
ಈ ವರ್ಷ ಬ್ಲಾಕ್ ಬಸ್ಟರ್ ಎನಿಸಿಕೊಂಡ ‘ಕಾಂತಾರ’ ಸಿನಿಮಾ (Kantara Movie) ಒಟಿಟಿಗೂ ಕಾಲಿಟ್ಟು ಮೋಡಿ ಮಾಡುತ್ತಿದೆ. ಕನ್ನಡದ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ತುಳು ಹಾಗೂ ಹಿಂದಿಗೂ ಡಬ್ ಆಗಿ ಬಿಡುಗಡೆ ಆಗಿದೆ. ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ವರ್ಷನ್ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಪ್ರಸಾರ ಆಗುತ್ತಿದೆ. ಆದರೆ ‘ಕಾಂತಾರ’ ಹಿಂದಿ (Kantara Hindi) ವರ್ಷನ್ ಇನ್ನೂ ಒಟಿಟಿಗೆ ಬಂದಿಲ್ಲ. ಈ ಬಗ್ಗೆ ಉತ್ತರ ಭಾರತದ ಪ್ರೇಕ್ಷಕರು ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ. ಹಿಂದಿಯಲ್ಲಿ ಕಾಂತಾರ ಸ್ಟ್ರೀಮಿಂಗ್ ಯಾವಾಗ ಶುರುವಾಗಲಿದೆ ಎಂಬುದನ್ನು ಈ ಸ್ವತಃ ರಿಷಬ್ ಶೆಟ್ಟಿ (Rishab Shetty) ತಿಳಿಸಿದ್ದಾರೆ. ಡಿಸೆಂಬರ್ 9ರಿಂದ ‘ನೆಟ್ಫ್ಲಿಕ್ಸ್’ ಮೂಲಕ ಹಿಂದಿ ಪ್ರೇಕ್ಷಕರು ‘ಕಾಂತಾರ’ ವೀಕ್ಷಿಸಬಹುದು.
ಈ ಸುದ್ದಿಯನ್ನು ತಿಳಿಸಲು ನೆಟ್ಫ್ಲಿಕ್ಸ್ ಒಂದು ವಿಶೇಷ ಪ್ರೋಮೋ ಹಂಚಿಕೊಂಡಿದೆ. ಮನೆಯಲ್ಲಿ ಕುಳಿತಿರುವ ರಿಷಬ್ ಶೆಟ್ಟಿ ಅವರಿಗೆ ಸಾಕಷ್ಟು ಮೆಸೇಜ್ಗಳು ಬರುತ್ತವೆ. ಎಲ್ಲರೂ ‘ಕಾಂತಾರ’ ಹಿಂದಿ ವರ್ಷನ್ ಒಟಿಟಿ ರಿಲೀಸ್ ಬಗ್ಗೆಯೇ ಪ್ರಶ್ನೆ ಕೇಳ್ತಾರೆ. ಉತ್ತರಿಸಲಾಗದೇ ರಿಷಬ್ ಸುಸ್ತಾಗುತ್ತಾರೆ. ಫುಡ್ ಡೆಲಿವರಿ ನೀಡಲು ಬಂದ ವ್ಯಕ್ತಿ ಕೂಡ ಅದೇ ಪ್ರಶ್ನೆ ಕೇಳುತ್ತಾನೆ. ಇನ್ನೂ ಸುಮ್ಮನಿದ್ದರೆ ಕಷ್ಟ ಆಗುತ್ತೆ ಅಂತ ತಿಳಿದ ರಿಷಬ್ ಶೆಟ್ಟಿ ಅವರು ಡೇಟ್ ಅನೌನ್ಸ್ ಮಾಡುತ್ತಾರೆ.
ಇದನ್ನೂ ಓದಿ: Rishab Shetty: ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ ಜೊತೆ ಸೆಲ್ಫಿಗೆ ಮುಗಿಬಿದ್ದ ಕಲಬುರಗಿ ಅಭಿಮಾನಿಗಳು
ನೆಟ್ಫ್ಲಿಕ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ಈಗ ವೈರಲ್ ಆಗಿದೆ. ಉತ್ತರ ಭಾರತದ ಪ್ರೇಕ್ಷಕರ ವಲಯದಲ್ಲಿ ನೆಟ್ಫ್ಲಿಕ್ಸ್ ಚಂದಾದಾರರು ಜಾಸ್ತಿ ಇದ್ದಾರೆ. ದಕ್ಷಿಣದಲ್ಲಿ ಅಮೇಜಾನ್ ಪ್ರೈಂ ಪ್ರಾಬಲ್ಯ ಇದೆ. ಹಾಗಾಗಿ ನೆಟ್ಫ್ಲಿಕ್ಸ್ಗೆ ‘ಕಾಂತಾರ’ ಹಿಂದಿ ವರ್ಷನ್ ಮಾರಾಟವಾಗಿದ್ದರೆ, ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ದಕ್ಷಿಣದ ಭಾಷೆಗಳಲ್ಲಿ ಈ ಚಿತ್ರ ಪ್ರಸಾರ ಆಗುತ್ತಿದೆ.
ಇದನ್ನೂ ಓದಿ: Baba Movie: ಮರು ಬಿಡುಗಡೆ ಆಗ್ತಿದೆ ರಜನಿಕಾಂತ್ ನಟನೆಯ ‘ಬಾಬಾ’; ಇದಕ್ಕೆ ‘ಕಾಂತಾರ’ ಯಶಸ್ಸು ಕಾರಣವೇ?
‘ಕಾಂತಾರ’ ಸೂಪರ್ ಹಿಟ್ ಆದ ಬಳಿಕ ರಿಷಬ್ ಶೆಟ್ಟಿ ಅವರ ಡಿಮ್ಯಾಂಡ್ ಹೆಚ್ಚಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ. ಈಗ ಅವರು ಮಾಡಲಿರುವ ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ‘ಕಾಂತಾರ’ ಸಕ್ಸಸ್ ಆಗುವುದಕ್ಕೂ ಮುನ್ನ ರಿಷಬ್ ಶೆಟ್ಟಿ ಅವರು ಒಂದಷ್ಟು ಸಿನಿಮಾಗಳನ್ನು ಘೋಷಿಸಿದ್ದರು. ಆ ಪೈಕಿ ಕೆಲವು ಚಿತ್ರಗಳ ಕೆಲಸಗಳು ಕೂಡ ಆರಂಭ ಆಗಿದ್ದವು. ಈಗ ಅವುಗಳನ್ನೇ ಮುಂದುವರಿಸುತ್ತಾರೋ ಅಥವಾ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡುತ್ತಾರೋ ಎಂಬ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:46 am, Wed, 7 December 22