ಲೈಂಗಿಕ ದೌರ್ಜನ್ಯ ಆರೋಪಕ್ಕೆ ಕೊನೆಗೂ ಪ್ರತಿಕ್ರಿಯಿಸಿದ ನಟ ನಾನಾ ಪಾಟೇಕರ್
ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಆರು ವರ್ಷದ ಹಿಂದೆ ಬಾಲಿವುಡ್ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಇದೀಗ ನಾನಾ ಪಾಟೇಕರ್ ಆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಚಿತ್ರರಂಗದ ಪ್ರತಿಭಾವಂತ ಹಾಗೂ ಹಲವು ನಟರಿಂದ ಗೌರವಾಧರಿಗಳಿಗೆ ಪಾತ್ರವಾಗುವ ನಟ ನಾನಾ ಪಾಟೇಕರ್ (nana patekar). ಆದರೆ ಅವರ ವಿರುದ್ಧ ಆರು ವರ್ಷದ ಹಿಂದೆ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಆಗ ಆ ಆರೋಪ ಭಾರಿ ಚರ್ಚೆ ಹುಟ್ಟುಹಾಕಿತ್ತು. ಆದರೆ ಆಗಿನಿಂದ ಈಗಿನ ವರೆಗೂ ನಾನಾ ಪಾಟೇಕರ್ ತಮ್ಮ ವಿರುದ್ಧದ ಆರೋಪದ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಈಗ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನಾನಾ ಪಾಟೇಕರ್ ಮಾತನಾಡಿದ್ದಾರೆ.
2018 ರಲ್ಲಿ ನಟಿ ತನುಶ್ರೀ ದತ್ತ, ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆರೋಪ ಮಾಡುವ ಮೂಲಕ ಆಗ ಜೋರಾಗಿದ್ದ ಮೀಟೂ ಚಳವಳಿಗೆ ತಾವೂ ಸಹ ಬೆಂಬಲ ನೀಡಿದ್ದರು. ‘ಹಾರ್ನ್ ಓಕೆ ಪ್ಲೀಸ್’ ಸಿನಿಮಾದಲ್ಲಿ ನಾನಾ ಪಟೇಕರ್ ಕೆಲಸ ಮಾಡಿದ್ದರು. ಆ ಸಿನಿಮಾದ ಹಾಡೊಂದರಲ್ಲಿ ತನುಶ್ರೀ ದತ್ತ ನಟಿಸಿದ್ದರು. ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದರು. ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ನಾನಾ ಪಟೇಕರ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಡ್ಯಾನ್ಸ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಲೈಂಗಿಕ ದೌರ್ಜನ್ಯ ನೀಡಿದರು ಎಂದು ತನುಶ್ರೀ ಆರೋಪ ಮಾಡಿದ್ದರು. ‘ಆ ದಿನ ನಾನಾ ಪಟೇಕರ್ ಶೂಟಿಂಗ್ ಇರಲಿಲ್ಲವಾದರೂ ಸೆಟ್ಗೆ ಆಗಮಿಸಿದ್ದರು, ನನ್ನೊಟ್ಟಿಗೆ ಕೆಟ್ಟದಾಗಿ ಅವರು ನಡೆದುಕೊಂಡರು’ ಎಂದು ತನುಶ್ರೀ ಹೇಳಿದ್ದರು.
ಈಗ ಈ ಬಗ್ಗೆ ಪ್ರತಿಕ್ರಿಯಿಸಿರುವ ನಾನಾ ಪಾಟೇಕರ್, ‘ನಾನು ನನ್ನ ವಿರುದ್ಧ ಆರೋಪ ಮಾಡಲಾದ ಆ ಘಟನೆ ಬಗ್ಗೆ ಯಾವುದೇ ಭಾವವನ್ನು ಇಟ್ಟುಕೊಂಡಿಲ್ಲ. ಏಕೆಂದರೆ ಅದೊಂದು ದೊಡ್ಡ ಸುಳ್ಳು, ಅದೊಂದು ಸುಳ್ಳು ಎಂದು ನನಗೆ ಅರಿವಿರುವಾಗ ನಾನೇಕೆ ಆ ಬಗ್ಗೆ ಸಿಟ್ಟು ಅಥವಾ ಇನ್ಯಾವುದೇ ಭಾವ ವ್ಯಕ್ತಪಡಿಸಲಿ’ ಎಂದು ಪಾಟೇಕರ್ ಹೇಳಿದ್ದಾರೆ.
ಇದನ್ನೂ ಓದಿ:ಮೀ ಟೂ ಆರೋಪಿ ಜೊತೆ ವೇದಿಕೆ ಹಂಚಿಕೊಂಡ ಕಮಲ್ ಹಾಸನ್; ಗಾಯಕಿಯ ಅಸಮಾಧಾನ
ಕೆಲವು ನಟ, ನಿರ್ದೇಶಕರ ವಿರುದ್ಧ ತನುಶ್ರೀ ದತ್ತ ಮೀಟೂ ಆರೋಪಗಳನ್ನು ಮಾಡಿದ್ದಾರೆ. ವಿಶೇಷವಾಗಿ ವಿವೇಕ್ ಅಗ್ನಿಹೋತ್ರಿ ವಿರುದ್ಧವೂ ಆರೋಪ ಮಾಡಲಾಗಿತ್ತು. ನಾನಾ ಪಾಟೇಕರ್ ಹಾಗೂ ಇನ್ನೂ ಕೆಲವು ನಟರ ವಿರುದ್ಧ ಆರೋಪ ಮಾಡಲಾಗಿದೆ. ತನುಶ್ರೀ ಹೇಳಿಕೆ ಆಧರಿಸಿ ನಾನಾ ಪಾಟೇಕರ್ ವಿರುದ್ಧ ಎಫ್ಐಆರ್ ಸಹ ದಾಖಲಿಸಲಾಗಿತ್ತು.
ನಾನಾ ಪಾಟೇಕರ್ ಬಾಲಿವುಡ್ನ ಅತ್ಯಂತ ಪ್ರತಿಭಾವಂತ, ಹಿರಿಯ ನಟರಲ್ಲಿ ಒಬ್ಬರು, ಹಿಂದಿ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಾನಾ ಪಾಟೇಕರ್ ನಟಿಸಿದ್ದಾರೆ. ಕನ್ನಡದ ‘ಯಕ್ಷ’ ಹೆಸರಿನ ಸಿನಿಮಾದಲ್ಲಿ ನಾನಾ ಪಾಟೇಕರ್ ನಟಿಸಿದ್ದಾರೆ. ರಂಗಭೂಮಿಯಿಂದ ಬಂದಿರುವ ನಟ ನಾನಾ ಪಾಟೇಕರ್, ಸಾಹಿತಿಯೂ ಹೌದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ