Karataka Damanaka review: ಹುಟ್ಟಿದೂರಿನ ಮಹತ್ವ ಸಾರುವ ಸಿನಿಮಾದಲ್ಲಿ ಏನಿದೆ? ಏನಿಲ್ಲ?

|

Updated on: Mar 08, 2024 | 2:46 PM

Karataka Damanaka movie review: ಯೋಗರಾಜ್ ಭಟ್ ನಿರ್ದೇಶಿಸಿ, ಶಿವರಾಜ್ ಕುಮಾರ್, ಪ್ರಭುದೇವ ಒಟ್ಟಿಗೆ ನಟಿಸಿರುವ ‘ಕರಟಕ ದಮನಕ’ ಸಿನಿಮಾ ಹೇಗಿದೆ?

Karataka Damanaka review: ಹುಟ್ಟಿದೂರಿನ ಮಹತ್ವ ಸಾರುವ ಸಿನಿಮಾದಲ್ಲಿ ಏನಿದೆ? ಏನಿಲ್ಲ?
Follow us on

ಚಿತ್ರ: ಕರಟಕ ದಮನಕ
ನಿರ್ದೇಶಕ: ಯೋಗರಾಜ್ ಭಟ್
ನಿರ್ಮಾಣ: ರಾಕ್​ಲೈನ್ ವೆಂಕಟೇಶ್
ಪಾತ್ರವರ್ಗ: ಶಿವರಾಜ್ ಕುಮಾರ್, ಪ್ರಭುದೇವ, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್,

ಸ್ಟಾರ್: 3/5

‘ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ’ ಎಂದು ಊರು ಬಿಟ್ಟವರ ಬವಣೆಗಳನ್ನು, ಊರಿನ-ಬೇರಿನ ಮಹತ್ವವನ್ನು ಹಾಡಾಗಿಸಿದ್ದ ಯೋಗರಾಜ್ ಭಟ್ಟರು ಈಗ ಅದೇ ಎಳೆಯನ್ನು ಕತೆಯಾಗಿಸಿ ಸಿನಿಮಾ ರೂಪಕ್ಕೆ ತಂದಿದ್ದಾರೆ. ‘ಕರಟಕ ದಮನಕ’ ಸಿನಿಮಾ ಊರು ಬಿಟ್ಟವರನ್ನು ಮರಳಿ ತಮ್ಮ ಬೇರಿಗೆ ತರುವ ಪ್ರಯತ್ನ ಮಾಡುವ ಇಬ್ಬರು ಕುತಂತ್ರಿಗಳ ಕತೆ. ಸ್ವಲಾಭದ ಹೊರತಾಗಿ ಇನ್ನೇನನ್ನೂ ಯೋಚಿಸದ ಇಬ್ಬರು ನರಿಬುದ್ಧಿಯ ಕುತಂತ್ರಿಗಳು ಸ್ವಲಾಭಕ್ಕೆ ಊರೊಂದಕ್ಕೆ ಹೋಗಿ ಅಲ್ಲಿ ಮನುಷ್ಯತ್ವ, ಸಂಬಂಧಗಳು, ಪ್ರೀತಿ, ಊರಿನ ಮಹತ್ವವನ್ನು ಅರಿತುಕೊಳ್ಳುವ ಕತೆ ‘ಕರಟಕ ದಮನಕ’ದ್ದು.

ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಮೊದಲ ಬಾರಿಗೆ ಒಟ್ಟಿಗೆ ನಟಿಸಿ, ಯೋಗರಾಜ್ ಭಟ್ಟರು ಮೊದಲ ಬಾರಿ ಈ ಇಬ್ಬರಿಗೂ ಆಕ್ಷನ್-ಕಟ್ ಹೇಳಿದ್ದಾರೆ. ಈ ಮೂರು ಮಂದಿಗೆ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ವರ್ಗವಿದ್ದು, ‘ಕರಟಕ ದಮನಕ’ ಸಿನಿಮಾಕ್ಕಾಗಿ ಮೂವರು ಒಟ್ಟಿಗೆ ಸೇರಿದ್ದರಿಂದ ಸಹಜವಾಗಿಯೇ ಸಿನಿಮಾದ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಿಗೆ ಇತ್ತು. ಈ ಭಾರವನ್ನು ಸಿನಿಮಾ ತಾಳಿಕೊಂಡಿದೆಯೆ? ಎಂದರೆ ಉತ್ತರ ಸರಳವಲ್ಲ.

ತಾವು ಕಳ್ಳರು ಎಂಬ ಬಗ್ಗೆ ಹೆಮ್ಮೆ ಪಡುವ ಇಬ್ಬರು ಕುತಂತ್ರಿಗಳು, ತಮ್ಮ ಈ ಅಪರಾಧಿಕ ಪಯಣದಲ್ಲಿ ಅಚಾನಕ್ಕಾಗಿ ಊರೊಂದನ್ನು ಹೊಕ್ಕುತ್ತಾರೆ. ಬರೀ ಬರಗಾಲಗಳನ್ನೇ ಕಂಡ ಆ ಊರನ್ನು ಬಿಟ್ಟು ಜನ ಗುಳೆ ಹೋಗಿದ್ದಾರೆ. ಇದ್ದ ಬದ್ದ ಕೆಲವರು ನೀರಿಗಾಗಿ ದಿನವೂ ಪರದಾಡುತ್ತಿದ್ದಾರೆ. ಒಬ್ಬ ಶಾಸಕನಿಗೆ ಊರಿನ ಮೇಲೆ ಸಿಟ್ಟು, ಊರಿಗೆ ಸಿಗಬೇಕಾದ ನೀರನ್ನು ತನ್ನ ಚೇಲಾ ಮೂಲಕ ತಡೆಯುತ್ತಿದ್ದಾನೆ. ಊರಿನಲ್ಲೊಬ್ಬ ಹಿರಿಯರಿದ್ದಾರೆ, ಊರಿನ ಜಾತ್ರೆ ನಡೆಸುವ ಬಯಕೆ ಅವರದ್ದು. ಆದರೆ ಊರ ಜಾತ್ರೆ ನೆಡೆಯಬೇಕೆಂದರೆ ಊರು ಬಿಟ್ಟವರೆಲ್ಲ ಮರಳಲೇ ಬೇಕು. ಹೀಗಿರುವಾಗ ಆ ಕುತಂತ್ರಿಗಳು ಊರು ಬಿಟ್ಟವರನ್ನು ಹೇಗೆ ಮರಳಿ ಕರೆಸುತ್ತಾರೆ, ಬರದಿಂದ ಕಂಗಾಲದ ಜನರಿಗೆ ಭರವಸೆ ಹೇಗೆ ಮೂಡಿಸುತ್ತಾರೆ. ಊರ ಜಾತ್ರೆ ಹೇಗೆ ಮಾಡುತ್ತಾರೆ ಎಂಬುದೇ ಸಿನಿಮಾದ ಕತೆ.

ಇದನ್ನೂ ಓದಿ:ಸಾಕಷ್ಟು ಭಿನ್ನವಾಗಿರಲಿದೆ ‘ಕರಟಕ ದಮನಕ’ ಸಿನಿಮಾ; ಇಲ್ಲಿದೆ ಸಾಕ್ಷಿ

ಸಿನಿಮಾದಲ್ಲಿ ಅಲ್ಲಲ್ಲಿ ಸಂಭಾಷಣೆಗಳು ಮಿಂಚುತ್ತವೆ, ನಗು ತರಿಸುತ್ತವೆ. ಆದರೆ ಈ ಹಾಸ್ಯ ಒರತೆಯಾಗಿ ಹರಿದಿಲ್ಲ ಬದಲಿಗೆ ಅಲ್ಲಲ್ಲಿ ಓಯಸಿಸ್ ರೀತಿ ಕಾಣಿಸಿಕೊಂಡಿದೆ. ಹಾಡುಗಳು ಸಿನಿಮಾದ ಮತ್ತೊಂದು ಪ್ರಮುಖ ಅಂಶ, ಎಲ್ಲ ಹಾಡುಗಳು ಗುನುಗುವಂತಿವೆ. ಹಾಡಿಗೆ ಶಿವಣ್ಣ-ಪ್ರಭುದೇವ ಚೆನ್ನಾಗಿ ಹೆಜ್ಜೆ ಹಾಕಿದ್ದಾರೆ. ಸಿನಿಮಾದಲ್ಲಿ ಕೆಲವು ಉತ್ತಮ ಸನ್ನಿವೇಶಗಳಿವೆ, ಅಪರಿಚಿತರನ್ನು ಮಗನನ್ನಾಗಿ ಸ್ವೀಕರಿಸುವ ವೃದ್ಧ, ಊರಿಗಾಗಿ ಶಾಸಕರನ್ನು ಎದುರು ಹಾಕಿಕೊಳ್ಳುವುದು, ಸಾರಾಯಿ ಕಾಯಿಸುವ ಹೆಣ್ಣು ಮಗಳಿಗೆ ಸಾರಿ ಕೇಳಿಸುವ ದೃಶ್ಯ, ಅಪರಿಚಿತ ಸುಳ್ಳುಗಾರನಿಂದ ಮೋಸ ಹೋದ ತಾಯಿ, ತನ್ನ ಮಗಳನ್ನು ಅಪರಿಚಿತನಿಗೆ ಕೊಡೆನು ಎನ್ನುವ ದೃಶ್ಯ, ಕಳ್ಳರನ್ನು ಒಳ್ಳೆಯವರ ಸೋಗಿನಲ್ಲಿರುವ ಕಳ್ಳರು ಎದುರುಗೊಳ್ಳುವ ದೃಶ್ಯ, ಭರವಸೆ ಕಳೆದುಕೊಂಡವರ ಬಂಗಾರ ಹುಡುಕುವ ದೃಶ್ಯ, ಹೀಗೆ ಇನ್ನೂ ಕೆಲವು ಒಳ್ಳೆಯ ಸನ್ನಿವೇಶಗಳಿವೆ, ಆದರೆ ಆ ಸನ್ನಿವೇಶಗಳನ್ನು ಇನ್ನಷ್ಟು ಭಾವುಕಗೊಳಿಸಿ, ಗಟ್ಟಿಗೊಳಿಸಿ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮನಸಿಗೆ ಇಳಿಸುವ ಪ್ರಯತ್ನ ಮಾಡಬಹುದಿತ್ತೇನೋ.

ಯೋಗರಾಜ್ ಭಟ್ಟರ ಕತೆಗೆ ಒಂದೊಳ್ಳೆ ಉದ್ದೇಶವಿದೆ, ಕೆಲವು ಒಳ್ಳೆಯ ದೃಶ್ಯಗಳ ಐಡಿಯಾಗಳಿವೆ, ಕೆಲವು ಒಳ್ಳೆಯ ಪಾತ್ರಗಳಿವೆ. ಆದರೆ ಇವೆಲ್ಲ ಬಿಡಿ-ಬಿಡಿಯಾಗಿ ಬಹಳ ಚೆನ್ನಾಗಿವೆ ಆದರೆ ಒಟ್ಟಿಗೆ ತೆರೆ ಮೇಲೆ ಸೇರಿದಾಗ ಅದ್ಭುತ ಪರಿಣಾಮ ಉಂಟುಮಾಡುವಲ್ಲಿ ತುಸು ಎಡವಿದೆ. ಹಾಗೆಂದು ಇದು ಕಳಪೆ ಅಥವಾ ಸಾಧಾರಣ ಸಿನಿಮಾ ಎಂದೇನೂ ಅಲ್ಲ. ಸಿನಿಮಾದಲ್ಲಿ ಸಾಕಷ್ಟು ಧನಾತ್ಮಕ ಅಂಶಗಳಿವೆ. ಎಲ್ಲಕ್ಕಿಂತಲೂ ಪ್ರಧಾನವಾದುದು ಯೋಗರಾಜ್ ಭಟ್ಟರ ಉದ್ದೇಶ. ಊರಿನ ಮಹತ್ವ ಹೇಳಲು ಅವರ ಮಾಡಿರುವ ಪ್ರಯತ್ನ, ನೀರು ಉಳಿಸುವ ಅಗತ್ಯತೆಯ ಬಗೆಗಿನ ಜಾಗೃತಿ, ನಿಜಕ್ಕೂ ‘ಬಂಗಾರ’ ಯಾವುದೆಂಬುದನ್ನು ಸೂಚ್ಯವಾಗಿ ಸಾರಿರುವ ರೀತಿ, ಭಟ್ಟರ ಸೂಕ್ಷ್ಮತೆ, ಸಮಾಜಮುಖಿ ವ್ಯಕ್ತಿತ್ವವನ್ನು ತೋರುತ್ತದೆ.

ಇದನ್ನೂ ಓದಿ:‘ಖುಷಿ’ ಸಿನಿಮಾ ವಿಮರ್ಶೆ: ಹೊಸ ಲೇಪನದಲ್ಲಿ ಪ್ರೇಕ್ಷಕರ ಎದುರು ಬಂದ ಹಳೇ ಮಾದರಿಯ ಕಥೆ

ಸಿನಿಮಾದಲ್ಲಿ ಎಲ್ಲ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ಶಿವಣ್ಣ, ಗಂಭೀರ, ಭಾವುಕ ಸನ್ನಿವೇಶಗಳಲ್ಲಿ ಸೆಳೆದರೆ ಪ್ರಭುದೇವ ತಮ್ಮ ಆಂಗಿಕ ಚೇಷ್ಟೆ, ಪಂಚ್ ಡೈಲಾಗ್​ಗಳಿಂದ ನಗು ತರಿಸುತ್ತಾರೆ. ಹಾಡುಗಳಲ್ಲಿ ಇಬ್ಬರೂ ಸಖತ್ ಆಗಿ ಸ್ಟೆಪ್​ ಹಾಕಿದ್ದಾರೆ. ಇಬ್ಬರೂ ನಾಯಕಿಯರೂ ಚೆನ್ನಾಗಿ ನಟಿಸಿದ್ದಾರೆ. ತೆಲುಗು ನಟ ತನಿಕೇಲ ಭರಣಿ ಇಷ್ಟವಾಗುತ್ತಾರೆ. ರವಿಶಂಕರ್ ವಿಲನ್ ಆಗಿ ಇತಿ-ಮಿತಿಯಲ್ಲಿ ನಟಿಸಿದ್ದಾರೆ. ರಂಗಾಯಣ ರಘು ಅವರಿಗೆ ಹೆಚ್ಚು ದೃಶ್ಯಗಳಿಲ್ಲ. ಪೋಷಕ ಪಾತ್ರಗಳ ನಟರ ನಟನೆಯೂ ಚೆನ್ನಾಗಿದೆ. ಸ್ವತಃ ಭಟ್ಟರು ಜೋಳಿಗೆ ಹೆಗಲಿಗೆ ಹಾಕಿಕೊಂಡು ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಿರ್ಮಾಪಕ ರಾಕ್​ಲೈನ್ ಅವರೂ ಸಹ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಿನಿಮಾದ ಸಂಭಾಷಣೆ ಚುರುಕಾಗಿದೆ. ಉತ್ತರ ಕರ್ನಾಟಕದ ಭಾಷೆಯನ್ನು ಭಟ್ಟರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಇದೊಂದು ಒಳ್ಳೆಯ ಉದ್ದೇಶವುಳ್ಳ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Fri, 8 March 24