Puneeth Rajkumar: ರಜನಿಕಾಂತ್ ಮೊದಲ ಸಲ ಪುನೀತ್ ಅವರನ್ನು ನೋಡಿದ್ದು ಎಲ್ಲಿ? ದೇವರ ಸನ್ನಿಧಿಯ ಆ ಘಟನೆಯೇ ರೋಮಾಂಚಕ
Rajinikanth | Puneeth Rajkumar: ‘ಆ ಮಗುವಿನ ಧ್ವನಿ ಒಂದು ಜೇಂಕಾರದ ಸದ್ದಿನಂತೆ ಕೇಳಿಸಿತು. ಅದನ್ನು ಕೇಳಿ ಎಲ್ಲರಿಗೂ ರೋಮಾಂಚನ ಆಗಿಬಿಡ್ತು’ ಎಂದು ಆ ಘಟನೆಯನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಜನ ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಪುನೀತ್ ಅಚ್ಚುಮೆಚ್ಚು ಆಗಿದ್ದರು. ಆದರೆ ಇಂದು ಅವರು ಇಲ್ಲ ಎಂಬುದು ನೋವಿನ ಸಂಗತಿ. ಮರಣೋತ್ತರವಾಗಿ ಪುನೀತ್ ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ನೀಡಲಾಗಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಈ ಸಮಾರಂಭದಲ್ಲಿ ‘ಸೂಪರ್ ಸ್ಟಾರ್’ ರಜನಿಕಾಂತ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆರಂಭದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದ ಕಾರಣ ಅವರು ಚುಟುಕಾಗಿ ಮಾತು ಪೂರ್ಣಗೊಳಿಸಿದ್ದರು. ಪುನೀತ್ ಪರವಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಳೆ ಕಡಿಮೆ ಆಯಿತು. ಆಗ ಮತ್ತೆ ರಜನಿಕಾಂತ್ (Rajinikanth) ಅವರು ತಮ್ಮ ಮನದ ಮಾತುಗಳನ್ನು ಹೇಳಲು ಮೈಕ್ ಕೈಗೆತ್ತಿಕೊಂಡರು.
ಡಾ. ರಾಜ್ಕುಮಾರ್ ಮತ್ತು ರಜನಿಕಾಂತ್ ಅವರ ಕುಟುಂಬದ ನಡುವೆ ಹಲವು ವರ್ಷಗಳಿಂದ ಒಡನಾಟ ಇದೆ. ಪುನೀತ್ ರಾಜ್ಕುಮಾರ್ ಚಿಕ್ಕ ಬಾಲಕ ಆಗಿದ್ದಾಗ ಮೊದಲ ಬಾರಿ ಅವರನ್ನು ನೋಡಿದ ಘಟನೆಯನ್ನು ಇಂದು ರಜನಿಕಾಂತ್ ನೆನಪು ಮಾಡಿಕೊಂಡಿದ್ದಾರೆ. ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಅವರು ಮೊದಲ ಬಾರಿಗೆ ಅಪ್ಪು ಮುಖವನ್ನು ನೋಡಿದ್ದು. ಆ ಸನ್ನಿವೇಶವನ್ನು ಅವರು ತುಂಬ ಚೆನ್ನಾಗಿ ವಿವರಿಸಿದ್ದಾರೆ.
‘1979ರಲ್ಲಿ ನಾನು ಮೊದಲ ಬಾರಿಗೆ ಚೆನ್ನೈನಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ನೋಡಿದೆ. ಅಲ್ಲಿ ನಂಬಿಯಾರ್ ಸ್ವಾಮಿ ಅಂತ ಇದ್ದಾರೆ. ಅವರು ಪ್ರತಿ ವರ್ಷ ಶಬರಿಮಲೆಗೆ ಬಂದು 48 ಕಿಲೋಮೀಟರ್ ನಡೆದುಹೋಗ್ತಾರೆ. ಅವರ ಜೊತೆ 250 ಜನ ಸ್ವಾಮಿಗಳು ಹೋಗ್ತಾರೆ. ಅವರೊಂದಿಗೆ ಜೊತೆ ಡಾ. ರಾಜ್ಕುಮಾರ್ ಕೂಡ ಬರುತ್ತಿದ್ದರು. ಇರುಮುಡಿ ಕಟ್ಟಿದಾಗ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನಬೇಕು. ಪ್ರತಿ ವರ್ಷ ವೀರಮಣಿ ಎಂಬ ದೊಡ್ಡ ಗಾಯಕ ಅದನ್ನು ಹೇಳುತ್ತಿದ್ದರು. ಆದರೆ 1979ರಲ್ಲಿ ಚಿಕ್ಕ ಮಗುವೊಂದು ಸ್ವಾಮಿಯೇ ಶರಣಂ ಅಯ್ಯಪ್ಪ ಅಂತ ಕೂಗಿದ್ದು ಕೇಳಿಸಿತು’ ಎಂದು ಆ ದಿನಗಳ ನೆನಪಿನ ಪುಟ ತೆರೆದಿದ್ದಾರೆ ರಜನಿಕಾಂತ್.
‘ಆ ಮಗುವಿನ ಧ್ವನಿ ಒಂದು ಜೇಂಕಾರದ ಸದ್ದಿನಂತೆ ಇತ್ತು. ಅದನ್ನು ಕೇಳಿ ಎಲ್ಲರಿಗೂ ರೋಮಾಂಚನ ಆಗಿಬಿಡ್ತು. ಯಾರ ಧ್ವನಿ ಎಂದು ಹೋಗಿ ನೋಡಿದರೆ ಡಾ. ರಾಜ್ಕುಮಾರ್ ಅವರ ಮಡಿಲಿನಲ್ಲಿ ನಾಲ್ಕು ವರ್ಷದ ಚಿಕ್ಕ ಮಗು ಕುಳಿತಿತ್ತು. ಕಪ್ಪು ಬಣ್ಣದ ಮಗುವಿನ ಮುಖದಲ್ಲಿ ಚಂದ್ರನಂತಹ ಕಳೆ. ಎಲ್ಲರಿಗೂ ಆ ಮಗುವನ್ನು ಕಂಡರೆ ಇಷ್ಟ. ಆ ಮಗುವನ್ನು ಅಣ್ಣಾವ್ರು ಹೆಗಲ ಮೇಲೆ ಕೂರಿಸಿಕೊಂಡು 48 ಕಿಲೋಮೀಟರ್ ನಡೆಯುತ್ತಿದ್ದರು. ಆ ಮಗುವೇ ನಮ್ಮ ಅಪ್ಪು’ ಎಂದಿದ್ದಾರೆ ರಜನಿಕಾಂತ್.
‘ಅಂದು ನೋಡಿದ ನಮ್ಮ ಪುನೀತ್ ಬೆಳೆದು ಸ್ಟಾರ್ ಆದ. ಅಪ್ಪು ಸಿನಿಮಾ 100 ಡೇಸ್ ಓಡಿತು. ನನ್ನ ಕೈಯಾರೆ ಶೀಲ್ಡ್ ನೀಡಿದ್ದೆ. ಇಂದು ಅಪ್ಪು ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನರಾದಾಗ ನನಗೆ ಆಪರೇಷನ್ ಆಗಿ ಐಸಿಯುನಲ್ಲಿ ಇದ್ದೆ. ಮೂರು ದಿನ ಆದ ಬಳಿಕ ನನಗೆ ವಿಷಯ ತಿಳಿಯಿತು’ ಎಂದು ರಜನಿಕಾಂತ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 pm, Tue, 1 November 22