
ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಅವರಿಗೆ ಒಂದಕ್ಕಿಂತ ಮತ್ತೊಂದು ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಕೇವಲ ಗ್ಲಾಮರ್ ಗೊಂಬೆಯಾಗಿ ಉಳಿದುಕೊಳ್ಳದೇ ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾಡುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಆ ಪೈಕಿ ‘ಮಿಮಿ’ ಚಿತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಈಗ ಆ ಸಿನಿಮಾದ ಟ್ರೇಲರ್ (Mimi Trailer) ಬಿಡುಗಡೆ ಆಗಿದ್ದು, ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಕೃತಿ ಸನೋನ್ ಬಾಡಿಗೆ ತಾಯಿ (Surrogacy Mother) ಪಾತ್ರ ನಿಭಾಯಿಸಿದ್ದಾರೆ.
ವಿದೇಶಿ ದಂಪತಿಗೆ ಮಗು ಹೆತ್ತು ಕೊಡಲು ಒಪ್ಪಿಕೊಳ್ಳುವ ಬಾಡಿಗೆ ತಾಯಿಯ ಪಾತ್ರದಲ್ಲಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಅವರು 15 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೇಲರ್ನಲ್ಲಿ ಹಲವು ಅಂಶಗಳು ಬಹಿರಂಗ ಆಗಿವೆ. ಕಾಮಿಡಿ ಮೂಲಕ ಆರಂಭ ಆಗುವ ಈ ಕಥೆ ನಂತರ ಭಾವನಾತ್ಮಕ ತಿರುವು ಪಡೆದುಕೊಳ್ಳಲಿದೆ.
ಬಾಡಿಗೆ ತಾಯಿ ಆಗುವವರು ಏನೆಲ್ಲ ಕಷ್ಟಪಡಬೇಕಾಗುತ್ತದೆ ಎಂಬುದನ್ನು ತುಂಬ ಡಿಫರೆಂಟ್ ಆಗಿ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಖ್ಯಾತ ನಟ ಪಂಕಜ್ ತ್ರಿಪಾಠಿ ಅವರು ‘ಮಿಮಿ’ ಚಿತ್ರದಲ್ಲಿ ಬಹುಮುಖ್ಯ ಪಾತ್ರ ಮಾಡಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರು ನಿರ್ದೇಶನ ಮಾಡಿದ್ದಾರೆ. ಎ.ಆರ್. ರೆಹಮಾನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಕೊರೊನಾ ವೈರಸ್ ಎರಡನೇ ಅಲೆ ಕಾರಣದಿಂದ ಬಹುತೇಕ ಕಡೆಗಳಲ್ಲಿ ಬಂದ್ ಆಗಿದ್ದ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಮುಂದೇನಾಗಲಿದೆಯೋ ಎಂಬ ಆತಂಕ ಕೂಡ ಮನೆ ಮಾಡಿದೆ. ಹಾಗಾಗಿ ನೇರವಾಗಿ ಓಟಿಟಿ ಪ್ಲಾಟ್ಫಾರ್ಮ್ಗಳ ಮೂಲಕ ಸಿನಿಮಾ ಬಿಡುಗಡೆ ಮಾಡಲು ಅನೇಕ ನಿರ್ಮಾಪಕರು ಆಸ್ತಕಿ ತೋರಿಸುತ್ತಿದ್ದಾರೆ. ‘ಮಿಮಿ’ ಚಿತ್ರ ಕೂಡ ಅದೇ ಸಾಲಿಗೆ ಸೇರುತ್ತಿದೆ. ಈ ಚಿತ್ರ ನೇರವಾಗಿ ಆನ್ಲೈನ್ ಮೂಲಕ ಬಿಡುಗಡೆ ಆಗಲಿದೆ. ಜಿಯೋ ಸಿನಿಮಾಸ್ ಮತ್ತು ನೆಟ್ಫ್ಲೆಕ್ಸ್ನಲ್ಲಿ ಜು.30ರಂದು ವೀಕ್ಷಣೆಗೆ ಲಭ್ಯವಾಗಲಿದೆ.
‘ಮಿಮಿ’ ಚಿತ್ರದ ಬಗ್ಗೆ ಕೃತಿ ಸನೋನ್ ಕೂಡ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಚಿತ್ರದ ಟ್ರೇಲರ್ ಹಂಚಿಕೊಂಡಿರುವ ಅವರು ‘ಇದೊಂದು ಅನಿರೀಕ್ಷಿತ ಕಥೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಕಾಟನ್ಪೇಟೆಯಲ್ಲಿ ಸನ್ನಿ ಲಿಯೋನ್ ಡಾನ್ಸ್; ಮತ್ತೆ ಕರ್ನಾಟಕಕ್ಕೆ ಬಂದ ಬಾಲಿವುಡ್ ನಟಿ
ಬಾಲಿವುಡ್ನಲ್ಲಿ ಲಿಂಗ ತಾರತಮ್ಯ; ಸ್ಟಾರ್ ನಟರಿಂದ ವಿದ್ಯಾ ಬಾಲನ್ಗೆ ಈ ಒಂದು ಕಷ್ಟ ತಪ್ಪಿರಲಿಲ್ಲ
Published On - 2:02 pm, Tue, 13 July 21