಿಕ ಮದುವೆ: ವಿವಾಹವಾದ ಒಂದೂವರೆ ತಿಂಗಳಿಗೆ ನಿರ್ದೇಶಕ ನಿಧನ

ಮಲಯಾಳಂ ಸಿನಿಮಾ ನಿರ್ದೇಶಕ ಬೆಲ್‌ರಾಜ್ ಕಳರಿಕಲ್ ಅವರ ಮೃತದೇಹವು ಕೊಚ್ಚಿಯ ಹೋಟೆಲ್‌ನಲ್ಲಿ ಪತ್ತೆಯಾಗಿದೆ. ಕೇವಲ 2 ತಿಂಗಳ ಹಿಂದೆ ಅವರ ಮದುವೆ ನಡೆದಿತ್ತು. 6 ವರ್ಷಗಳ ಕಾಲ ಪ್ರೀತಿಸಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರು ನಿರ್ದೇಶಿಸಿದ್ದ ವೆಬ್ ಸಿರೀಸ್ ಕೆಲವೇ ದಿನಗಳ ಹಿಂದೆ ರಿಲೀಸ್ ಆಗಿತ್ತು.

6 ವರ್ಷಗಳ ಪ್ರೀತಿ ಬಳಿಕ ಮದುವೆ: ವಿವಾಹವಾದ ಒಂದೂವರೆ ತಿಂಗಳಿಗೆ ನಿರ್ದೇಶಕ ನಿಧನ
Belraj Kalarickal
Image Credit source: Instagram/belraj_kalarickal

Updated on: Oct 18, 2026 | 10:20 AM

ಮಲಯಾಳಂ ಚಿತ್ರರಂಗದಲ್ಲಿ ಉದಯೋನ್ಮುಖ ನಿರ್ದೇಶಕರಾಗಿದ್ದ ಬೆಲ್‌ರಾಜ್ ಕಳರಿಕಲ್ ಅವರು ಕೊಚ್ಚಿಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿಯಾಗಿದ್ದಾರೆ. ಶನಿವಾರ (ಅಕ್ಟೋಬರ್ 17) ಈ ಘಟನೆ ನಡೆದಿದೆ. ಬೆಲ್‌ರಾಜ್ ಕಳರಿಕಲ್ ಅವರಿಗೆ 28 ವರ್ಷ ವಯಸ್ಸಾಗಿತ್ತು. ಅವರ ನಿಧನದಿಂದ ಇಡೀ ಚಿತ್ರರಂಗ ಆಘಾತಕ್ಕೊಳಗಾಗಿದೆ. ಅವರ ಸ್ವತಂತ್ರ ನಿರ್ದೇಶನದ ಮೊದಲ ವೆಬ್ ಸಿರೀಸ್ ‘ಕಾಪಿ ಸ್ಕ್ವಾಡ್’ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ದುರಂತ ಸಂಭವಿಸಿದೆ.

ಬೆಲ್‌ರಾಜ್ ಕಳರಿಕಲ್ ಅವರ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೂ ಕೂಡ ಆರಂಭಿಕ ತನಿಖೆ ಹಾಗೂ ವರದಿಗಳ ಪ್ರಕಾರ ಅವರು ಹೃದಯಾಘಾತದಿಂದ ನಿಧನರಾಗಿರಬಹುದು ಎಂದು ಶಂಕಿಸಲಾಗಿದೆ. ಅವರ ಮೃತದೇಹವನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Loading...

ಬೆಲ್‌ರಾಜ್ ಕಳರಿಕಲ್ ಅವರು ‘ಒಟ್ಟಮುರಿ ವೆಲಿಚಂ’, ‘ಕೇರಳ ಕ್ರೈಮ್ ಫೈಲ್ಸ್’ ಮುಂತಾದ ಪ್ರಾಜೆಕ್ಟ್​ಗಳಿಂದ ಹೆಸರುವಾಸಿಯಾದ ‘ಫಸ್ಟ್ ಪ್ರಿಂಟ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಸ್ವತಂತ್ರ ನಿರ್ದೇಶಕರಾಗುವ ಮೊದಲು ಅವರು ‘ನಿಳಲ್’, ‘ಮಧುರಂ’, ‘ಡಾಕಿನಿ’ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಕಾಪಿ ಸ್ಕ್ವಾಡ್’ ವೆಬ್ ಸೀರೀಸ್ ಬೆಲ್‌ರಾಜ್ ಕಳರಿಕಲ್ ಅವರ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲಾಗಿತ್ತು. ಯುವ ನಿರ್ದೇಶಕನ ಅಕಾಲಿಕ ಮರಣಕ್ಕೆ ಮಲಯಾಳಂ ಚಿತ್ರರಂಗದ ತಾರೆಯರು, ತಾಂತ್ರಿಕ ವರ್ಗದವರು ಹಾಗೂ ಜಿಯೋ ಹಾಟ್‌ಸ್ಟಾರ್ ಸಂಸ್ಥೆಯು ಕಂಬನಿ ಮಿಡಿದಿದೆ.

ಇದನ್ನೂ ಓದಿ: ‘ಅಮೃತವರ್ಷಿಣಿ’, ‘ಕೋಟಿಗೊಬ್ಬ’ ಮ್ಯೂಸಿಕ್ ಡೈರೆಕ್ಟರ್ ದೇವಾ ನಿಧನ

ವೃತ್ತಿಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿದ್ದ ಬೆಲ್‌ರಾಜ್ ಕಳರಿಕಲ್ ಅವರು ಸುದೀರ್ಘ 6 ವರ್ಷಗಳ ಪ್ರೀತಿಯ ನಂತರ ಸೆಪ್ಟೆಂಬರ್ 11ರಂದು ಆಥಿರಾ ಬಿಂದು ಸಾಬು ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾಗಿ ಕೇವಲ ಒಂದೂವರೆ ತಿಂಗಳು ಕಳೆಯುವುದರೊಳಗಾಗಿ ಈ ದುರಂತ ಸಂಭವಿಸಿದ್ದು, ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಆಘಾತಕ್ಕೀಡುಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us