ಕಾರ್ಗಿಲ್ ಯೋಧ, ರೈತರ ಬಂಧು: ನಾನಾ ಪಟೇಕರ್ ಇನ್ನೊಂದು ಮುಖ

ಚಲನಚಿತ್ರ ರಂಗದಲ್ಲಿ ತಮ್ಮ ವಿಭಿನ್ನ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದರು ನಾನಾ ಪಟೇಕರ್. ತೆರೆಯ ಮೇಲೆ ನಾಯಕ, ವಿಲನ್, ಕಠಿಣ ಮನಸ್ಸಿನ ವ್ಯಕ್ತಿ ಹೀಗೆ ನಾನಾ ರೀತಿಯ ಪಾತ್ರಗಳಲ್ಲಿ ನಾನಾ ನಟಿಸಿದ್ದರು. ಆದರೆ ತೆರೆಯ ಹಿಂದೆ ಅಂದರೆ ನಿಜ ಜೀವನದಲ್ಲಿ ‘ಹೀರೋ’ ಆಗಿದ್ದವರು ನಾನಾ ಪಟೇಕರ್. ಚಿತ್ರರಂಗಕ್ಕೆ ಸೇವೆ ಸಲ್ಲಿಸುವ ಜೊತೆಗೆ ಅವರು ದಶಕಗಳ ಕಾಲ ಸಮಾಜ ಸೇವೆಯಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಾರ್ಗಿಲ್ ಯೋಧ, ರೈತರ ಬಂಧು: ನಾನಾ ಪಟೇಕರ್ ಇನ್ನೊಂದು ಮುಖ
Nana Patekar

Updated on: Oct 08, 2026 | 10:55 AM

ಮುಖ್ಯಾಂಶಗಳು

  • ನಟ ನಾನಾ ಪಟೇಕರ್ ನಿಧನ ಹೊಂದಿದ್ದಾರೆ
  • ಅದ್ಭುತ ನಟರಾಗಿರುವ ಅವರು ಸಮಾಜ ಸೇವಕರೂ ಹೌದು
  • ಅವರು ಮಾಡಿರುವ ಸೇವೆಯ ಮಾಹಿತಿ ಇಲ್ಲಿದೆ

ಖ್ಯಾತ ಹಿರಿಯ ನಟ ನಾನಾ ಪಟೇಕರ್ (75) ಅವರು ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಲನಚಿತ್ರ ರಂಗದಲ್ಲಿ ತಮ್ಮ ವಿಭಿನ್ನ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ತೆರೆಯ ಮೇಲೆ ನಾಯಕ, ವಿಲನ್, ಕಠಿಣ ಮನಸ್ಸಿನ ವ್ಯಕ್ತಿ ಹೀಗೆ ನಾನಾ ರೀತಿಯ ಪಾತ್ರಗಳಲ್ಲಿ ನಾನಾ ನಟಿಸಿದ್ದರು. ಆದರೆ ತೆರೆಯ ಹಿಂದೆ ಅಂದರೆ ನಿಜ ಜೀವನದಲ್ಲಿ ‘ಹೀರೋ’ ಆಗಿದ್ದವರು ನಾನಾ ಪಟೇಕರ್. ಚಿತ್ರರಂಗಕ್ಕೆ ಸೇವೆ ಸಲ್ಲಿಸುವ ಜೊತೆಗೆ ಅವರು ದಶಕಗಳ ಕಾಲ ಸಮಾಜ ಸೇವೆಯಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು.

ನಾಮ್ ಫೌಂಡೇಶನ್

ಕೇವಲ ನಟನೆಗೆ ಮಾತ್ರ ಸೀಮಿತವಾಗದೆ, ನಾನಾ ಪಟೇಕರ್ ಸಮಾಜ ಸೇವೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದರು. ಅದರಲ್ಲೂ ವಿಶೇಷವಾಗಿ ರೈತರು ಹಾಗೂ ಸೈನಿಕರ ಬಗ್ಗೆ ವಿಶೇಷ ಕಾಳಜಿಯನ್ನು ನಾನಾ ಪಟೇಕರ್ ಹೊಂದಿದ್ದರು. ಬೆಳೆಹಾನಿ, ಬರದಿಂದ ನಲುಗಿ ಸಾಲಬಾಧೆಯಿಂದ ಆತ್ಮಹತ್ಯೆಯ ಹಾದಿ ಹಿಡಿದ ರೈತ ಕುಟುಂಬಗಳಿಗೆ ಧೈರ್ಯ ತುಂಬಲು ಮರಾಠಿ ನಟ ಮಕರಂದ್ ಅನ್ಸ್ಪರ್ ಅವರೊಂದಿಗೆ ಸೇರಿ ‘ನಾಮ್ ಫೌಂಡೇಶನ್’ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಪುನರ್ವಸತಿ ಕಲ್ಪಿಸಿ ದೊಡ್ಡ ಉಪಕಾರ ಮಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಭಾಗಿ

ಕೇವಲ ರೈತರಷ್ಟೇ ಅಲ್ಲದೆ, ದೇಶ ಕಾಯುವ ಸೈನಿಕರ ಬಗ್ಗೆಯೂ ಅವರಿಗೆ ಅಪಾರ ಗೌರವವಿತ್ತು. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಮತ್ತು ಇತರೆ ಸಂದರ್ಭಗಳಲ್ಲಿ ಗಡಿಯಲ್ಲಿ ನೇರವಾಗಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಸೈನಿಕರ ಬೆಂಬಲಕ್ಕೆ ನಾನಾ ಪಟೇಕರ್ ನಿಂತಿದ್ದರು. ವಿಶೇಷ ಅನುಮತಿ ಪಡೆದು ‘ಕಾರ್ಗಿಲ್’ ಯುದ್ಧದ ಸಂದರ್ಭದಲ್ಲಿ ಅವರು 60 ದಿನಗಳ ಕಾಲ ಸೈನಿಕರೊಟ್ಟಿಗೆ ಸೇರಿ ಹೋರಾಟದಲ್ಲಿ ಭಾಗವಹಿಸಿದ್ದರು. ಅವರು ಮರಾಠಾ ರೆಜಿಮೆಂಟಿನಿಂದ ತರಬೇತಿ ಪಡೆದಿದ್ದ ಕಾರಣ ಅವರು ಸೈನಿಕರೊಟ್ಟಿಗೆ ಸೇರಿ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಸೈನಿಕರೊಂದಿಗೆ ಕಾಲಳೆದು, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕವಾಗಿ ಹಾಗೂ ನೈತಿಕವಾಗಿ ಕೋಟ್ಯಂತರ ರೂಪಾಯಿಗಳ ದೇಣಿಗೆಯನ್ನು ಸಂಗ್ರಹಿಸಿ ತಲುಪಿಸುವ ಮೂಲಕ ನಿಜವಾದ ದೇಶಭಕ್ತಿಯನ್ನು ಮೆರೆದಿದ್ದರು. ನಾನಾ ಅವರ ವಿಶೇಷವೆಂದರೆ ಅವರು ತಾವು ಮಾಡಿದ ಸಮಾಜ ಕಾರ್ಯಕ್ಕೆ ಪ್ರಚಾರ ಪಡೆಯುತ್ತಿರಲಿಲ್ಲ. ಎಲೆಮರೆ ಕಾಯಿಯಂತೆ ಅವರು ಇದ್ದುಬಿಡುತ್ತಿದ್ದರು.

ಇದನ್ನೂ ಓದಿ:‘ಆ ಪಾತ್ರ ಮಾಡುವುದಿಲ್ಲ’: ದೊಡ್ಡ ಹಾಲಿವುಡ್ ಆಫರ್ ಕೈಬಿಟ್ಟಿದ್ದ ಹಿರಿಯ ನಟ

ಅವರ ಈ ಅಪರೂಪದ ಸರಳತೆ, ಸಮಾಜಮುಖಿ ಕಾಳಜಿ ಹಾಗೂ ನಿಸ್ವಾರ್ಥ ಸೇವೆ ಇಂದಿನ ಯುವ ಜನತೆಗೆ ಸದಾ ಸ್ಪೂರ್ತಿದಾಯಕವಾಗಿದೆ. ತೆರೆಯ ಮೇಲೆ ತಮ್ಮ ಗಡಸು ಧ್ವನಿಯಿಂದಲೇ ಹೆಸರು ಮಾಡಿದ್ದ ನಾನಾ ಪಟೇಕರ್, ಬಡವರು ಹಾಗೂ ಅಸಹಾಯಕರ ಪಾಲಿಗೆ ಮಾತ್ರ ಅತ್ಯಂತ ಮೃದು ಹೃದಯದವರಾಗಿದ್ದರು. ನಾನಾ ಪಟೇಕರ್ ಅವರು ರೈತರ ಪರವಾಗಿ ಮಾಡಿದ ಕಾರ್ಯವನ್ನು ಕೆಬಿಸಿಯಲ್ಲಿ ಖುದ್ದು ಅಮಿತಾಬ್ ಬಚ್ಚನ್ ಒಮ್ಮೆ ಕೊಂಡಾಡಿದ್ದರು. ಅಮಿತಾಬ್ ಬಚ್ಚನ್ ಸಹ ಕೆಲವು ಸಂದರ್ಭದಲ್ಲಿ ನಾನಾ ಪಟೇಕರ್ ಅವರ ಸಮಾಜ ಕಾರ್ಯಕ್ಕೆ ಕೈಜೋಡಿಸಿದ್ದು ಸಹ ಉಂಟು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us