
ಮುಂದಿನ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ‘ಪುಷ್ಪ 2’ ಸಿನಿಮಾ (Pushpa 2) ಬಿಡುಗಡೆ ಆಗಲಿದೆ. ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಲು ಹತ್ತಾರು ಕಾರಣಗಳಿವೆ. 2021ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ‘ಪುಷ್ಪ’ ಚಿತ್ರಕ್ಕಾಗಿ ನಟ ಅಲ್ಲು ಅರ್ಜುನ್ (Allu Arjun) ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಹಾಗಾಗಿ ಆ ಸಿನಿಮಾದ ಸೀಕ್ವೆಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. 2024ರ ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ಇದು ಹೈವೋಲ್ಟೇಜ್ ಸಿನಿಮಾ ಆದ್ದರಿಂದ ಇದರ ಎದುರು ಪೈಪೋಟಿ ನೀಡಲು ಬಹುತೇಕ ಚಿತ್ರತಂಡಗಳು ಹಿಂದೇಟು ಹಾಕುತ್ತವೆ. ಆದರೆ ಬಾಲಿವುಡ್ನ ‘ಸಿಂಗಂ ಅಗೇನ್’ (Singham Again) ಸಿನಿಮಾ ಅಂತಹ ಸಾಹಸಕ್ಕೆ ಮುಂದಾಗಿದೆ. ಅಜಯ್ ದೇವಗನ್ ನಟನೆಯ ಆ ಚಿತ್ರ ಕೂಡ 2024ರ ಆ.15ರಂದು ಬಿಡುಗಡೆ ಆಗಲಿದೆ.
ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗದಂತೆ ನೋಡಿಕೊಳ್ಳಲು ನಿರ್ಮಾಪಕರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಹಾಗಿದ್ದರೂ ಕೂಡ ಕೆಲವೊಮ್ಮೆ ಈ ರೀತಿ ಪೈಪೋಟಿ ಸಂಭವಿಸುತ್ತದೆ. ‘ಪುಷ್ಪ 2’ ಮತ್ತು ‘ಸಿಂಗಂ ಅಗೇನ್’ ಸಿನಿಮಾಗಳ ವಿಚಾರದಲ್ಲಿ ಹಾಗೆಯೇ ಆಗುತ್ತಿದೆ. ಒಂದೇ ದಿನ ಈ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ. ಯಾವ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬ ಬಗ್ಗೆ ಅಭಿಮಾನಿಗಳು ಈಗಲೇ ಲೆಕ್ಕಚಾರ ಹಾಕಲು ಶುರು ಮಾಡಿದ್ದಾರೆ. ಈ ಸಿನಿಮಾಗಳ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ಅಷ್ಟರಲ್ಲಿ ರಿಲೀಸ್ ಡೇಟ್ ಬದಲಾದರೂ ಅಚ್ಚರಿ ಏನಿಲ್ಲ.
‘ಸಿಂಗಂ ಅಗೇನ್’ ಸಿನಿಮಾಗೆ ರೋಹಿತ್ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ದೇವಗನ್ ಮಾತ್ರವಲ್ಲದೇ ಅನೇಕ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರೀನಾ ಕಪೂರ್ ಖಾನ್, ದೀಪಿಕಾ ಪಡುಕೋಣೆ ಸಹ ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದೇ ಚಿತ್ರದಲ್ಲಿ ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ಅವರು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹಾಗಾಗಿ ಹಿಂದಿ ಪ್ರೇಕ್ಷಕರ ವಲಯದಲ್ಲಿ ಈ ಚಿತ್ರದ ಬಗ್ಗೆ ಹೈಪ್ ಹೆಚ್ಚುತ್ತಿದೆ. ‘ಪುಷ್ಪ 2’ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಉತ್ತರ ಭಾರತದಲ್ಲಿ ‘ಸಿಂಗಂ ಅಗೇನ್’ ಚಿತ್ರದ ವಿರುದ್ಧ ಪೈಪೋಟಿ ಹೆಚ್ಚಾಗಲಿದೆ.
ಪ್ರೇಕ್ಷಕರನ್ನು ಹೆದರಿಸಲು ಸಜ್ಜಾಗುತ್ತಿರುವ ನಟ ಅಜಯ್ ದೇವಗನ್; ‘ಭೋಲಾ’ ಸೋಲಿನ ಬಳಿಕ ಈ ನಿರ್ಧಾರ
‘ಪುಷ್ಪ 2’ ಸಿನಿಮಾದ ಹವಾ ಕಮ್ಮಿಯೇನಿಲ್ಲ. ನಿರ್ದೇಶಕ ಸುಕುಮಾರ್ ಅವರು ಈ ಚಿತ್ರವನ್ನು ಬಹಳ ದೊಡ್ಡದಾಗಿ ಕಟ್ಟಿಕೊಡುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಈ ಸಿನಿಮಾಗೆ ನೂರಾರು ಕೋಟಿ ರೂಪಾಯಿಯನ್ನು ಸುರಿಯುತ್ತಿದೆ. ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಶೂಟಿಂಗ್ ಭರದಿಂದ ಸಾಗುತ್ತಿದೆ. ರಿಲೀಸ್ ಡೇಟ್ ಅನೌನ್ಸ್ ಆದ ಬಳಿಕ ‘ಪುಷ್ಪ 2’ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.