ನಾನಿ (Nani), ಕೀರ್ತಿ ಸುರೇಶ್ (Keerthy Suresh) ನಟನೆಯ ದಸರ (Dasara) ಸಿನಿಮಾ ಇನ್ನೈದು ದಿನದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ. ಆದರೆ ಅದಕ್ಕೆ ಮುನ್ನ ದೊಡ್ಡ ಆಘಾತವೊಂದು ಚಿತ್ರತಂಡಕ್ಕೆ ಎದುರಾಗಿದ್ದು, ಸೆನ್ಸಾರ್ ಮಂಡಳಿಯು ಬರೋಬ್ಬರಿ 36 ಕಟ್ಗಳನ್ನು ಸೂಚಿಸಿದೆ. ಮಾತ್ರವಲ್ಲದೆ ಕೆಲವು ಮುಖ್ಯ ಸೂಚನೆಗಳನ್ನು ಸಹ ಚಿತ್ರತಂಡಕ್ಕೆ ನೀಡಿದೆ. ಇಷ್ಟು ದೊಡ್ಡ ಸಂಖ್ಯೆಯ ಕಟ್ಗಳನ್ನು ತೆಲುಗಿನ ಇನ್ಯಾವುದೇ ಸಿನಿಮಾಕ್ಕೆ ಈವರೆಗೆ ನೀಡಲಾಗಿರಲ್ಲ. ಸೆನ್ಸಾರ್ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದ ಅಪಖ್ಯಾತಿಗೆ ದಸರ ಗುರಿಯಾಗಿದೆ.
ದಸರ ಸಿನಿಮಾವು ಹಳ್ಳಿಯ ಒರಟು ಯುವಕನೊಬ್ಬನ ಕತೆಯಾಗಿದ್ದು, ಸಿನಿಮಾದಲ್ಲಿ ನಾಯಕನದ್ದು ವಿಪರೀತ ಕುಡಿಯುವ ಚಟ. ಬಹಳ ಒರಟು ಸ್ವಭಾವದ ನಾಯಕನ ಪಾತ್ರ ವಿಪರೀತ ವೈಯಲೆನ್ಸ್ ಅನ್ನು ಸಹ ತೆರೆಯ ಮೇಲೆ ಮಾಡುತ್ತದೆ. ಹಾಗಾಗಿಯೇ ಸೆನ್ಸಾರ್ ಮಂಡಳಿಯು ಇಷ್ಟೋಂದು ಕಟ್ಗಳನ್ನು ಸೂಚಿಸಿದೆ ಎನ್ನಲಾಗಿದೆ. ಅದರಲ್ಲಿಯೂ ಕುಡಿತವನ್ನು ವೈಭವೀಕರಿಸುವ ಹಲವು ದೃಶ್ಯಗಳಿಗೆ ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳಿಗೆ ಹಲವು ಕಟ್ಗಳನ್ನು ಸೂಚಿಸಿದೆ. ಒರಟು ಭಾಷೆ ಬಳಸಿದ ಕಡೆಯೂ ಕಟ್ ಹಾಗೂ ಮ್ಯೂಟ್ಗಳನ್ನು ಸೂಚಿಸಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.
ಇದೆಲ್ಲೆದರ ಜೊತೆಗೆ ಕುಡಿತದ ದೃಶ್ಯಗಳುಳ್ಳ ಕಡೆಗೆ ಮದ್ಯಪಾನ ವಿರೋಧಿ ಸಂದೇಶವನ್ನು ದೊಡ್ಡ ಫಾಂಟ್ನಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿರುವ ಜೊತೆಗೆ, ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ಸೂಚಿಸಲಾಗಿದೆ ಹಾಗೂ ಸಂಭಾಷಣೆಗಳ ಸಬ್ಟೈಟಲ್ ಅನ್ನು ಸಹ ತೆಗೆಯುವಂತೆ ಸೂಚಿಸಿದೆ ಸೆನ್ಸಾರ್ ಮಂಡಳಿ. ಇವಲ್ಲದೆ ಸಿನಿಮಾದ ಪ್ರಚಾರದಲ್ಲಿಯೂ ಬಳಸಲಾಗುತ್ತಿರುವ ಬಾಂಚೆತ್ ಹಾಗೂ ಬದ್ದಲು ಬಾಸಿಂಗಾಲೈತಾಯ್ ಸಂಭಾಷಣೆಗಳನ್ನು ಸಹ ಮ್ಯೂಟ್ ಮಾಡಲಾಗಿದೆ.
ತೆಲಂಗಾಣದ ಸಿಂಗಾರೆನಿ ಎಂಬಲ್ಲಿನ ಕಲ್ಲಿದ್ದಲು ಗಣಿ, ಅಲ್ಲಿನ ಕಾರ್ಮಿಕರು ಅವರ ಬದುಕುಗಳನ್ನು ದಸರ ಸಿನಿಮಾದ ಕತೆ ಒಳಗೊಂಡಿದೆ. ಗಣಿಯ ಕಾರ್ಮಿಕನ ಪಾತ್ರದಲ್ಲಿ ನಾನಿ ನಟಿಸಿದ್ದಾರೆ. ಕೀರ್ತಿ ಸುರೇಶ್ ವೆನ್ನೆಲ ಹೆಸರಿನ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಸಿನಿಮಾವನ್ನು ಸುಧಾಕರ್ ಚೆರುಕುರಿ ನಿರ್ಮಾಣ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಚಾರವನ್ನು ಬಹು ಜೋರಾಗಿ ಮಾಡುತ್ತಿದ್ದಾರೆ ನಟ ನಾನಿ. ಸಿನಿಮಾವು ಮಾರ್ಚ್ 30 ರಂದು ತೆರೆಗೆ ಬರಲಿದೆ.