‘ಕೆಜಿಎಫ್’ ಸರಣಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ಪ್ರಶಾಂತ್ ನೀಲ್ಗೆ ಬೇಡಿಕೆ ಹೆಚ್ಚಿದೆ. ಪರಭಾಷೆಯ ಸ್ಟಾರ್ ಹೀರೋಗಳು ಹಾಗೂ ನಿರ್ಮಾಪಕರು ಪ್ರಶಾಂತ್ ಜತೆ ಕೆಲಸ ಮಾಡೋಕೆ ಕಾದು ಕೂತಿದ್ದಾರೆ. ಈಗಾಗಲೇ ಅವರು ಟಾಲಿವುಡ್ ಸ್ಟಾರ್ ನಟ ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ನಿರ್ದೇಶನ ಮಾಡುತ್ತಿರುವ ‘ಸಲಾರ್’ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹೀಗಿರುವಾಗಲೇ ಅವರು ಜ್ಯೂ.ಎನ್ಟಿಆರ್ ಜತೆ ಕೈ ಜೋಡಿಸಿದ್ದಾರೆ. ಅಚ್ಚರಿ ಎಂದರೆ ಸಿನಿಮಾದ ಒಂದೆಳೆ ಈಗ ಲೀಕ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿವೆ.
ಟಾಲಿವುಡ್ ಸ್ಟಾರ್ ನಟ ಜ್ಯೂ. ಎನ್ಟಿಆರ್ ಮೇ 26ರಂದು 38ನೇ ಜನ್ಮದಿನ ಆಚರಿಸಿಕೊಂಡಿದ್ದರು. ಈ ವಿಶೇಷ ದಿನದಂದು ಅವರ ಮುಂದಿನ ಚಿತ್ರದ ಬಗ್ಗೆ ಘೋಷಣೆ ಆಗಿತ್ತು. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಈ ಬಗ್ಗೆ ಟ್ವೀಟ್ ಮಾಡಿ ಪ್ರಶಾಂತ್ ನೀಲ್-ಜ್ಯೂ. ಎನ್ಟಿಆರ್ ಒಟ್ಟಿಗೆ ಕೆಲಸ ಮಾಡುವ ವಿಚಾರವನ್ನು ಅಧಿಕೃತ ಮಾಡಿತ್ತು.
ಈಗ ಕೇಳಿ ಬರುತ್ತಿರುವ ಹೊಸ ಮಾಹಿತಿ ಪ್ರಕಾರ, ಜ್ಯೂ. ಎನ್ಟಿಆರ್ ಸೇನಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸಿನಿಮಾದ ಕಥೆ ಭಾರತ-ಪಾಕ್ ಗಡಿ ಹಿನ್ನೆಲೆಯಲ್ಲಿ ಸಾಗಲಿದೆಯಂತೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಶೂಟಿಂಗ್ಗೆ ಚಿತ್ರತಂಡ ಗಡಿ ಭಾಗಕ್ಕೆ ತೆರಳಲಿದೆಯೇ ಎನ್ನುವ ಕುತೂಹಲ ಮೂಡಿದೆ.
ಈ ರೀತಿಯ ಕಥೆಯಲ್ಲಿ ಜ್ಯೂ.ಎನ್ಟಿಆರ್ ಈ ಮೊದಲು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ, ಅವರ ಹೊಸ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅಂದಹಾಗೆ, ಸಿನಿಮಾ ಕೆಲಸಗಳು ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಜ್ಯೂ. ಎನ್ಟಿಆರ್ ಸದ್ಯ, ಆರ್ಆರ್ಆರ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಎಸ್.ಎಸ್. ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ರಿಲೀಸ್ಗೆ ರೆಡಿ ಇದೆ. ಸಲಾರ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.
ಇದನ್ನೂ ಓದಿ: ಎನ್ಟಿಆರ್ಗೆ ಭಾರತ ರತ್ನ ಕೊಡಿ; ಲೆಜೆಂಡರಿ ನಟನ ಜನ್ಮದಿನದಂದು ಬೇಡಿಕೆಯಿಟ್ಟ ಮೆಗಾಸ್ಟಾರ್ ಚಿರಂಜೀವಿ