
ತೆಲುಗು ಚಿತ್ರರಂಗದ ಟಾಪ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಚಿತ್ರದ ಟಿಕೆಟ್ ದರವನ್ನು 50 ರೂಪಾಯಿ ಹೆಚ್ಚಿಸಲು ನಿರ್ಮಾಣ ಸಂಸ್ಥೆ ಅರ್ಜಿ ಸಲ್ಲಿಸಿದೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಆದರೆ, ಈ ಸುದ್ದಿಯನ್ನು ಚಿತ್ರದ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಖಂಡಿಸಿದ್ದು, ಅಧಿಕೃತ ಸ್ಪಷ್ಟನೆ ನೀಡಿದೆ.
‘ಎಕ್ಸ್’ ಖಾತೆಯಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿರುವ ಮೈತ್ರಿ ಮೂವೀ ಮೇಕರ್ಸ್, ‘ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ರಣಬಾಲಿ ಚಿತ್ರದ ಟಿಕೆಟ್ ದರ ಹೆಚ್ಚಳಕ್ಕಾಗಿ ನಾವು ಅರ್ಜಿ ಸಲ್ಲಿಸಿದ್ದೇವೆ ಎಂದು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ. ನಾವು ಯಾವುದೇ ಸರ್ಕಾರಕ್ಕೂ ಟಿಕೆಟ್ ದರ ಏರಿಕೆಗೆ ಮನವಿ ಮಾಡಿಲ್ಲ’ ಎಂದು ತಿಳಿಸಿದೆ.
ಅಲ್ಲದೆ, ‘ಈ ಹಬ್ಬದ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರಮಂದಿರದ ಅನುಭವ ನೀಡಲು ನಾವು ಬದ್ಧರಾಗಿದ್ದೇವೆ. ರಣಬಾಲಿ ಸಿನಿಮಾ ಸಾಮಾನ್ಯ ಟಿಕೆಟ್ ದರದಲ್ಲೇ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ’ ಎಂದು ನಿರ್ಮಾಪಕರು ಭರವಸೆ ನೀಡಿದ್ದಾರೆ. ಅಕ್ಟೋಬರ್ 16ರಂದು ದಸರಾ ಹಬ್ಬದ ಪ್ರಯುಕ್ತ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ರಣಬಾಲಿ’ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
There have been reports that we have applied for ticket price hikes in Andhra Pradesh for #Ranabaali.
We would like to clarify that these reports are completely false. We have not applied for any ticket price hikes in either of the Telugu States.
#Ranabaali will release at standard ticket prices, and we are confident that audiences will have a great cinematic experience this festive season.
#RanabaaliOnOct16th
— Mythri Movie Makers (@MythriOfficial) October 4, 2026
ತೆಲುಗು ರಾಜ್ಯಗಳಲ್ಲಿ ಪ್ರಮುಖ ಹಾಗೂ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರುವಾಗ ಆರಂಭದ ದಿನಗಳಲ್ಲಿ ಟಿಕೆಟ್ ದರ ಹೆಚ್ಚಿಸಿಕೊಳ್ಳುವುದು ಇತ್ತೀಚಿನ ಪದ್ಧತಿಯಾಗಿದೆ. ಆದರೆ ಆಂಧ್ರಪ್ರದೇಶ ಸರ್ಕಾರವು ಟಿಕೆಟ್ ದರದ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿರುವುದರಿಂದ, ಸರ್ಕಾರದ ಅನುಮತಿ ಇಲ್ಲದೆ ಬೆಲೆ ಹೆಚ್ಚಿಸುವಂತಿಲ್ಲ. ಹೆಚ್ಚುತ್ತಿರುವ ನಿರ್ಮಾಣ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಅಗತ್ಯ ಎಂದು ನಿರ್ಮಾಪಕರು ವಾದಿಸುತ್ತಾರಾದರೂ, ಸಾಮಾನ್ಯ ಸಿನಿಮಾ ಪ್ರೇಕ್ಷಕರಿಗೆ ಇದು ಹೊರೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ‘ಮೈತ್ರಿ ಮೂವೀ ಮೇಕರ್ಸ್’ ತೆಗೆದುಕೊಂಡಿರುವ ನಿರ್ಧಾರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ‘ರಣಬಾಲಿ’ ಟೀಸರ್: ಬ್ರಿಟಿಷರ ವಿರುದ್ಧ ಗುಡುಗಿದ ನಟ ವಿಜಯ್ ದೇವರಕೊಂಡ
ರಾಹುಲ್ ಸಾಂಕ್ರಿತ್ಯನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಣಬಾಲಿ’ 1854ರಿಂದ 1878ರವರೆಗಿನ ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ ನಡೆದ ನೈಜ ಹಾಗೂ ಐತಿಹಾಸಿಕ ಘಟನೆಗಳನ್ನು ಆಧರಿಸಿದ ಆ್ಯಕ್ಷನ್ ಡ್ರಾಮಾ ಚಿತ್ರವಾಗಿದೆ. ಬ್ರಿಟಿಷರ ವಿರುದ್ಧ ಹೋರಾಡುವ ಸಿಂಗನಮಲ ಬೊಬ್ಬಿಲಿ ರಣಬಾಲಿ ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡರೆ, ಅವರ ಧರ್ಮಪತ್ನಿ ಜಯಮ್ಮ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.