ಸ್ಯಾಂಡಲ್ವುಡ್ ಸುಂದರಿ, ಸೌತ್ ಸಿನಿರಂಗದ ಸೆನ್ಸೇಷನಲ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಖ್ಯಾತ ನಟಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಂತೆ ಇತ್ತ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು. ಆದರೀಗ ನಟಿಯು ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಚಿಕಿತ್ಸೆಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಫೋಟೋ ಹಂಚಿಕೊಳ್ಳುವ ಮೂಲಕ ಹೈದಾಬಾದ್ನಲ್ಲಿನ (Hyderabad) ಪ್ರಮುಖ ಆರ್ಥೋ ಸ್ಪೆಷಲಿಸ್ಟ್ (Ortho Specialist) ಗುರುವಾ ರೆಡ್ಡಿ (Dr. Guruva Reddy) ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೆಲ ತಿಂಗಳಿಂದ ಸತತ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಕೊಡಗಿನ ಬೆಡಗಿ ಮೊಣಕಾಲಿನ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಅವರನ್ನು ಭೇಟಿಯಾಗಿ ಚಿಕಿತ್ಸೆ ಪಡೆದರು. ಈ ವೇಳೆ ನಟಿಯ ಜೊತೆಗೆ ತೆಗೆದ ಫೋಟೋವನ್ನು ವೈದ್ಯರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಸಮಸ್ಯೆಯನ್ನು ಹಾಸ್ಯಾತ್ಮಕವಾಗಿ ವಿವರಿಸಿರುವ ಗುರುವ ರೆಡ್ಡಿ, ”ಸಾಮಿ..ಸಾಮಿ.. ಎಂದು ಮೊಣಕಾಲಿನ ಮೇಲೆ ಭಾರ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದೀರಿ.. ಈಗ ನೋವು ಬಂದಿದೆ! ಮೊಣಕಾಲು ನೋವಿನಿಂದ ನನ್ನ ಬಳಿಗೆ ಬಂದಿದ್ದೀರಿ ಎಂದು ಶ್ರೀವಲ್ಲಿಗೆ ನಾನು ಹೇಳಿದೆ ಎಂದು ಗುರುವಾ ರೆಡ್ಡಿ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಪುಷ್ಪಾ ಚಿತ್ರದಲ್ಲಿ ಸಾಮಿ ಸಾಮಿ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಮಿಂಚಿದ್ದ ರಶ್ಮಿಕಾಗೆ ಆ ಬಳಿಕ ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನ ಡ್ಯಾನ್ಸ್ ಸ್ಟೆಪ್ಸ್ಗಳು ಸಿಗುತ್ತಿವೆ. ಇದೇ ಕಾರಣದಿಂದ ಮೊಣಕಾಲಿನ ಸಮಸ್ಯೆಗೆ ಒಳಗಾಗಿರುವ ಸಾಧ್ಯತೆಯಿದೆ. ಸದ್ಯ ಅಲ್ಲು ಅರ್ಜುನ್ ಜೊತೆ ಪುಷ್ಪಾ ಹಾಗೂ ತಮಿಳಿನ ಸೂಪರ್ ಸ್ಟಾರ್ ವಿಜಯ್ ಜೊತೆ ವಾರಿಸು ಚಿತ್ರದಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಫುಲ್ ಬ್ಯುಸಿಯಾಗಿದ್ದಾರೆ.
ಅಷ್ಟೇ ಅಲ್ಲದೇ ಈಗಾಗಲೇ ಗುಡ್ ಬೈ ಚಿತ್ರದ ಮೂಲಕ ಬಾಲಿವುಡ್ಗೂ ಲಗ್ಗೆಯಿಟ್ಟಿರುವ ಕೊಡಗಿನ ಬೆಡಗಿ ಮಿಷನ್ ಮಜ್ನು ಹಾಗೂ ಅನಿಮಲ್ ಚಿತ್ರಗಳ ಮೂಲಕ ಬಿಟೌನ್ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ. ಸದ್ಯ ಸೀತಾ ರಾಮಂ ಚಿತ್ರದ ಗೆಲುವಿನ ಖುಷಿಯಲ್ಲಿರುವ ರಶ್ಮಿಕಾ ಇದೀಗ ಬಾಲಿವುಡ್ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ವಿಶೇಷ.
Published On - 11:36 am, Sat, 24 September 22