ನಟಿ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನದಲ್ಲಿ ‘ಪುಷ್ಪ 2’ ಸಿನಿಮಾ ಅತಿ ಮುಖ್ಯವಾಗಿದೆ. ಅಲ್ಲು ಅರ್ಜುನ್ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವ ಎಲ್ಲ ಸೂಚನೆಗಳನ್ನು ಈ ಸಿನಿಮಾ ನೀಡಿದೆ. ಡಿಸೆಂಬರ್ 5ರಂದು ವಿಶ್ವಾದ್ಯಂತ ‘ಪುಷ್ಪ 2’ ಬಿಡುಗಡೆ ಆಗಲಿದೆ. ಸದ್ಯಕ್ಕೆ ಸಿನಿಮಾದ ಕೊನೆಯ ಹಂತದ ಕೆಲಸಗಳು ಚಾಲ್ತಿಯಲ್ಲಿವೆ. ಆ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈಗ ಅವರು ಡಬ್ಬಿಂಗ್ ಮಾಡುತ್ತಿದ್ದಾರೆ.
ಸುಕುಮಾರ್ ನಿರ್ದೇಶನ ಮಾಡಿರುವ ‘ಪುಷ್ಪ 2’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಶ್ರೀವಲ್ಲಿ ಎಂಬ ಪಾತ್ರ ಇದೆ. ‘ಪುಷ್ಪ’ ಚಿತ್ರದಲ್ಲಿ ಈ ಪಾತ್ರ ಹೈಲೈಟ್ ಆಗಿತ್ತು. ಈಗ 2ನೇ ಪಾರ್ಟ್ನಲ್ಲೂ ಆ ಪಾತ್ರ ಮುಂದುವರಿಯುತ್ತಿದೆ. ತಮ್ಮ ಪಾತ್ರಕ್ಕೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಡಬ್ಬಿಂಗ್ ಮಾಡುತ್ತಿದ್ದು, ಸ್ಟುಡಿಯೋದಿಂದಲೇ ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
‘ತಮಾಷೆ ಮತ್ತು ಆಟಗಳು ಮುಗಿದಿವೆ. ಈಗ ಬಿಸ್ನೆಸ್ ಶುರು ಮಾಡೋಣ. ಇದರ ಅರ್ಥ ಏನೆಂದರೆ, ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯ ಆಗಿದೆ. ಈ ಸಿನಿಮಾದ ಫಸ್ಟ್ ಹಾಫ್ಗೆ ಡಬ್ಬಿಂಗ್ ಮುಗಿದಿದೆ. ಈಗ ನಾನು ಸೆಕೆಂಡ್ ಹಾಫ್ಗೆ ಡಬ್ಬಿಂಗ್ ಮಾಡುತ್ತಿದ್ದೇನೆ. ಈ ಚಿತ್ರದ ಮೊದಲಾರ್ಥ ಅದ್ಭುತವಾಗಿದೆ. ದ್ವಿತೀಯಾರ್ಧ ಇನ್ನೂ ಚೆನ್ನಾಗಿದೆ. ಅದನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ನಿಮಗೂ ಅದ್ಭುತ ಅನುಭವ ಸಿಗಲಿದೆ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮುಂದಿನ 10 ತಿಂಗಳಲ್ಲಿ ರಿಲೀಸ್ ಆಗಲಿದೆ ರಶ್ಮಿಕಾ ಮಂದಣ್ಣ ನಟನೆಯ ಐದು ಸಿನಿಮಾಗಳು
ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರು ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಈ ಫೋಟೋ ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಮುಗಿಯುತ್ತಿದೆ ಎಂಬುದಕ್ಕೆ ರಶ್ಮಿಕಾ ಮಂದಣ್ಣ ಅವರು ಬೇಸರ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.