
ರಶ್ಮಿಕಾ ಮಂದಣ್ಣ, ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಬ್ಯುಸಿ ಪ್ಯಾನ್ ಇಂಡಿಯಾ ನಟಿ. ಇದೇ ವರ್ಷ ಮುವೆ ಆಗಿರುವ ರಶ್ಮಿಕಾ ಪ್ರಸ್ತುತ ಸಾಲು ಸಾಲು ಸಿನಿಮಾಗಳೊಂದಿಗೆ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ನಟನಾ ವೃತ್ತಿಯನ್ನು ಆರಂಭಿಸಿದಾಗಿನಿಂದಲೂ ಟ್ರೋಲಿಂಗ್ ಭೂತ ಅವರ ಬೆನ್ನಿಗೆ ಬಿದ್ದಿದೆ. ನಾನಾ ಕಾರಣಗಳಿಗೆ ಅವರು ವರ್ಷಗಳಿಂದಲೂ ಟ್ರೋಲ್ ಆಗುತ್ತಲೇ ಬಂದಿದ್ದಾರೆ. ಚಿತ್ರರಂಗಕ್ಕೆ ಬಂದ ಇಷ್ಟು ವರ್ಷಗಳಲ್ಲಿ ಈ ಟ್ರೋಲ್, ಟೀಕೆ, ನಿಂದನೆಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದನ್ನು ಕಲಿತಂತಿರುವ ನಟಿ ರಶ್ಮಿಕಾ, ಇದೀಗ ಅದೇ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಪತಿ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ ಪೀರಿಯಾಡಿಕ್ ಆಕ್ಷನ್ ಡ್ರಾಮಾ ಚಿತ್ರ ‘ರಣಬಾಲಿ’ ಬಿಡುಗಡೆಗೆ ಸಜ್ಜಾಗಿದೆ. ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 16ರಂದು ಈ ಸಿನಿಮಾ ತೆರೆಕಾಣಲಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ತೀವ್ರಗೊಳಿಸಿದೆ. ಆದರೆ ಸಿನಿಮಾದ ಕಥೆ ಮತ್ತು ನಿರೀಕ್ಷೆಗಳಿಗಿಂತ ಹೆಚ್ಚಾಗಿ, ವಿಜಯ್ ಹಾಗೂ ರಶ್ಮಿಕಾ ನಡುವಿನ ವೈಯಕ್ತಿಕ ಒಡನಾಟ ಹಾಗೂ ಪ್ರಮೋಷನಲ್ ಇವೆಂಟ್‌ಗಳಲ್ಲಿ ರಶ್ಮಿಕಾ ಅವರ ಅತಿ ಹೆಚ್ಚು ಉತ್ಸಾಹ ಮತ್ತು ನಗು ಇಂಟರ್‌ನೆಟ್‌ನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.
ಪ್ರಚಾರದ ಸಂದರ್ಭಗಳಲ್ಲಿ ರಶ್ಮಿಕಾ ಮಂದಣ್ಣ ಅತ್ಯಂತ ಸರಳವಾಗಿ, ಉತ್ಸಾಹಭರಿತವಾಗಿ ಮತ್ತು ನಗುನಗುತ್ತಾ ಕಾಣಿಸಿಕೊಳ್ಳುವುದನ್ನು ಕೆಲವರು ಮೆಚ್ಚಿದರೆ, ಇನ್ನು ಕೆಲವರು ಇದನ್ನು ಟೀಕಿಸಿ, ‘ಓವರ್ ಆಕ್ಟಿಂಗ್, ಕ್ರಿಂಜ್, ನಕಲಿ ನಗು’ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾಗೆ ನೇರ ಪ್ರಶ್ನೆ ಎದುರಾದಾಗ, ‘ನಾನು ಎಲ್ಲೇ ಇದ್ದರೂ ಆ ವಾತಾವರಣವನ್ನು ಸದಾ ಸಮಾಧಾನ ಹಾಗೂ ಸಂತೋಷದಿಂದ ಕೂಡಿರುವಂತೆ ನೋಡಿಕೊಳ್ಳಲು ಇಷ್ಟಪಡುತ್ತೇನೆ, ಹಾಗಾಗಿಯೇ ನಾನು ಖುಷಿಯಿಂದ, ನಗು-ನಗುತ್ತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:‘ಮೈಸಾ’ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದು ಹೇಗೆ?
‘ನನ್ನ ಜೊತೆ ಇರುವವರೊಂದಿಗೆ ನಗುತ್ತಾ, ಪ್ರೀತಿಯಿಂದ ಮಾತನಾಡುವುದು ತನ್ನ ಹುಟ್ಟುಗುಣ ಮತ್ತು ಸ್ವಾಭಾವಿಕ ಸ್ವಭಾವ’ ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದಾರೆ. ‘ನನ್ನ ಈ ವರ್ತನೆಯನ್ನು ಕೆಲವರು ‘ಓವರ್ ಆಕ್ಟಿಂಗ್’ ಅಥವಾ ‘ಕ್ರಿಂಜ್’ ಎಂದು ಟೀಕಿಸಿದರೂ, ಆ ಟೀಕೆಗಳನ್ನು ನಾನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಜಗತ್ತಿನಲ್ಲಿ ಎಲ್ಲರ ಮೆಚ್ಚುಗೆಯನ್ನು ಗಳಿಸುವುದು ಅಸಾಧ್ಯ, ನನಗೆ ಸರಿ ಎನಿಸಿದಂತೆ ಸಹಜವಾಗಿ ಬದುಕುವುದೇ ಮುಖ್ಯ. ಇತರರ ಟೀಕೆಗಳು ಮತ್ತು ಅಭಿಪ್ರಾಯಗಳಿಗಾಗಿ ತನ್ನ ಮೂಲ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ಕುಟುಂಬದವರು ಹಾಗೂ ಹತ್ತಿರದ ಸ್ನೇಹಿತರು ತಮ್ಮ ಈ ಧನಾತ್ಮಕ ಶಕ್ತಿ ಹಾಗೂ ಉತ್ಸಾಹವನ್ನು ಮೆಚ್ಚಿಕೊಳ್ಳುವುದರಿಂದ, ಸಮಾಜದ ಟೀಕೆಗಳಿಗೆ ಭಯಪಟ್ಟು ತಮ್ಮ ಸ್ವಭಾವವನ್ನು ಬದಲಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಅವರು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಟಿಸಿರುವ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ. ಅದರ ಜೊತೆಗೆ ‘ಮೈಸಾ’ ಸಿನಿಮಾನಲ್ಲಿ ನಟಿಸಿದ್ದು ಅದೂ ಸಹ ಇದೇ ವರ್ಷ ತೆರೆಗೆ ಬರಲಿದೆ. ಇವುಗಳ ಜೊತೆಗೆ ‘ರಾಕಾ’ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಬಳಿಕ ಕೆಲ ಹಿಂದಿ ಸಿನಿಮಾ ಮತ್ತು ತಮಿಳು ಸಿನಿಮಾಗಳಲ್ಲಿ ಸಹ ರಶ್ಮಿಕಾ ನಟನೆ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ