Head Bush Review: ಬೆಂಗಳೂರಿನ ಭೂಗತ ಲೋಕದ ಮರುಸೃಷ್ಟಿ ‘ಹೆಡ್ ಬುಷ್’; ಧನಂಜಯ್ ನಟನೆಗೆ ಹೇಳಬೇಕು ಭೇಷ್

| Updated By: ರಾಜೇಶ್ ದುಗ್ಗುಮನೆ

Updated on: Oct 21, 2022 | 9:16 AM

ಅಗ್ನಿ ಶ್ರೀಧರ್ ಅವರು ಬರೆದ ‘ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ‘ಹೆಡ್ ಬುಷ್’ ಸಿನಿಮಾ ಸಿದ್ಧಗೊಂಡಿದೆ. ಇಂದು (ಅಕ್ಟೋಬರ್ 21) ರಿಲೀಸ್ ಆದ ಈ ಚಿತ್ರಕ್ಕೆ ಶೂನ್ಯ ನಿರ್ದೇಶನ ಮಾಡಿದ್ದಾರೆ. ಎಂ.ಪಿ. ಜಯರಾಜ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ವಿಮರ್ಶೆ ಇಲ್ಲಿದೆ.

Head Bush Review: ಬೆಂಗಳೂರಿನ ಭೂಗತ ಲೋಕದ ಮರುಸೃಷ್ಟಿ ‘ಹೆಡ್ ಬುಷ್’; ಧನಂಜಯ್ ನಟನೆಗೆ ಹೇಳಬೇಕು ಭೇಷ್
ಧನಂಜಯ್
Follow us on

ಚಿತ್ರ: ಹೆಡ್ ಬುಷ್

ನಿರ್ದೇಶನ: ಶೂನ್ಯ

ಪಾತ್ರವರ್ಗ: ಧನಂಜಯ್, ಪಾಯಲ್ ರಜಪೂತ್, ದೇವರಾಜ್, ರಘು ಮುಖರ್ಜಿ, ಶ್ರುತಿ ಹರಿಹರನ್ ಮೊದಲಾದವರು

ಸ್ಟಾರ್: 3/5

ಅದು 70ರ ದಶಕ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ‘ಇಂದಿರಾ ಬ್ರಿಗೇಡ್’ ಕಟ್ಟುವ ನಿರ್ಧಾರಕ್ಕೆ ಬರುತ್ತಾರೆ. ಅಂದಿನ ಕರ್ನಾಟಕದ ಸಿಎಂ ದೇವರಾಜ್ ಅರಸ್ (ದೇವರಾಜ್​) ನಮ್ಮ ರಾಜ್ಯದಲ್ಲೇ ಇದನ್ನು ಮೊದಲು ಆರಂಭಿಸುತ್ತೇನೆ ಎನ್ನುತ್ತಾರೆ. ಇದಕ್ಕೆ ಇಂದಿರಾ ಗಾಂಧಿ ಅವರ ಸಮ್ಮತಿ ಸಿಗುತ್ತದೆ. ಈ ಜವಾಬ್ದಾರಿಯನ್ನು ದೇವರಾಜ್ ಅರಸ್ ತಮ್ಮ ಅಳಿಯ ಎಂ.ಡಿ. ನಟರಾಜ್​ (ರಘು ಮುಖರ್ಜಿ) ಅವರಿಗೆ ನೀಡುತ್ತಾರೆ. ಯುವ ಬ್ರಿಗೇಡ್​ಗೆ ಎಂಡಿಎನ್ ಅಧ್ಯಕ್ಷರಾಗುತ್ತಾರೆ. ಎಂಡಿಎನ್ ನೇರವಾಗಿ ಡಾನ್ ಎಂ.ಪಿ. ಜಯರಾಜ್ (ಧನಂಜಯ್) ಜತೆ ಕೈ ಜೋಡಿಸುತ್ತಾರೆ. ಆತನಿಗೆ ಬೆಂಗಳೂರಿನ ಇನ್​ಚಾರ್ಜ್ ನೀಡಲಾಗುತ್ತದೆ. ಅಲ್ಲಿಂದ ಜಯರಾಜ್ ಆಳ್ವಿಕೆ ಆರಂಭ. ಜಯರಾಜ್​ ಇದನ್ನು ಹೇಗೆ ಬಳಸಿಕೊಳ್ತಾನೆ, ಆತ ಹೇಗೆ ಬೆಳೆಯುತ್ತಾನೆ? ರಾಜಕೀಯಕ್ಕೂ-ಭೂಗತ ಲೋಕಕ್ಕೂ ಯಾವ ರೀತಿಯ ನಂಟಿತ್ತು ಎಂಬುದರ ಕಥೆಯನ್ನು ‘ಹೆಡ್​ ಬುಷ್​’ನ ಮೊದಲ ಭಾಗದಲ್ಲಿ ಬಿಚ್ಚಿಡಲಾಗಿದೆ.

1970-80ರ ದಶಕದಲ್ಲಿ ಜಯರಾಜ್ ದೊಡ್ಡ ಡಾನ್ ಆಗಿದ್ದ. ಇಡೀ ಬೆಂಗಳೂರು ರಕ್ತದೋಕುಳಿಯಲ್ಲಿ ಮಿಂದೆದ್ದಿತ್ತು ಎಂಬುದು ಪುಸ್ತಕದಲ್ಲಿ ಅಚ್ಚಾಗಿದೆ. ಆದರೆ, ಇದನ್ನು ಹತ್ತಿರದಿಂದ ನೋಡಿದವರು ಕಡಿಮೆ. ಕೆಲ ಸಿನಿಮಾಗಳಲ್ಲಿ ಜಯರಾಜ್ ಪಾತ್ರಗಳು ಬಂದು ಹೋಗಿವೆ. ಎಂ.ಪಿ. ಜಯರಾಜ್ ಡಾನ್ ಆಗಿದ್ದೇಕೆ, ಆತ ಬೆಳೆದಿದ್ದು ಹೇಗೆ, ಆತ ಎಷ್ಟು ಕ್ರೂರಿ ಆಗಿದ್ದ, ಆತನಲ್ಲಿ ಸೇಡಿನ ಜ್ವಾಲೆ ಹುಟ್ಟಿದ್ದು ಹೇಗೆ ಎಂಬಿತ್ಯಾದಿ ವಿಚಾರಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ ನಿರ್ದೇಶಕ ಶೂನ್ಯ. ಇದಕ್ಕೆ ಕಥೆ ಬರೆದ ಅಗ್ನಿ ಶ್ರೀಧರ್ ಅವರ ಶ್ರಮಕ್ಕೂ ನಾವು ಮೆಚ್ಚುಗೆ ಸೂಚಿಸಲೇಬೇಕು.

ಧನಂಜಯ್ ಅವರು ಜಯರಾಜ್​ ಪಾತ್ರವನ್ನು ಜೀವಿಸಿದ್ದಾರೆ. ಅವರ ಅಭಿನಯದಿಂದ ಸಿನಿಮಾದ ತೂಕ ಹೆಚ್ಚಾಗಿದೆ. ಇಡೀ ಸಿನಿಮಾ ಸಾಗೋದು ಜಯರಾಜ್​ ಮೇಲೆಯೇ. ಈ ಪಾತ್ರವನ್ನು ಅದ್ಭುತವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿ ತೋರಿಸಿದ್ದಾರೆ ಧನಂಜಯ್. ತಾವು ನಟ ರಾಕ್ಷಸ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬೆಂಗಳೂರನ್ನೇ ನಡುಗಿಸಿದ ಡಾನ್​ ಜಯರಾಜ್ ಹೇಗಿದ್ದ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಡಾಲಿ ಧನಂಜಯ್ ನಟಿಸಿ ತೋರಿಸಿದ್ದಾರೆ.

ಕಲಾವಿದರ ಆಯ್ಕೆಗೆ ಹೆಚ್ಚು ಅಂಕ ಸಿಗುತ್ತದೆ. ಜಯರಾಜ್ ಗೆಳೆಯ ಗಂಗಾ ಪಾತ್ರದಲ್ಲಿ ಲೂಸ್ ಮಾದ ಯೋಗಿ ಇಷ್ಟವಾಗುತ್ತಾರೆ. ಸ್ಯಾಮ್ಸನ್ ಪಾತ್ರದಲ್ಲಿ ಬಾಲು ನಾಗೇಂದ್ರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ದೇವರಾಜ್ ಅರಸ್​ ಆಗಿ ಹಿರಿಯ ನಟ ದೇವರಾಜ್​, ಎಂಡಿಎನ್​ ಆಗಿ ರಘು ಮುಖರ್ಜಿ ಇಷ್ಟವಾಗುತ್ತಾರೆ. ದೇವರಾಜ್ ಅರಸ್ ಮಗಳ ಪಾತ್ರದಲ್ಲಿ ಶ್ರುತಿ ಹರಿಹರನ್ ಅವರದ್ದು ಮಾಗಿದ ನಟನೆ. ರವಿಚಂದ್ರನ್ ಹೀಗೆ ಬಂದು ಹಾಗೆ ಹೋಗುತ್ತಾರೆ. ತೆರೆಮೇಲೆ ಬಂದಾಗ ಜೀವನದ ಬಗ್ಗೆ ಪಾಠ ಮಾಡುತ್ತಾರೆ. ‘ಹೆಡ್ ಬುಷ್’ ಅರ್ಥವನ್ನು ವಿವರಿಸಿ ಹೋಗುತ್ತಾರೆ. ಕೊತ್ವಾಲ್ ಪಾತ್ರದಲ್ಲಿ ವಸಿಷ್ಠ ಸಿಂಹ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.  ಇಂದಿರಾ ಗಾಂಧಿ ಪಾತ್ರ ನೈಜವಾಗಿದೆ. ಜಯರಾಜ್ ಹೆಂಡತಿ ಪಾತ್ರದಲ್ಲಿ ಪಾಯಲ್ ನಟನೆ ಇಷ್ಟ ಆಗುತ್ತದೆ.

ಪಾತ್ರ ವರ್ಗ ಚಿತ್ರದ ಒಂದು ಸ್ಟ್ರೆಂತ್ ಆದರೆ, ಚರಣ್ ರಾಜ್ ಹಿನ್ನೆಲೆ ಸಂಗೀತ ಹಾಗೂ ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಚಿತ್ರದ ಮತ್ತೊಂದು ಬಲ. ಇವೆರಡು ಬಲದಿಂದ ಭೂಗತ ಲೋಕದ ಭಯಾನಕತೆ ಮತ್ತಷ್ಟು ಕಣ್ಣಿಗೆ ಕಟ್ಟುವಂತೆ ಮೂಡಿ ಬಂದಿದೆ. ಶೂನ್ಯ ಅವರ ಶ್ರಮ ಮೆಚ್ಚಿಕೊಳ್ಳುವಂತಹದ್ದು. ಆದರೆ, ಸಿನಿಮಾವನ್ನು ಮತ್ತಷ್ಟು ಉತ್ತಮವಾಗಿ ಕಟ್ಟಿ ಕೊಡುವ ಅವಕಾಶ ಅವರಿಗೆ ಇತ್ತು. ಕೆಲವು ಕೊರತೆಗಳು ಎದ್ದು ಕಾಣುತ್ತವೆ. ಅದನ್ನು ನಿರ್ದೇಶಕರು ಸರಿಪಡಿಸಬಹುದಿತ್ತು.

ಇದು ಭೂಗತ ಲೋಕದ ಕಥೆ. ಹೀಗಾಗಿ, ಇಲ್ಲಿ ಝಳಪಿಸುವ ಮಚ್ಚುಗಳಿಗೆ, ಚಿಮ್ಮುವ ರಕ್ತಕ್ಕೆ, ಬೀಳುವ ಏಟುಗಳಿಗೆ, ಬೈಯ್ಯುವ ಕೆಟ್ಟ ಶಬ್ದಗಳಿಗೆ ಯಾವುದೇ ಕೊರತೆ ಇಲ್ಲ. ಇದು ಫ್ಯಾಮಿಲಿ ಆಡಿಯನ್ಸ್​ಗೆ ಇಷ್ಟವಾಗದೇ ಇರಬಹುದು. ಭೂಗತ ಲೋಕದ ಕಥೆಯನ್ನು ಹೊಂದಿರುವ ‘ಆ ದಿನಗಳು’ ಚಿತ್ರದಲ್ಲಿ ರಕ್ತವನ್ನೇ ತೋರಿಸಿರಲಿಲ್ಲ ಅನ್ನೋದು ಬೇರೆ ವಿಚಾರ.  ಚಿತ್ರದಲ್ಲಿ ಸಿನಿಮೀಯ ಅಂಶಗಳನ್ನು ಹೆಚ್ಚೇ ಸೇರಿಸಲಾಗಿದೆ. ಮೂಲ ವಿಚಾರಕ್ಕಿಂತ ಅಬ್ಬರ ಹೆಚ್ಚಾಗಿದೆ. ಕಮರ್ಷಿಯಲ್ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕರು ಈ ನಿರ್ಧಾರ ತೆಗೆದುಕೊಂಡಿರಬಹುದು. ಆದರೆ, ಇದು ನೈಜ ಕಥೆಗೆ ಹೊಂದಿಕೆ ಆಗದು ಎನಿಸುತ್ತದೆ. ಕೆಲವು ಕಡೆಗಳಲ್ಲಿ ಸಿನಿಮಾ ಲ್ಯಾಗ್ ಎನಿಸುತ್ತದೆ. ಹಾಡುಗಳು ಗುನುಗುವಂತಿಲ್ಲ. ಹಲವು ಕಡೆಗಳಲ್ಲಿ ಹಿಂದಿ, ತಮಿಳು ಭಾಷೆ ಬಳಕೆ ಆಗಿದೆ. ಅಂತಹ ಸಂದರ್ಭದಲ್ಲಿ ಕನ್ನಡದಲ್ಲಿ ಸಬ್​ಟೈಟಲ್ ಇದ್ದಿದ್ದರೆ ಮತ್ತಷ್ಟು ಸಹಕಾರಿ ಆಗುತ್ತಿತ್ತು.