ತೆಲುಗು ನಟ ಮಹೇಶ್ ಬಾಬು (Mahesh Babu) ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 5 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಕೃಷ್ಣ ಘಟ್ಟಮನೇನಿ (Krishna Ghattamaneni) ಅವರ ಸಾಧನೆಯನ್ನು ಸ್ಮರಿಸಲಾಗುತ್ತಿದೆ. ಟಾಲಿವುಡ್ನ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು, ಆಪ್ತರು ಕೃಷ್ಣ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಸೋಶಿಯಲ್ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ತೆಲುಗು ಮತ್ತು ಇಂಗ್ಲಿಷ್ನಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ. ಕೃಷ್ಣ ಅವರ ಪ್ರತಿಭೆ ಮತ್ತು ವ್ಯಕ್ತಿತ್ವವನ್ನು ಪ್ರಧಾನಿ ಸ್ಮರಿಸಿದ್ದಾರೆ.
‘ಕೃಷ್ಣ ಅವರು ಲೆಜೆಂಡರಿ ನಟನಾಗಿದ್ದರು. ತಮ್ಮ ವ್ಯಕ್ತಿತ್ವ ಮತ್ತು ನಟನೆ ಮೂಲಕ ಅವರು ಜನರ ಹೃದಯ ಗೆದ್ದಿದ್ದರು. ಅವರ ನಿಧನದಿಂದ ಸಿನಿಮಾ ಜಗತ್ತಿಗೆ ದೊಡ್ಡ ನಷ್ಟ ಆಗಿದೆ. ಈ ಕಷ್ಟದ ಸಂದರ್ಭದಲ್ಲಿ ಮಹೇಶ್ ಬಾಬು ಮತ್ತು ಅವರ ಕುಟುಂಬದವರಿಗಾಗಿ ನನ್ನ ಪ್ರಾರ್ಥನೆಗಳು. ಓಂ ಶಾಂತಿ’ ಎಂದು ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.
Krishna Garu was a legendary superstar, who won hearts of people through his versatile acting and lively personality. His demise is a colossal loss to the world of cinema and entertainment. In this sad hour my thoughts are with @urstrulyMahesh and his entire family. Om Shanti.
— Narendra Modi (@narendramodi) November 15, 2022
ತೆಲುಗು ಚಿತ್ರರಂಗದಲ್ಲಿ ಕೃಷ್ಣ ಘಟ್ಟಮನೇನಿ ಅವರು ಸೂಪರ್ ಸ್ಟಾರ್ ಆಗಿದ್ದರು. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ನಟನೆ ಮಾತ್ರವಲ್ಲದೇ ನಿರ್ದೇಶನ ಮತ್ತು ಸಿನಿಮಾ ನಿರ್ಮಾಣದಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ಮೂಲಕ ತೆಲುಗು ಚಿತ್ರರಂಗಕ್ಕೆ ಅವರು ಕೊಡುಗೆ ನೀಡಿದ್ದರು. ವಿವಿಧ ರೀತಿಯ ಪಾತ್ರಗಳನ್ನು ಮಾಡಿ ಜನಮನ ಗೆದ್ದಿದ್ದ ಕೃಷ್ಣ ಅವರು ಇಹಲೋಕ ತ್ಯಜಿಸಿರುವುದು ಅವರ ಅಪಾರ ಸಂಖ್ಯೆಯ ಅಭಿಮಾನಿ ಬಳಗಕ್ಕೆ ನೋವುಂಟು ಮಾಡಿದೆ.
ಹೃದಯಾಘಾತಕ್ಕೆ ಒಳಗಾಗಿದ್ದ ಕೃಷ್ಣ ಘಟ್ಟಮನೇನಿ ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಅವರು ಮಂಗಳವಾರ (ನ.15) ನಸುಕಿನ 4 ಗಂಟೆ ಸುಮಾರಿಗೆ ಕೊನೆಯುಸಿರು ಎಳೆದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಲಕ್ಷಾಂತರ ಜನರು ಪ್ರಾರ್ಥಿಸುತ್ತಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್, ಅಕ್ಕಿನೇನಿ ನಾಗಾರ್ಜುನ, ಕಾರ್ತಿ, ಜಗಪತಿ ಬಾಬು, ದೇವಿಶ್ರೀ ಪ್ರಸಾದ್ ಮುಂತಾದ ಸೆಲೆಬ್ರಿಟಿಗಳು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳು, ಆಪ್ತರು, ರಾಜಕೀಯ ಕ್ಷೇತ್ರದ ಗಣ್ಯರು ಬಂದು ಕೃಷ್ಣ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.