Mandeep Roy: ಹಿರಿಯ ನಟ ಮನ್ದೀಪ್ ರಾಯ್ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
Mandeep Roy Heart Attack: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮನ್ದೀಪ್ ರಾಯ್ ಅವರನ್ನು ದಾಖಲಿಸಲಾಗಿದೆ. ಅವರ ಚಿಕಿತ್ಸೆಗೆ ಆರ್ಥಿಕ ನೆರವಿನ ಅನಿವಾರ್ಯತೆ ಇದೆ.
ಕನ್ನಡ ಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ (Mandeep Roy) ಅವರಿಗೆ ಹೃದಯಾಘಾತ ಸಂಭವಿಸಿದೆ. ಮೂರು ದಿನಗಳ ಹಿಂದೆ ಹಾರ್ಟ್ ಅಟ್ಯಾಕ್ (Heart Attack) ಆಗಿದ್ದು, ಅವರನ್ನು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಶೀಘ್ರದಲ್ಲೇ ಮನ್ದೀಪ್ ರಾಯ್ ಅವರ ಹೆಲ್ತ್ ಅಪ್ಡೇಟ್ (Mandeep Roy Health Update) ಸಿಗಲಿದೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆದರೆ ಇಂದು ಅವರ ಚಿಕಿತ್ಸೆಗೆ ಹಣಕಾಸಿನ ತೊಂದರೆ ಉಂಟಾಗಿದೆ. ಆರ್ಥಿಕ ನೆರವಿನ ಅವಶ್ಯಕತೆ ಇದೆ ಎಂಬುದು ತಿಳಿದುಬಂದಿದೆ. ಮನ್ದೀಪ್ ರಾಯ್ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಮನ್ದೀಪ್ ರಾಯ್ ಅವರು ಸಲ್ಲಿಸಿದ ಸೇವೆ ಅಪಾರ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನೂರಾರು ಹಾಸ್ಯ ಪಾತ್ರಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಅನಂತ್ ನಾಗ್, ಶಂಕರ್ ನಾಗ್, ಡಾ. ರಾಜ್ಕುಮಾರ್ ಸೇರಿದಂತೆ ಅನೇಕ ದಿಗ್ಗಜ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಖ್ಯಾತಿ ಅವರಿಗಿದೆ.
ಮಿಂಚಿನ ಓಟ, ಬಾಡದ ಹೂವು, ಆಕಸ್ಮಿಕ, ಅಗ್ನಿ ಐಪಿಎಸ್, ದೀಪಾವಳಿ, ಅಯ್ಯ, ಅಪೂರ್ವ ಸಂಗಮ, ಪ್ರೀತ್ಸೋದ್ ತಪ್ಪಾ, ಏಳು ಸುತ್ತಿನ ಕೋಟೆ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮನ್ದೀಪ್ ರಾಯ್ ನಟಿಸಿದ್ದಾರೆ. ಅವರ ನಟನೆಯನ್ನು ಕಂಡು ಸಿನಿಪ್ರಿಯರು ಕಳೆದ ನಾಲ್ಕು ದಶಕಗಳಿಂದಲೂ ಎಂಜಾಯ್ ಮಾಡುತ್ತಿದ್ದಾರೆ.
ಮನ್ದೀಪ್ ರಾಯ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯ ಇರುವ ಎಲ್ಲ ರೀತಿಯ ಪರೀಕ್ಷೆಯನ್ನು ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:04 pm, Mon, 5 December 22