‘ಕಾಂತಾರ 1’ ಬಳಿಕ ಹೊಸ ಸಿನಿಮಾಕ್ಕೆ ರಿಷಬ್ ಸಜ್ಜು, ಮುಹೂರ್ತ ಎಲ್ಲಿ? ಎಂದು?

Rishab Shetty: ‘ಕಾಂತಾರ’ದಂಥಹಾ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಪೌರಾಣಿಕ ಕತೆಯಲ್ಲಿಯೇ ನಾಯಕನಾಗಿ ನಟಿಸಲಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶುರುವಾಗುವ ಮುಂಚೆಯೇ ಘೋಷಣೆಯಾಗಿದ್ದ ‘ಜೈ ಹನುಮಾನ್’ ಸಿನಿಮಾ ಇದೀಗ ಪ್ರಾರಂಭ ಆಗುತ್ತಿದ್ದು, ಶೀಘ್ರವೇ ಮುಹೂರ್ತ ನಡೆಯಲಿದೆ.

‘ಕಾಂತಾರ 1’ ಬಳಿಕ ಹೊಸ ಸಿನಿಮಾಕ್ಕೆ ರಿಷಬ್ ಸಜ್ಜು, ಮುಹೂರ್ತ ಎಲ್ಲಿ? ಎಂದು?
Rishab Shetty

Updated on: Feb 12, 2026 | 5:20 PM

ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಮೂಲಕ ಭರ್ಜರಿ ಹಿಟ್ ನೀಡಿರುವ ರಿಷಬ್ ಶೆಟ್ಟಿ, ಇದೀಗ ಹೊಸದೊಂದು ಸಿನಿಮಾ ಪ್ರಾರಂಭ ಮಾಡತ್ತಿದ್ದಾರೆ. ‘ಕಾಂತಾರ’ದಂಥಹಾ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಪೌರಾಣಿಕ ಕತೆಯಲ್ಲಿಯೇ ನಾಯಕನಾಗಿ ನಟಿಸಲಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶುರುವಾಗುವ ಮುಂಚೆಯೇ ಘೋಷಣೆಯಾಗಿದ್ದ ‘ಜೈ ಹನುಮಾನ್’ ಸಿನಿಮಾ ಇದೀಗ ಪ್ರಾರಂಭ ಆಗುತ್ತಿದ್ದು, ಶೀಘ್ರವೇ ಮುಹೂರ್ತ ನಡೆಯಲಿದೆ.

ತೆಲುಗಿನ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಲಿರುವ ‘ಜೈ ಹನುಮಾನ್’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಸಿನಿಮಾದ ಮುಹೂರ್ತ ಫೆಬ್ರವರಿ 22 ರಂದು ಹಂಪಿಯಲ್ಲಿ ನಡೆಯಲಿದೆ. ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಆದರೂ ಸಿನಿಮಾದ ಮುಹೂರ್ತವನ್ನು ಹಂಪಿಯಲ್ಲಿ ನಡೆಸುತ್ತಿರಲು ಪ್ರಮುಖ ಕಾರಣವೂ ಇದೆ.

ಹಂಪಿಯು ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿದ್ದು, ಈ ಕಾರಣದಿಂದಲೇ ಚಿತ್ರತಂಡವು ಈ ಪವಿತ್ರ ಸ್ಥಳವನ್ನು ಚಿತ್ರದ ಅಧಿಕೃತ ಚಾಲನೆಗೆ ಆಯ್ಕೆ ಮಾಡಿಕೊಂಡಿದೆ. ಫೆಬ್ರವರಿ 22 ರಂದು ನಡೆಯಲಿರುವ ಈ ಪೂಜಾ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ರಿಷಬ್ ಶೆಟ್ಟಿ-ಪ್ರಗತಿ ದಾಂಪತ್ಯಕ್ಕೆ 9 ವರ್ಷ; ಮುದ್ದಾದ ವಿಡಿಯೋ ಹಂಚಿಕೊಂಡ ದಂಪತಿ

‘ಜೈ ಹನುಮಾನ್’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ಹನುಮಂತ ದೇವರ ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಪುಷ್ಪ’, ‘ಪುಷ್ಪ 2’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ದುಬಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಪ್ರಶಾಂತ್ ವರ್ಮಾ ನಿರ್ದೇಶಿಸಿ ಸೂಪರ್ ಹಿಟ್ ಆಗಿದ್ದ ‘ಹನುಮ್ಯಾನ್’ ಸಿನಿಮಾದ ಮುಂದುವರಿದ ಭಾಗ ಇದು ಎನ್ನಲಾಗುತ್ತಿದ್ದು, ಈ ಸಿನಿಮಾ ಸಂಪೂರ್ಣವಾಗಿ ಹನುಮಂತನ ಶಕ್ತಿ ಮತ್ತು ಸಾಹಸಗಳ ಮೇಲೆ ಕೇಂದ್ರೀಕೃತವಾಗಿರಲಿದೆ. ಕಲಿಯುಗದಲ್ಲಿ ಹನುಮಂತನ ಆಗಮನ ಹೇಗಿರುತ್ತದೆ ಎಂಬ ಕಲ್ಪನೆಯನ್ನು ನಿರ್ದೇಶಕ ಪ್ರಶಾಂತ್ ವರ್ಮ ತೆರೆಯ ಮೇಲೆ ತರಲಿದ್ದಾರೆ.

ಮೂಲಗಳ ಪ್ರಕಾರ, ಮುಹೂರ್ತ ಮುಗಿದ ಬಳಿಕ ಏಪ್ರಿಲ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಪ್ರಶಾಂತ್ ವರ್ಮ ಈಗಾಗಲೇ ಸ್ಕ್ರಿಪ್ಟ್ ಮತ್ತು ವಿಎಫ್‌ಎಕ್ಸ್ ಕೆಲಸಗಳಿಗಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ವ್ಯಯಿಸಿದ್ದಾರೆ. ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾಕ್ಕಾಗಿ ದೇಹವನ್ನು ಇನ್ನಷ್ಟು ಹುರಿಗೊಳಿಸಿಕೊಂಡಿದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಬಳಿಕ ಛತ್ರಪತಿ ಶಿವಾಜಿ ಜೀವನ ಆಧರಿತ ಹಿಂದಿ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ