ಕೆಲವು ದಿನಗಳ ಹಿಂದಷ್ಟೆ ತೆಲುಗು ಯೂಟ್ಯೂಬರ್ ಒಬ್ಬ ತನ್ನ ವಿಡಿಯೋನಲ್ಲಿ ತಂದೆ-ಮಗಳ ಸಂಬಂಧದ ಬಗ್ಗೆ ಅಶ್ಲೀಲ ಮಾತುಗಳನ್ನಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಟಾಲಿವುಡ್ನ ಹಲವು ನಟ-ನಟಿಯರು ಈ ವಿಡಿಯೋದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನಟ, ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಸಹ ಈ ವಿಡಿಯೋಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಮಂಚು ವಿಷ್ಣು, ಎಲ್ಲ ಕಂಟೆಂಟ್ ಕ್ರಿಯೇಟರ್, ಯೂಟ್ಯೂಬರ್ಗಳಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಯಾವುದೇ ನಟ ಅಥವಾ ನಟಿಯರ ವಿಡಿಯೋ, ಚಿತ್ರಗಳನ್ನು ಬಳಸಿ ಅಸಹ್ಯಕರ ಮೀಮ್ಗಳು, ಟ್ರೋಲ್ ಗಳು, ವಿಡಿಯೋಗಳನ್ನು ಮಾಡುತ್ತಿರುವುದನ್ನು ವಿರೋಧಿಸಿರುವ ಮಂಚು ವಿಷ್ಣು, ಆ ಎಲ್ಲ ವಿಡಿಯೋಗಳು, ಮೀಮ್ಗಳನ್ನು ಎರಡು ದಿನದ ಒಳಗಾಗಿ ಡಿಲೀಟ್ ಮಾಡಬೇಕು ಇಲ್ಲವಾದರೆ ಕಲಾವಿದರ ಸಂಘ (ಮಾ) ವತಿಯಿಂದ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ’ ಎಂದಿದ್ದಾರೆ. ಹಲವು ನಟ-ನಟಿಯರು, ಮೀಮ್, ಟ್ರೋಲ್ ಇತರೆ ವಿಡಿಯೋಗಳಿಗೆ ತಮ್ಮ ಚಿತ್ರ, ವಿಡಿಯೋಗಳನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಸಹ ವಿಡಿಯೋನಲ್ಲಿ ಮಂಚು ವಿಷ್ಣು ಹೇಳಿದ್ದಾರೆ.
ಅಸಲಿಗೆ ಮಂಚು ವಿಷ್ಣು ಬಗ್ಗೆಯೂ ಸಹ ಹಲವು ಟ್ರೋಲ್ಗಳಿವೆ. ಅವರು ಈ ಹಿಂದೆ ಮಾಧ್ಯಮಗಳ ಬಳಿ ಮಾತನಾಡುತ್ತಾ ಆಡಿರುವ ಮಾತುಗಳನ್ನೇ ಇಟ್ಟುಕೊಂಡು ಟ್ರೋಲ್ ವಿಡಿಯೋಗಳನ್ನು ಮಾಡಲಾಗಿದೆ. ಇತ್ತೀಚೆಗೆ ಬಿಡುಗಡೆ ಆದ ‘ಕಣ್ಣಪ್ಪ’ ಸಿನಿಮಾದ ಟ್ರೈಲರ್ನ ಕೆಲ ದೃಶ್ಯಗಳನ್ನು ತೆಗೆದುಕೊಂಡು ಸಹ ಟ್ರೋಲ್ ವಿಡಿಯೋಗಳನ್ನು ಮಾಡಲಾಗಿದೆ. ಅಸಲಿಗೆ ಟಾಲಿವುಡ್ನಲ್ಲಿ ಅತಿಯಾಗಿ ಟ್ರೋಲ್ ಆಗುವ ನಟರಲ್ಲಿ ಮಂಚು ವಿಷ್ಣು ಪ್ರಮುಖರು. ಹಾಗಾಗಿಯೇ ಮಂಚು ವಿಷ್ಣು ಈಗ ಕಂಟೆಂಟ್ ಕ್ರಿಯೇಟರ್ಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ರೇವ್ ಪಾರ್ಟಿ: ನಟಿ ಹೇಮಾ ಬೆಂಬಲಕ್ಕೆ ನಟ ಮಂಚು ವಿಷ್ಣು ಮತ್ತು ಕಲಾವಿದರ ಸಂಘ
ವಿಡಿಯೋನಲ್ಲಿ ಹಿರಿಯ ನಟ ಬ್ರಹ್ಮಾನಂದಂ ಅವರ ಬಗ್ಗೆಯೂ ಮಾತನಾಡಿರುವ ಮಂಚು ವಿಷ್ಣು, ಬ್ರಹ್ಮಾನಂದಂ ಅವರ ಚಿತ್ರಗಳನ್ನು ಬಳಸಿ ಹಲವು ಮೀಮ್ಗಳನ್ನು ಮಾಡಲಾಗುತ್ತಿದೆ. ಅವರಿಗೆ ಇದು ಇಷ್ಟವಿಲ್ಲ. ಈ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ನಟ-ನಟಿಯರು ಈ ಮೀಮ್, ಟ್ರೋಲ್ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ಕೂಡಲೇ ಆ ವಿಡಿಯೋಗಳನ್ನು, ಚಿತ್ರಗಳನ್ನು ಡಿಲೀಟ್ ಮಾಡಿ, ಇಲ್ಲವಾದರೆ ಕಾನೂನು ಕ್ರಮ ಎದುರಿಸಿ ಎಂದಿದ್ದಾರೆ ಮಂಚು ವಿಷ್ಣು.
ತಂದೆ-ಮಗಳ ಸಂಬಂಧದ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ಯೂಟ್ಯೂಬರ್ ವಿರುದ್ಧ ಹಲವು ದೂರುಗಳು ತೆಲಂಗಾಣದಲ್ಲಿ ದಾಖಲಾಗಿದ್ದವು. ಕೊನೆಗೆ ತೆಲಂಗಾಣ ಸೈಬರ್ ವಿಭಾಗದ ಪೊಲೀಸರು ಯೂಟ್ಯೂಬರ್ ಪ್ರಣೀತ್ ಹನುಮಂತು ಅನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆ ಪ್ರಕರಣದ ಬಳಿಕ ಕಂಟೆಂಟ್ ಕ್ರಿಯೇಟರ್ಗಳ ಅಶ್ಲೀಲ ಕಂಟೆಂಟ್ಗಳ ಬಗ್ಗೆ ತೀವ್ರ ಆಕ್ರೋಶ ಸ್ಪೋಟಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ