ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ನಾಳೆ (ಡಿಸೆಂಬರ್ 05) ಬಿಡುಗಡೆ ಆಗುತ್ತಿದೆ. ಹಲವೆಡೆ ಇಂದು ರಾತ್ರಿಯಿಂದಲೇ ಸಿನಿಮಾ ಶೋಗಳು ಪ್ರದರ್ಶನಗೊಳ್ಳಲಿವೆ. ‘ಪುಷ್ಪ 2’ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಳ ಮಾಡಿರುವುದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಆಂಧ್ರ, ತೆಲಂಗಾಣದ ಜೊತೆಗೆ ಬೆಂಗಳೂರಿನಲ್ಲಿಯೂ ಟಿಕೆಟ್ ದರ ಗಗನಕ್ಕೇರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ರಾಮ್ ಗೋಪಾಲ್ ವರ್ಮಾ ಆಸಕ್ತಿಕರವಾದ ಟ್ವೀಟ್ ಮಾಡಿದ್ದಾರೆ. ‘ಪುಷ್ಪ 2’ ಸಿನಿಮಾವನ್ನು ಸುಬ್ಬಾರಾವ್ ಹೋಟೆಲ್‌ನ ಇಡ್ಲಿಗೆ ಹೋಲಿಸಿದ್ದಾರೆ.
‘ಸುಬ್ಬರಾವ್ ಎಂಬಾತ ಇಡ್ಲಿ ಹೋಟೆಲ್ ಪ್ರಾರಂಭ ಮಾಡಿ ಒಂದು ತಟ್ಟೆ ಇಡ್ಲಿಗಳ ಬೆಲೆ 1000 ರೂಪಾಯಿ ನಿಗದಿ ಪಡಿಸಿದ. ಆತನ ಇಡ್ಲಿಗಳು ಇತರ ಹೋಟೆಲ್ಗಳ ಇಡ್ಲಿಗಳಿಗಿಂತ ಶ್ರೇಷ್ಠವೆಂದು ನಂಬಿರುವ ಕಾರಣಕ್ಕೆ ಸುಬ್ಬರಾವ್, ತನ್ನ ಹೋಟೆಲ್‌ನ ಇಡ್ಲಿಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ನಿಗದಿಪಡಿಸಲು ಕಾರಣ. ಆದರೆ ಗ್ರಾಹಕನಿಗೆ ಸುಬ್ಬರಾವ್ ಇಡ್ಲಿ ಅಷ್ಟೇನೂ ಚೆನ್ನಾಗಿಲ್ಲ ಅನಿಸಿರೆ ಆತ ಸುಬ್ಬಾರಾವ್ ಹೋಟೆಲ್ಗೆ ಹೋಗುವುದಿಲ್ಲ. ಅದರಿಂದ ಸೋಲುವುದು ಸುಬ್ಬರಾಯರೇ ಹೊರತು ಬೇರೆ ಯಾರೂ ಅಲ್ಲ’ ಎಂದು ಕತೆ ಆರಂಭಿಸಿದ್ದಾರೆ ರಾಮ್ ಗೋಪಾಲ್ ವರ್ಮಾ.
“ಸುಬ್ಬರಾವ್ ಹೋಟೆಲ್ ಇಡ್ಲಿಗಳು ಸಾಮಾನ್ಯರಿಗೆ ಕೈಗೆಟುಕುವುದಿಲ್ಲ” ಎಂದು ಯಾರಾದರೂ ದೂರುತ್ತಿದ್ದರೆ, ಅದು “ಸೆವೆನ್ ಸ್ಟಾರ್ ಹೋಟೆಲ್ ಸಾಮಾನ್ಯರಿಗೆ ಕೈಗೆಟುಕುವುದಿಲ್ಲ” ಎಂದು ಅಳುವಷ್ಟೇ ಮೂರ್ಖತನದ ಹೇಳಿಕೆ. ಒಂದೊಮ್ಮೆ ಯಾರಾದರೂ “ನಾವು ಸೆವೆನ್ ಸ್ಟಾರ್ ಹೋಟೆಲ್‌ನ ವಾತಾವರಣಕ್ಕೆ, ಐಶಾರಾಮಿ ತನಕ್ಕೆ ಹೆಚ್ಚಿನ ಹಣ ನೀಡುತ್ತಿದ್ದೇವೆ” ಎಂದು ವಾದಿಸಿದರೆ, ಈ ವಿಷಯದಲ್ಲಿ ‘ಪುಷ್ಪ 2’ ಸಿನಿಮಾ ಎಂಬುದೇ ಸೆವೆನ್ ಸ್ಟಾರ್ ಹೋಟೆಲ್ಗೆ ಸಮ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ಹುಡುಕಾಟದಲ್ಲಿ ಪೊಲೀಸರು, ವಿಡಿಯೋ ಹರಿಬಿಟ್ಟ ನಿರ್ದೇಶಕ
‘ಪ್ರಜಾಸತ್ತಾತ್ಮಕ ಬಂಡವಾಳಶಾಹಿ ಎಂಬುದು ವರ್ಗ ವ್ಯತ್ಯಾಸದ ಮೇಲೆ ಕೆಲಸ ಮಾಡುತ್ತದೆ. ಎಲ್ಲಾ ಉತ್ಪನ್ನಗಳಂತೆ ಚಲನಚಿತ್ರಗಳು ಲಾಭಕ್ಕಾಗಿ ಮಾಡಲ್ಪಟ್ಟಿದೆಯೇ ಹೊರತು ಸಾರ್ವಜನಿಕ ಸೇವೆಗಾಗಿ ಅಲ್ಲ. ಐಷಾರಾಮಿ ಕಾರುಗಳು, ಐಷಾರಾಮಿ ಕಟ್ಟಡಗಳು, ಬ್ರಾಂಡೆಡ್ ಬಟ್ಟೆಗಳ ಬಗ್ಗೆ ಪ್ರಶ್ನೆ ಎತ್ತದ ಜನ ಚಲನಚಿತ್ರ ಟಿಕೆಟ್ ಬೆಲೆಗಳ ಬಗ್ಗೆ ಮಾತ್ರ ಏಕೆ ಪ್ರಶ್ನೆ ಮಾಡುತ್ತಿದ್ದಾರೆ’ ಎಂದು ವರ್ಮಾ ಪ್ರಶ್ನೆ ಮಾಡುತ್ತಿದ್ದಾರೆ.
ಮನರಂಜನೆ ಅತ್ಯಗತ್ಯವೇ? ಎಂಬ ಪ್ರಶ್ನೆಯನ್ನೂ ಕೇಳಿರುವ ರಾಮ್ ಗೋಪಾಲ್ ವರ್ಮಾ, ‘ವಸತಿ, ಊಟ, ಬಟ್ಟೆ ಈ ಮೂರಕ್ಕಿಂತ ಮನೊರಂಜನೆ ಅಗತ್ಯವೇ? ಹಾಗಿದ್ದರೆ, ಈ ಮೂರು ಅಗತ್ಯ ವಸ್ತುಗಳ ಬೆಲೆ ಬ್ರ್ಯಾಂಡಿಂಗ್ ಮತ್ತು ಬೆಲೆಗಳು ಆಕಾಶ ಮುಟ್ಟುತ್ತಿರುವಾಗ, ಆಕಾಶಷ್ಟು ವಿಶಾಲ ಸಿನಿಮಾ ಆಗಿರುವ ಪುಷ್ಪ 2 ಈಗ ನೀಡಿರುವ ಬೆಲೆ ಕೂಡ ಕಡಿಮೆಯೇ. ಟಿಕೆಟ್ ಬೆಲೆ ಹೆಚ್ಚು ಎಂದುಕೊಳ್ಳುವವರು ನೋಡದೇ ಇರಬಹುದು ಅಥವಾ ಟಿಕೆಟ್ ಬೆಲೆ ಕಡಿಮೆ ಆದ ಮೇಲೆ ನೋಡಬಹುದು ಅಲ್ಲವೆ’ ಎಂದು ವರ್ಮಾ ಕೇಳಿದ್ದಾರೆ.
‘ಮತ್ತೆ ಸುಬ್ಬರಾವ್ ಹೋಟೆಲ್ ಇಡ್ಲಿ ವಿಷಯಕ್ಕೆ ಬರುವುದಾದರೆ, ಸುಬ್ಬಾರಾವ್ ಹೋಟೆಲ್ ಇಡ್ಲಿಯ ಬೆಲೆ ಸರಿಯಾಗಿದೆ ಎಂದು ಈಗಾಗಲೇ ಪ್ರೂವ್ ಆಗಿಬಿಟ್ಟಿದೆ. ಸುಬ್ಬಾರಾವ್ ಅವರ ಯಾವುದೇ ಹೋಟೆಲ್‌ನಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲ, ಎಲ್ಲಾ ಸೀಟುಗಳು ಬುಕ್ ಆಗಿವೆ ಎಂಬುದೇ ಇದಕ್ಕೆ ಸಾಕ್ಷಿ’ ಎಂದಿದ್ದಾರೆ ವರ್ಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ