Baba Movie: ಮರು ಬಿಡುಗಡೆ ಆಗ್ತಿದೆ ರಜನಿಕಾಂತ್ ನಟನೆಯ ‘ಬಾಬಾ’; ಇದಕ್ಕೆ ‘ಕಾಂತಾರ’ ಯಶಸ್ಸು ಕಾರಣವೇ?
Rajinikanth | Baba: 20 ವರ್ಷಗಳ ಹಿಂದೆ ಸೋತ ‘ಬಾಬಾ’ ಸಿನಿಮಾವನ್ನು ಈಗ ಮತ್ತೆ ರಿಲೀಸ್ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಚಿತ್ರಕ್ಕಾಗಿ ರಜನಿಕಾಂತ್ ಅವರು ಹೊಸದಾಗಿ ಡಬ್ಬಿಂಗ್ ಮಾಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರಿಗೆ ಈಗ 71 ವರ್ಷ ವಯಸ್ಸು. ಇದೇ ಡಿಸೆಂಬರ್ 12ರಂದು ಅವರು 72ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭವನ್ನು ಇನ್ನಷ್ಟು ಸ್ಪೆಷಲ್ ಆಗಿಸಲು ‘ಬಾಬಾ’ (Baba Movie) ಚಿತ್ರವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ರಜನಿಕಾಂತ್ ನಟನೆಯ ಈ ಸಿನಿಮಾ 2002ರಲ್ಲಿ ತೆರೆಕಂಡಿತ್ತು. ಈಗ ಅದಕ್ಕೆ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ‘ಬಾಬಾ’ ಸಿನಿಮಾ ಸಜ್ಜಾಗಿದೆ. ಅಷ್ಟಕ್ಕೂ ಬರೋಬ್ಬರಿ 20 ವರ್ಷಗಳ ಬಳಿಕ ಈ ಸಿನಿಮಾವನ್ನು ರೀ-ರಿಲೀಸ್ ಮಾಡಲು ಚಿತ್ರತಂಡದವರು ಯಾಕೆ ಮುಂದಾಗಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಇದು ‘ಕಾಂತಾರ’ (Kantara Movie) ಚಿತ್ರದ ಗೆಲುವಿನ ಎಫೆಕ್ಟ್ ಎಂದು ಊಹಿಸಲಾಗುತ್ತಿದೆ.
2002ರಲ್ಲಿ ತೆರೆಕಂಡಿದ್ದ ‘ಬಾಬಾ’ ಸಿನಿಮಾ ಹೀನಾಯವಾಗಿ ಸೋತಿತ್ತು. ವಿಶೇಷ ಏನೆಂದರೆ ಆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ಸ್ವತಃ ರಜನಿಕಾಂತ್! ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ಹಾಗಿದ್ದರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ‘ಬಾಬಾ’ ಗೆಲ್ಲಲಿಲ್ಲ. ವಿತರಕರಿಗೆ ನಷ್ಟ ಆಗಿದೆ ಎಂದು ರಜನಿಕಾಂತ್ ಅವರು ತಮ್ಮ ಸ್ವಂತ ಹಣ ನೀಡಿ ನಷ್ಟ ಭರಿಸುವ ಕೆಲಸ ಮಾಡಿದ್ದರು.
ಇದನ್ನೂ ಓದಿ: Puneeth Rajkumar: ರಜನಿಕಾಂತ್ ಮೊದಲ ಸಲ ಪುನೀತ್ ಅವರನ್ನು ನೋಡಿದ್ದು ಎಲ್ಲಿ? ದೇವರ ಸನ್ನಿಧಿಯ ಆ ಘಟನೆಯೇ ರೋಮಾಂಚಕ
20 ವರ್ಷಗಳ ಹಿಂದೆ ಸೋತ ಸಿನಿಮಾವನ್ನು ಈಗ ಮತ್ತೆ ರಿಲೀಸ್ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಚಿತ್ರಕ್ಕಾಗಿ ಹೊಸದಾಗಿ ಡಬ್ಬಿಂಗ್ ಮಾಡಲಾಗಿದೆ. ಅಲ್ಲದೆ, ಹೊಸ ರೂಪದಲ್ಲಿ ಟ್ರೇಲರ್ ಕೂಡ ರಿಲೀಸ್ ಆಗಿದೆ. 20 ಲಕ್ಷಕ್ಕೂ ಅಧಿಕ ಬಾರಿ ಈ ಟ್ರೇಲರ್ ವೀಕ್ಷಣೆ ಕಂಡಿದೆ. ಈ ಸಿನಿಮಾಗೆ ಶೇಖರ್ ಕೃಷ್ಣ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Rajinikanth: ‘ಅಪ್ಪು ದೇವರ ಮಗು’ ಎಂದು ಕನ್ನಡದಲ್ಲೇ ಮಾತಾಡಿದ ರಜನಿಕಾಂತ್; ಮಳೆ ಸುರಿದರೂ ಕದಲಲಿಲ್ಲ ತಲೈವಾ
ರೀ-ರಿಲೀಸ್ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ನಿರ್ದೇಶಕರು ಉತ್ತರ ನೀಡಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ‘ಫ್ಯಾಂಟಸಿ ಕಥಾಹಂದರದ ಬಗ್ಗೆ ಜನರಿಗೆ ಇತ್ತೀಚಿನ ದಿನಗಳಲ್ಲಿ ಆಸಕ್ತಿ ಹೆಚ್ಚಿದೆ. ‘ಬಾಬಾ’ ಚಿತ್ರ ಅಂದಿನ ಕಾಲಕ್ಕಿಂತಲೂ ಮುಂದಿತ್ತು’ ಎಂದು ಶೇಖರ್ ಕೃಷ್ಣ ಹೇಳಿದ್ದಾರೆ. ‘ಕಾಂತಾರ’ ಚಿತ್ರವನ್ನು ಗಮನದಲ್ಲಿ ಇಟ್ಟುಕೊಂಡೇ ಈ ರೀತಿ ಹೇಳಿರಬಹುದು ಎಂದು ಸಿನಿಪ್ರಿಯರು ಊಹಿಸಿದ್ದಾರೆ.
A film that will forever be closest to my heart … #Baba remastered version releasing soon ??#BaBaReRelease https://t.co/vUaQahyHlA
— Rajinikanth (@rajinikanth) December 3, 2022
‘ಬಾಬಾ’ ಕಥೆ ಏನು?
ಈ ಚಿತ್ರದ ಆರಂಭದಲ್ಲಿ ಹೀರೋಗೆ ದೇವರ ಮೇಲೆ ನಂಬಿಕೆ ಇರುವುದಿಲ್ಲ. ಆದರೆ ಯೋಗಿಯೊಬ್ಬರನ್ನು ಭೇಟಿ ಆದ ಬಳಿಕ ಅವನಿಗೆ ದೇವರ ಮೇಲೆ ನಂಬಿಕೆ ಮೂಡುತ್ತದೆ. ಯೋಗಿ ನೀಡಿದ ವರದಿಂದ ಹೀರೋಗೆ ಸೂಪರ್ ಪವರ್ ಬರುತ್ತದೆ. ಅದರಿಂದ ಏನೆಲ್ಲ ಆಗುತ್ತದೆ ಎಂಬುದು ಈ ಸಿನಿಮಾದ ಕಥೆ. ಈ ಬಾರಿಯಾದರೂ ‘ಬಾಬಾ’ ಚಿತ್ರ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:17 pm, Mon, 5 December 22