ಕರ್ನಾಟಕದಲ್ಲಿ ‘ಪುಷ್ಪ 2’ ಟಿಕೆಟ್ ದರ 200 ರೂ. ಮೀರುವಂತಿಲ್ಲ; ಹಾಗಿದ್ರೆ ಮಾತ್ರ ರಿಲೀಸ್​ಗೆ ಅವಕಾಶ

| Updated By: ರಾಜೇಶ್ ದುಗ್ಗುಮನೆ

Updated on: Oct 28, 2024 | 2:30 PM

‘ಪುಷ್ಪ 2’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲು ದೊಡ್ಡ ತೊಡಕು ಎದುರಾಗಿದೆ. ಕನ್ನಡ ಚಿತ್ರರಂಗದವರು ಏಕರೂಪ ಟಿಕೆಟ್ ದರವನ್ನು ಆಗ್ರಹಿಸುತ್ತಿದ್ದಾರೆ. ಪುಷ್ಪ 2 ಚಿತ್ರದ ಟಿಕೆಟ್ ದರವನ್ನು 200 ರೂಪಾಯಿಗಳಿಗಿಂತ ಹೆಚ್ಚು ನಿಗದಿಪಡಿಸಿದರೆ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುವುದಾಗಿ ಚಿತ್ರರಂಗದ ಮುಖಂಡರು ಎಚ್ಚರಿಸಿದ್ದಾರೆ.

ಕರ್ನಾಟಕದಲ್ಲಿ ‘ಪುಷ್ಪ 2’ ಟಿಕೆಟ್ ದರ 200 ರೂ. ಮೀರುವಂತಿಲ್ಲ; ಹಾಗಿದ್ರೆ ಮಾತ್ರ ರಿಲೀಸ್​ಗೆ ಅವಕಾಶ
ಅಲ್ಲು ಅರ್ಜುನ್
Follow us on

‘ಪುಷ್ಪ 2’ ಸಿನಿಮಾ ರಿಲೀಸ್​​ಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಡಿಸೆಂಬರ್ 5ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಹೀಗಿರುವಾಗಲೇ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡಲು ದೊಡ್ಡ ತೊಡಕು ಉಂಟಾಗಿದೆ. ಈ ಚಿತ್ರದ ಬಿಸ್ನೆಸ್​ಗೆ ಕರ್ನಾಟಕದಲ್ಲಿ ದೊಡ್ಡ ಹೊಡೆತ ಉಂಟಾಗೋದು ಖಚಿತ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಆಗಿದ್ದು ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಇತ್ತೀಚೆಗೆ ‘ಪುಷ್ಪ 2’ ಈವೆಂಟ್​ನಲ್ಲಿ ಕರ್ನಾಟಕ ಹಂಚಿಕೆದಾರ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿದ್ದರು. ತೆಲುಗು ಮೂಲದ ಇವರು ‘ಪುಷ್ಪ 2’ ಚಿತ್ರ ಕರ್ನಾಟಕದಲ್ಲಿ ಭರ್ಜರಿ ಬಿಸ್ನೆಸ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದರು. ಪರಭಾಷೆಯವರು ಸುಲಭದಲ್ಲಿ ಈ ರೀತಿ ಬಿಸ್ನೆಸ್ ಮಾಡಿಕೊಂಡು ಹೋಗುತ್ತಿರುವ ವಿಚಾರವನ್ನು, ಹಾಗೂ ಟಿಕೆಟ್​ ದರಕ್ಕೆ ಕಡಿವಾಣ ಇಲ್ಲದನ್ನು ಕನ್ನಡ ಚಲಚಿತ್ರ ವಾಣಿಜ್ಯ ಮಂಡಳಿ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಏಕರೂಪ ಟಿಕೆಟ್ ದರದ ಕೂಗು ಕೂಡ ಎದ್ದಿದೆ.

ಈ ಬಗ್ಗೆ ಮಾತನಾಡಿರುವ ಸಾರಾ ಗೋವಿಂದು ಅವರು, ‘ಮಲ್ಟಿಪ್ಲೆಕ್ಸ್​ನಲ್ಲಿ ರಜಿನಿಕಾಂತ್ ಚಿತ್ರಕ್ಕೆ 6 ಸ್ಕ್ರೀನ್ ಕೊಟ್ಟರೆ ಕನ್ನಡ ಸಿನಿಮಾಗೆ 2 ಸ್ಕ್ರೀನ್ ಕೊಡಲಾಗಿತ್ತು. ಟಿಕೆಟ್ ಬೆಲೆ 1500 ರೂಪಾಯಿ ನಿಗದಿ ಮಾಡಲಾಗಿತ್ತು. ಇದರಿಂದ ನಮ್ಮ ಬೇರೆ ಭಾಷೆ ಅವರು ಇಲ್ಲಿಂದ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. 2017ರಲ್ಲಿ ಸಿಎಂ ಬಳಿ ಮಾತನಾಡಿದಾಗ ಟಿಕೆಟ್ ದರ 200 ರೂಪಾಯಿ ಮೀರುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಮಲ್ಟಿಪ್ಲೆಕ್ಸ್ ಅವರು ಈ ಆದಶಕ್ಕೆ ತಡೆ ತಂದಿದ್ದರು’ ಎಂದಿದ್ದಾರೆ.

‘ವಿತರಕರಿಗೆ ಈಗೇ ಹೇಳ್ತೀವಿ. ಬೇರೆ ಭಾಷೆ ಸಿನಿಮಾಗೆ ಹೆಚ್ಚು ದುಡ್ಡು ಕೊಟ್ಟು ತರಬೇಡಿ. ಏಕೆಂದರೆ ಟಿಕೆಟ್ ದರ 200 ರೂಪಾಯಿ ಆಗುತ್ತದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ 180, 150 ಟಿಕೆಟ್ ದರ ಇದ್ದರೆ ಇಲ್ಲಿ 1200 ರೂಪಾಯಿ ಇದೆ. ಪುಷ್ಪ 2 ಚಿತ್ರಕ್ಕೆ 200 ರೂಪಾಯಿಗಿಂತ ಜಾಸ್ತಿ ದರ ಇಟ್ಟರೆ ಪರಿಣಾಮ ನೆಟ್ಟಗೆ ಇರಲ್ಲ. ಥಿಯೇಟರ್​ಗೆ ಮುತ್ತಿಗೆ ಹಾಕೋದು ಫಿಕ್ಸ್’ ಎಂದು ಸಾರಾ ಗೋವಿಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ: ಒಬ್ಬನ ಉಳಿಸಿಕೊಂಡು ಇನ್ನೊಬ್ಬನ ಹೊರಗಟ್ಟಿದ ‘ಪುಷ್ಪ 2’ ತಂಡ

ಟಿಸಿ ವೆಂಕಟೇಶ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ನವೆಂಬರ್ 15ರ ಒಳಗೆ ಟಿಕೆಟ್ ವಿಚಾರದಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳದೇ ಇದ್ದರೆ ಪುಷ್ಪ ಚಿತ್ರವನ್ನು ರಿಲೀಸ್ ಮಾಡಲು ಬಿಡುವುದಿಲ್ಲ. 200 ರೂಪಾಯಿ ಟೆಕೆಟ್ ದರ ಫಿಕ್ಸ್ ಆದರೆ ಮಾತ್ರ ಪುಷ್ಪ ಸಿನಿಮಾ ರಿಲೀಸ್ ಮಾಡ್ತೇವೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.