ತೆಲುಗು ಸರ್ಕಾರಗಳ ಬಳಿ ಮನವಿ ಮಾಡಿದ ಮೆಗಾಸ್ಟಾರ್ ಚಿರಂಜೀವಿ

|

Updated on: Dec 25, 2024 | 3:55 PM

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ತೆಲುಗು ಚಿತ್ರರಂಗದ ನಾಯಕ ಮತ್ತು ರಾಜಕೀಯದಲ್ಲಿಯೂ ಪ್ರಭಾವ ಹೊಂದಿರುವವರು. ಇದೀಗ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಚಿರಂಜೀವಿ, ತೆಲಂಗಾಣ ಸರ್ಕಾರಕ್ಕೆ ಪರೋಕ್ಷವಾಗಿ ಕುಟುಕಿದ್ದಾರೆ. ವಿಧಾನಸಭೆಯಲ್ಲಿ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ, ಇವರಿಗೇನು ಕೆಲಸ ಇಲ್ಲವಾ ಎನಿಸುತ್ತದೆ ಎಂದಿದ್ದಾರೆ ಚಿರು.

ತೆಲುಗು ಸರ್ಕಾರಗಳ ಬಳಿ ಮನವಿ ಮಾಡಿದ ಮೆಗಾಸ್ಟಾರ್ ಚಿರಂಜೀವಿ
Cm Revanth Reddy Chiranjeevi
Follow us on

ತೆಲುಗು ಚಿತ್ರರಂಗದ ಪ್ರಮುಖ ವ್ಯಕ್ತಿ ಎಂದರೆ ಅದು ನಟ ಮೆಗಾಸ್ಟಾರ್ ಚಿರಂಜೀವಿ. ತೆಲುಗು ಕಲಾವಿದರ ಸಮಿತಿ ಇನ್ನಿತರೆ ಸಂಘಗಳಿಗಿಂತಲೂ ಪ್ರಭಾವ ಹೊಂದಿರುವ ವ್ಯಕ್ತಿ ಮೆಗಾಸ್ಟಾರ್ ಚಿರಂಜೀವಿ. ಜಗನ್ ಸರ್ಕಾರದ ಅವಧಿಯಲ್ಲಿ ತೆಲುಗು ಚಿತ್ರರಂಗಕ್ಕೆ ಸಂಕಷ್ಟ ಬಂದೊದಗಿದಾಗ ಮುಂದೆ ಬಂದ ಚಿರಂಜೀವಿ ಸಿಎಂ ಜೊತೆ ಮಾತುಕತೆ ಆಡಿ ಸಮಸ್ಯೆ ಪರಿಹರಿಸಿಕೊಟ್ಟಿದ್ದರು. ಈಗ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗದ ವಿರುದ್ಧ ನಿಂತಿದೆ. ಉದ್ದೇಶಪೂರ್ವಕವಾಗಿ ಸಮಸ್ಯೆ ಕೊಡುತ್ತಿರುವಂತಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ, ವಿನಯಪೂರ್ವಕವಾಗಿಯೇ ತೆಲಂಗಾಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚಿರಂಜೀವಿ, ರವಿತೇಜ ಒಟ್ಟಿಗೆ ನಟಿಸಿದ್ದ ‘ವಾಲ್ತೇರು ವೀರಯ್ಯ’ ಸಿನಿಮಾದ 200ನೇ ದಿನದ ಸಂಭ್ರಮಾಚರಣೆ ನಿನ್ನೆ ನಡೆದಿದ್ದು ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ತೆಲಂಗಾಣ ಸರ್ಕಾರಕ್ಕೆ ಕುಟುಕಿದ್ದಾರೆ. ‘ಚಿತ್ರರಂಗದವರ ಸಂಭಾವನೆ, ಸಿನಿಮಾ ಕಲೆಕ್ಷನ್​ಗಳನ್ನು ಇವರು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅದನ್ನು ಕೇಳಿದಾಗ ಇವರಿಗೆ ಬೇರೆ ಕೆಲಸ ಇಲ್ಲವಾ ಎನಿಸುತ್ತದೆ’ ಎಂದಿದ್ದಾರೆ. ಮುಂದುವರೆದು, ‘ಸಿನಿಮಾಗಳು ಚೆನ್ನಾಗಿ ವ್ಯವಹಾರ ಮಾಡುತ್ತಿವೆ ಆದ್ದರಿಂದ ಹೆಚ್ಚು ಹೆಚ್ಚು ಸಿನಿಮಾ ಮಾಡುತ್ತಿದ್ದೇವೆ. ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದೇವೆ. ಹೆಚ್ಚು ಸಿನಿಮಾ ಮಾಡಲು ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಸಹ ಕೊಡುತ್ತಿದ್ದೇವೆ’ ಎಂದಿದ್ದಾರೆ ಚಿರಂಜೀವಿ.

ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಮಾಜಿ ಅಳಿಯ ಹಠಾತ್ ಸಾವು

‘ಸಿನಿಮಾದವರು ದುಡ್ಡು ಮಾಡಿಬಿಡುತ್ತಿದ್ದಾರೆ ಎಂಬುದನ್ನೇ ಏನೋ ದೊಡ್ಡ ಸಮಸ್ಯೆಯ ರೀತಿಯಲ್ಲಿ ನೀವು ಚರ್ಚೆಗಳ ಮೇಲೆ ಚರ್ಚೆಗಳನ್ನು ಮಾಡುತ್ತಿದ್ದೀರಿ. ಇದಕ್ಕಿಂತಲೂ ದೊಡ್ಡ ಸಮಸ್ಯೆಯೇ ಇಲ್ಲ, ಇದೇ ದೊಡ್ಡ ಸಮಸ್ಯೆ ಎಂಬ ರೀತಿಯಲ್ಲಿ ನೀವು ವರ್ತಿಸುತ್ತಿದ್ದೀರಿ. ಇದು ಬಹಳ ದುರದೃಷ್ಟ. ಸಿನಿಮಾ ಪಾಡಿಗೆ ಸಿನಿಮಾವನ್ನು ಬಿಟ್ಟುಬಿಡಿ. ನಿಮ್ಮ ಕೈಯಲ್ಲಿ ಸಾಧ್ಯವಾದರೆ ಬೆಂಬಲ ನೀಡಿ. ಇಲ್ಲವಾದರೆ ಬಿಡಿ. ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂಬ ಕಾರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುತ್ತಿದ್ದೇವೆ. ಖರ್ಚು ಮಾಡಿದ್ದೀವಾದ್ದರಿಂದ ಅದರಿಂದ ಲಾಭ ಬರಲೆಂದು ನಿರೀಕ್ಷೆ ಮಾಡುತ್ತೀವಿ. ಸಾಧ್ಯವಾದರೆ ನಮಗೆ ಸಹಕರಿಸಿ, ಆದರೆ ನಾವು ಮಾಡುತ್ತಿರುವುದು ದೊಡ್ಡ ತಪ್ಪು ಎಂದು ದೇಶವ್ಯಾಪ್ತಿಯಾಗಿ ಬಿಂಬಿಸುವ ಪ್ರಯತ್ನ ಮಾಡಬೇಡಿ’ ಎಂದು ಚಿರು ಮನವಿ ಮಾಡಿದ್ದಾರೆ.

ಮುಂದುವರೆದು, ‘ರಾಜಕೀಯ ನಾಯಕರು, ರಾಜಕೀಯ ಪಕ್ಷಗಳಿಗೆ ಹೋಲಿಸಿಕೊಂಡರೆ ಸಿನಿಮಾ ಬಹಳ ಚಿಕ್ಕದು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಏಕೆ ಬಿಡುತ್ತೀರಿ. ಮಾತನಾಡಲು ಹಲವಾರು ಸಮಸ್ಯೆಗಳಿವೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡಿಸುವ ವಿಚಾರ, ನಿಂತುಹೋಗಿರುವ ಪ್ರಾಜೆಕ್ಟ್​ಗಳು, ಬಡವರ ಹೊಟ್ಟೆ ತುಂಬಿಸುವ ಯೋಜನೆಗಳು, ಶಿಕ್ಷಣವನ್ನು ಉತ್ತಮ ಪಡಿಸುವ ಯೋಜನೆಗಳು, ರಾಜ್ಯದ ಯುವಕರಿಗೆ ನೌಕರಿ ಇಂಥಹಾ ವಿಷಯಗಳ ಬಗ್ಗೆ ಮಾತನಾಡಿ, ಬದಲಾವಣೆ ತನ್ನಿ ಎಂದು ನಾನು ಸವಿನಯವಾಗಿ ಕೋರಿಕೊಳ್ಳುತ್ತೇನೆ’ ಎಂದಿದ್ದಾರೆ ಮೆಗಾಸ್ಟಾರ್ ಚಿರಂಜೀವಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Wed, 25 December 24