ದೈವಕ್ಕೆ ಅವಮಾನ ಮಾಡಿದ ಕೇಸ್: ಮಾರ್ಚ್ 9ರ ತನಕ ರಣವೀರ್ ಸಿಂಗ್ ನಿರಾಳ

ಗೋವಾ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದರು. ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಹೊಗಳುವ ಭರದಲ್ಲಿ ರಣವೀರ್ ಸಿಂಗ್ ಆ ರೀತಿ ಮಾಡಿದ್ದರು. ಅದರಿಂದಾಗಿ ವಿವಾದ ಸೃಷ್ಟಿ ಆಯಿತು.

ದೈವಕ್ಕೆ ಅವಮಾನ ಮಾಡಿದ ಕೇಸ್: ಮಾರ್ಚ್ 9ರ ತನಕ ರಣವೀರ್ ಸಿಂಗ್ ನಿರಾಳ
Rishab Shetty, Ranveer Singh

Updated on: Mar 02, 2026 | 7:20 PM

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಬಗ್ಗೆ ಮಾತನಾಡುವಾಗ ನಟ ರಣವೀರ್ ಸಿಂಗ್ ಅವರು ದೈವಕ್ಕೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು. ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಆ ಪ್ರಕರಣದಲ್ಲಿ ಮಾರ್ಚ್ 9ರವರೆಗೂ ರಣವೀರ್ ಸಿಂಗ್ ಅವರಿಗೆ ರಿಲೀಫ್ ಸಿಕ್ಕಿದೆ. ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದೆ. ಯುದ್ಧದಿಂದಾಗಿ ರಣವೀರ್ ಸಿಂಗ್ (Ranveer Singh) ಪರ ವಕೀಲರು ಇಂಗ್ಲೆಂಡ್‌ನಲ್ಲೇ ಉಳಿದಿದ್ದಾರೆ.

ವಿಮಾನವಿಲ್ಲದೇ ಭಾರತಕ್ಕೆ ವಾಪಸಾಗುತ್ತಿಲ್ಲವೆಂದು ಸಜನ್ ಪೂವಯ್ಯ ಹೇಳಿದ್ದಾರೆ. ‘ರಣವೀರ್ ಸಿಂಗ್‌ಗೆ ನೋಟಿಸ್ ನೀಡಿದ್ದೇವೆ, ಸಮಯ ಕೇಳಿದ್ದಾರೆ’ ಎಂದು ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ಹೇಳಿಕೆ ನೀಡಿದ್ದಾರೆ. ಪೊಲೀಸರು ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಮೊದಲು ನೀಡಿದ್ದ ಆದೇಶವನ್ನು ಮಾರ್ಚ್ 9ರವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.

ಏನಿದು ವಿವಾದ?
ಕಳೆದ ವರ್ಷ ನಡೆದ ಗೋವಾ ಚಲನಚಿತ್ರೋತ್ಸವದಲ್ಲಿ ರಣವೀರ್ ಸಿಂಗ್, ರಿಷಬ್ ಶೆಟ್ಟಿ ಮುಂತಾದವರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಮಾತನಾಡುವಾಗ ರಣವೀರ್ ಸಿಂಗ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿನ ರಿಷಬ್ ಶೆಟ್ಟಿಯ ನಟನೆಯನ್ನು ಹೊಗಳಿದರು. ಮಾತಿನ ಭರದಲ್ಲಿ ಅವರು ದೈವದ ಅನುಕರಣೆ ಮಾಡಿ ತೋರಿಸಿದರು.

ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದು ಆಕ್ಷೇಪಾರ್ಹವಾಗಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಖಂಡಿಸಿದರು. ದೈವವನ್ನು ನಂಬುವ ಜನರ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ ಎಂದು ಆರೋಪಿಸಿ ರಣವೀರ್ ಸಿಂಗ್ ವಿರುದ್ಧ ಕೇಸ್ ದಾಖಲಿಸಲಾಯಿತು. ಈ ಕೇಸ್​ ಕೈ ಬಿಡುವಂತೆ ರಣವೀರ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್​ನಲ್ಲಿ ಮುನ್ನಡೆ ಸಾಧಿಸಿದ ರಣವೀರ್ ಸಿಂಗ್ ಸಿನಿಮಾ

2025ರ ಡಿಸೆಂಬರ್ ತಿಂಗಳಲ್ಲಿ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಯಿತು. ಹೈಗ್ರೌಂಡ್ಸ್ ಪೊಲೀಸರು ಎಫ್​ಐಆರ್ ದಾಖಲು ಮಾಡಿದರು. ಆ ಪ್ರಕರಣವನ್ನು ಕೈ ಬಿಡುವಂತೆ ಮನವಿ ಮಾಡಿರುವ ರಣವೀರ್ ಸಿಂಗ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಮಾರ್ಚ್ 9ರವರೆಗೂ ಅವರಿಗೆ ರಿಲೀಫ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us