The Kashmir Files Unreported: ‘ದಿ ಕಾಶ್ಮೀರ್​ ಫೈಲ್ಸ್​’ನಲ್ಲಿ ನೀವು ನೋಡಿದ್ದಕ್ಕಿಂತಲೂ ಭಯಾನಕ ಆಗಿದೆ ಈ ಟ್ರೇಲರ್​; ಮತ್ತೆ ವಿವೇಕ್​ ಅಗ್ನಿಹೋತ್ರಿ ಸದ್ದು

The Kashmir Files Unreported trailer: 1990ರ ಸಮಯದಲ್ಲಿ ನೋವು ಅನುಭವಿಸಿದ ಅನೇಕರು ಈ ವೆಬ್​ ಸರಣಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಟ್ರೇಲರ್​ನಲ್ಲಿ ಕಾಣಿಸಿರುವ ಅಂದಿನ ಕಾಲದ ವಿಡಿಯೋಗಳು ಮನ ಕಲಕುವಂತಿವೆ.

The Kashmir Files Unreported: ‘ದಿ ಕಾಶ್ಮೀರ್​ ಫೈಲ್ಸ್​’ನಲ್ಲಿ ನೀವು ನೋಡಿದ್ದಕ್ಕಿಂತಲೂ ಭಯಾನಕ ಆಗಿದೆ ಈ ಟ್ರೇಲರ್​; ಮತ್ತೆ ವಿವೇಕ್​ ಅಗ್ನಿಹೋತ್ರಿ ಸದ್ದು
ವಿವೇಕ್​ ಅಗ್ನಿಹೋತ್ರಿ

Updated on: Jul 21, 2023 | 8:37 PM

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಬಿಡುಗಡೆ ಬಳಿಕ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದ ಅವರ ಹೆಸರು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ‘ದಿ ಕಾಶ್ಮೀರ್​ ಫೈಲ್ಸ್​ ಅನ್​ರಿಪೋರ್ಟೆಡ್​’ ವೆಬ್​ ಸಿರೀಸ್​. ಇದರ ಟ್ರೇಲರ್ (The Kashmir Files Unreported trailer) ಇಂದು (ಜುಲೈ 21) ಬಿಡುಗಡೆ ಆಗಿದೆ. ಇದನ್ನು ನೋಡಿ ವೀಕ್ಷಕರು ಬೆಚ್ಚಿ ಬಿದ್ದಿದ್ದಾರೆ.​ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ತೋರಿಸಿದ್ದಕ್ಕಿಂತಲೂ ಹೆಚ್ಚಿನ ಭಯಾನಕ ದೃಶ್ಯಗಳು ಈ ವೆಬ್​ ಸಿರೀಸ್​ನ ಟ್ರೇಲರ್​ನಲ್ಲಿ ಇವೆ. ಶೀಘ್ರದಲ್ಲೇ ಒಟಿಟಿ ಮೂಲಕ ‘ದಿ ಕಾಶ್ಮೀರ್​ ಫೈಲ್ಸ್​ ಅನ್​ರಿಪೋರ್ಟೆಡ್​’ (The Kashmir Files Unreported) ಬಿಡುಗಡೆ ಆಗಲಿದೆ. ಇದರ ರಿಲೀಸ್​ ಡೇಟ್​ ಇನ್ನಷ್ಟೇ ಬಹಿರಂಗ ಆಗಬೇಕಿದೆ.

1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಯ ಘಟನೆಗಳನ್ನು ಆಧರಿಸಿ ‘ದಿ ಕಾಶ್ಮೀರ್​ ಫೈಲ್ಸ್​​’ ಸಿನಿಮಾ ಮೂಡಿಬಂದಿತ್ತು. ಪಲ್ಲವಿ ಜೋಶಿ, ಅನುಪಮ್​ ಖೇರ್​, ದರ್ಶನ್​ ಕುಮಾರ್​, ಮಿಥುನ್​ ಚಕ್ರವರ್ತಿ ಮುಂತಾದವರು ಆ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ಹೇಳಲಾಗದೇ ಉಳಿದ ಅನೇಕ ಸಂಗತಿಗಳನ್ನು ಈಗ ‘ದಿ ಕಾಶ್ಮೀರ್​ ಫೈಲ್ಸ್​ ಅನ್​ರಿಪೋರ್ಟೆಡ್​’ ವೆಬ್​ ಸರಣಿಯಲ್ಲಿ ಹೇಳಲಾಗುತ್ತಿದೆ. ಅಂದು ನೋವು ಅನುಭವಿಸಿದ ಅನೇಕರು ಈ ವೆಬ್​ ಸರಣಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಂದಿನ ಕಾಲದ ವಿಡಿಯೋ ಕ್ಲಿಪ್​ಗಳು ಮನ ಕಲಕುವಂತಿವೆ.

‘ಜೀ 5’ ಮೂಲಕ ‘ದಿ ಕಾಶ್ಮೀರ್​ ಫೈಲ್ಸ್​ ಅನ್​ರಿಪೋರ್ಟೆಡ್​’ ಪ್ರಸಾರ ಆಗಲಿದೆ. ಇದರಲ್ಲಿ ವಿವೇಕ್​ ಅಗ್ನಿಹೋತ್ರಿ, ಪಲ್ಲವಿ ಜೋಶಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ‘ಪ್ರಾಯಶಃ ಭಾರತದ ಇತಿಹಾಸದಲ್ಲಿ ಈ ರೀತಿ ಬೇರೆ ಯಾವಾಗಲೂ ಆಗಿರಲಿಲ್ಲ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಅಂದಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅವರ ಈ ಪ್ರಯತ್ನಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಟ್ರೇಲರ್​ ವೈರಲ್​ ಆಗುತ್ತಿದೆ. ‘ಇದೇ ರೀತಿ ಮಣಿಪುರ ಫೈಲ್ಸ್​ ಕೂಡ ಮಾಡಿ’ ಎಂದು ಕೆಲವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Vivek Agnihotri: ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಬಜೆಟ್​ ಎಷ್ಟು? ಮುಚ್ಚುಮರೆ ಇಲ್ಲದೇ ಲೆಕ್ಕ ನೀಡಿದ ವಿವೇಕ್​ ಅಗ್ನಿಹೋತ್ರಿ

ವಿವೇಕ್​ ಅಗ್ನಿಹೋತ್ರಿ ಅವರು ಈಗ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟಿ ಸಪ್ತಮಿ ಗೌಡ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ. ಆಗಸ್ಟ್​ ತಿಂಗಳಲ್ಲಿ ಇದನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕರು ಈ ಮೊದಲು ಘೋಷಿಸಿದ್ದರು. ಆದರೆ ಇದರ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿದೆ. ಈ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ‘ದಿ ವ್ಯಾಕ್ಸಿನ್​ ವಾರ್​’ ತೆರೆಕಾಣುವ ಸಾಧ್ಯತೆ ಇದೆ. ಈ ಸಿನಿಮಾಗಾಗಿ ವಿವೇಕ್​ ಅಗ್ನಿಹೋತ್ರಿ ಅಭಿಮಾನಿಗಳು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us