ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ಇಂದು (ಮಾರ್ಚ್ 25) ರಿಲೀಸ್ ಆಗಿ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡೋಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ವಿಶ್ವಾದ್ಯಂತ 8,000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಿಂದ ರಾಜಮೌಳಿ ಖಾತೆಗೆ ಮತ್ತೊಂದು ಯಶಸ್ಸು ಸೇರ್ಪಡೆ ಆಗಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ ಸಿನಿಮಾದ ಒಟ್ಟೂ ಕಲೆಕ್ಷನ್ಗೆ ಹೊಡೆತ ನೀಡುವ ಘಟನೆ ಒಂದು ನಡೆದಿದೆ. ‘ಆರ್ಆರ್ಆರ್’ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿದೆ.
ತಂತ್ರಜ್ಞಾನ ಮುಂದುವರಿದಂತೆ, ಇಂಟರ್ನೆಟ್ ಬಳಕೆ ಹೆಚ್ಚಿದಂತೆ ಪೈರಸಿ ಕಾಟ ಜೋರಾಗಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಆನ್ಲೈನ್ನಲ್ಲಿ ಸಿನಿಮಾಗಳು ಲೀಕ್ ಆಗುತ್ತವೆ. ಸಣ್ಣ ಚಿತ್ರಗಳಿಂದ ಹಿಡಿದು, ದೊಡ್ಡ ಬಜೆಟ್ ಚಿತ್ರಗಳವರೆಗೆ ಎಲ್ಲರೂ ಪೈರಸಿ ಕಾಟದ ಸಂತ್ರಸ್ತರು. ಈಗ ‘ಆರ್ಆರ್ಆರ್’ ಚಿತ್ರ ಕೂಡ ಪೈರಸಿ ಕಾಟಕ್ಕೆ ಒಳಗಾಗಿದೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಚಿತ್ರ ಟೊರೆಂಟ್, ಟೆಲಿಗ್ರಾಮ್ ಮೊದಲಾದ ಕಡೆಗಳಲ್ಲಿ ಹರಿದಾಡಿದೆ. ಇದು ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪ್ರಭಾವ ಬೀರಬಹುದು.
ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ‘ಬಾಬುಬಲಿ 2’ ದಾಖಲೆಯನ್ನು ‘ಆರ್ಆರ್ಆರ್’ ಮುರಿಯುವ ನಿರೀಕ್ಷೆ ಇದೆ. ಮೊದಲ ದಿನ ಬಹುತೇಕ ಶೋಗಳು ಸೋಲ್ಡ್ಔಟ್ ಆಗಿರುವುದರಿಂದ ಚಿತ್ರದ ಗಳಿಕೆ ಹೆಚ್ಚಬಹುದು. ಆದರೆ, ಸಿನಿಮಾ ಲೀಕ್ ಆಗಿರುವುದರಿಂದ ಒಟ್ಟಾರೆ ಚಿತ್ರದ ಗಳಿಕೆಯಲ್ಲಿ ಕುಸಿತ ಕಾಣಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ, ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ ‘ಬಾಹುಬಲಿ 2’ ಚಿತ್ರವನ್ನು ‘ಆರ್ಆರ್ಆರ್’ ಹಿಂದಿಕ್ಕಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಅಭಿಮಾನಿಗಳು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲ ಕಡೆಗಳಿಂದಲೂ ಸೂಪರ್ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ನಿರ್ದೇಶಕ ರಾಜಮೌಳಿ ಅವರ ಕೆಲಸಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಕರ್ನಾಟಕದಲ್ಲೂ ‘ಆರ್ಆರ್ಆರ್’ ಸಿನಿಮಾದ ಅಬ್ಬರ ಜೋರಾಗಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭ ಆಗಿತ್ತು. ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಮುಗಿಬಿದ್ದು ಟಿಕೆಟ್ ಖರೀದಿಸಿ, ಮೊದಲ ಶೋ ಕಣ್ತುಂಬಿಕೊಂಡ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಕಲಾವಿದರ ಅಭಿನಯ, ಮನಸೆಳೆಯುವ ಕಥೆ, ರಾಜಮೌಳಿ ಅವರ ನಿರ್ದೇಶನವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಕಲಾವಿದರಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ನಟಿಸಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: RRR Review: ಆರ್ಆರ್ಆರ್ ವಿಮರ್ಶೆ; ನೀರು-ಬೆಂಕಿ ಹಿಡಿದು ತೆರೆಮೇಲೆ ರಾಜಮೌಳಿ ಮ್ಯಾಜಿಕ್
‘RRR’ ನೋಡಲು ಬಂದರು, ಪುನೀತ್ಗೆ ಜೈಕಾರ ಹಾಕಿದರು; ಅಪ್ಪು ಮೇಲಿನ ಅಭಿಮಾನ ನಿರಂತರ