AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಫಿ ಸಾಕ್ಷಿ ಭೀತಿ; ಜೈಲಿನಲ್ಲಿ ಊಟ, ನಿದ್ರೆಯಿಲ್ಲದೆ ಕಳೆದ ನಟ ದರ್ಶನ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಆಪ್ತ ಪ್ರದೂಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವುದು ತೀವ್ರ ಆತಂಕ ತಂದೊಡ್ಡಿದೆ. ಇದರಿಂದಾಗಿ ರಾತ್ರಿಯಿಡೀ ನಿದ್ರೆಯಿಲ್ಲದೆ ಊಟವನ್ನೂ ತೊರೆದ ದರ್ಶನ್, ಪ್ರಕರಣದ ಭವಿಷ್ಯ ಹಾಗೂ ಎದುರಾಗಲಿರುವ ಸಂಕಷ್ಟಗಳ ಕುರಿತು ಜೈಲಿನಲ್ಲಿ ತೀವ್ರ ಚಿಂತಾಕ್ರಾಂತರಾಗಿ ಮೌನಕ್ಕೆ ಶರಣಾಗಿದ್ದಾರೆ.

ಮಾಫಿ ಸಾಕ್ಷಿ ಭೀತಿ; ಜೈಲಿನಲ್ಲಿ ಊಟ, ನಿದ್ರೆಯಿಲ್ಲದೆ ಕಳೆದ ನಟ ದರ್ಶನ್‌
ದರ್ಶನ್
ಶಿವಪ್ರಸಾದ್​ ಬಿ.
| Edited By: |

Updated on:Aug 07, 2026 | 11:40 AM

Share

ಮುಖ್ಯಾಂಶಗಳು

  • ಮಾಫಿ ಸಾಕ್ಷಿಯಾಗಲು ಪ್ರದೂಷ್ ಅರ್ಜಿ
  • ದರ್ಶನ್ ಗ್ಯಾಂಗ್‌ನಲ್ಲಿ ಶುರುವಾಯ್ತು ಕಂಗಾಲು
  • ಊಟ ತೊರೆದು ಜಾಗರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ, ದರ್ಶನ್ ಆಪ್ತ ಪ್ರದೋಷ್ ಮಾಫಿ ಸಾಕ್ಷಿ ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ತೀರ್ಪು ಇನ್ನಷ್ಟೇ ಬರಬೇಕಿದೆ. ಈ ವಿಚಾರ ಸದ್ಯ ಜೈಲಿನಲ್ಲಿರುವ ದರ್ಶನ್ ನಿದ್ದೆಗೆಡಿಸಿದೆ.

ಆಪ್ತನ ಅರ್ಜಿಯಿಂದ ಜೈಲಿನಲ್ಲಿ ಶುರುವಾಯ್ತು ನಡುಕ

ಪ್ರಕರಣದಲ್ಲಿ ದರ್ಶನ್ ಜೊತೆ ಜೈಲು ಪಾಲಾಗಿರುವ ಅವರ ಆಪ್ತ ಪ್ರದೋಷ್, ಮಾಫಿ ಸಾಕ್ಷಿಯಾಗಲು ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಂತೆಯೇ ದರ್ಶನ್ ಸೇರಿದಂತೆ ಪ್ರಕರಣದ ಇತರ ಆರೋಪಿಗಳ ಎದೆಯಲ್ಲಿ ಆತಂಕ ಶುರುವಾಗಿದೆ. ಸ್ವತಃ ಆಪ್ತನೇ ಸಾಕ್ಷಿಯಾಗಿ ಬದಲಾದರೆ, ಕೇಸ್‌ನ ಭವಿಷ್ಯ ಏನಾಗಬಹುದು? ತಮ್ಮ ವಿರುದ್ಧವೇ ಸಾಕ್ಷ್ಯಗಳು ಗಟ್ಟಿಯಾಗುತ್ತವೆಯೇ ಎಂಬ ಭಯ ದರ್ಶನ್ ಅವರನ್ನು ತೀವ್ರವಾಗಿ ಕಾಡಲಾರಂಭಿಸಿದೆ.

ಊಟ ತೊರೆದು, ಮೌನಕ್ಕೆ ಶರಣಾದ ನಟ

ಈ ಸುದ್ದಿ ತಿಳಿಯುತ್ತಿದ್ದಂತೆಯೇ ನಟ ದರ್ಶನ್ ಜೈಲಿನಲ್ಲಿ ವಿಲವಿಲ ಒದ್ದಾಡುವಂತಾಗಿದೆ. ಗುರುವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟವನ್ನೂ ಮಾಡದ ದರ್ಶನ್, ತೀವ್ರ ಚಿಂತಾಕ್ರಾಂತರಾಗಿ ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಸಹ ಬಂಧಿಗಳ ಜೊತೆಗೂ ಯಾವುದೇ ಮಾತುಕತೆ ನಡೆಸದೆ, ರಾತ್ರಿಯಿಡೀ ನಿದ್ರೆ ಮಾಡದೆ ಜಾಗರಣೆ ಮಾಡಿದ್ದಾರೆ. ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿರುವ ದರ್ಶನ್‌ಗೆ, ಪ್ರದೋಷ್ ಮಾಫಿ ಸಾಕ್ಷಿಯಾಗುವ ನಿರ್ಧಾರ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಇದನ್ನೂ ಓದಿ: ದರ್ಶನ್​​ಗೆ ಶಾಕ್: ರೇಣುಕಾಸ್ವಾಮಿ ಕೇಸ್​​ನಲ್ಲಿ ಮಾಫಿ ಸಾಕ್ಷಿ ಮಾಡಿ; ಕೋರ್ಟ್​​ಗೆ ಎ14 ಪ್ರದೋಶ್ ಮನವಿ

ಬೆಳಗಿನ ಜಾವ ಪತ್ರಿಕೆ ನೋಡಿ ಮತ್ತೆ ಚಿಂತೆ

ಶುಕ್ರವಾರ ಬೆಳಿಗ್ಗೆ ಕೆಲ ಹೊತ್ತು ತಮ್ಮ ಬ್ಯಾರಕ್‌ನಲ್ಲೇ ವಾಕ್ ಮಾಡಿದ ದರ್ಶನ್, ನಂತರ ದೇವರ ಫೋಟೋಗೆ ಕೈಮುಗಿದು ಕಾಫಿ ಕುಡಿದು ಕುಳಿತಿದ್ದರು. ಬಳಿಕ ದಿನಪತ್ರಿಕೆಯನ್ನು ತರಿಸಿ, ಅದರಲ್ಲಿ ಬಂದಿದ್ದ ಮಾಫಿ ಸಾಕ್ಷಿ ಕುರಿತ ಸುದ್ದಿಯನ್ನು ಓದಿದ ಡಿ-ಬಾಸ್, ಮತ್ತೆ ತೀವ್ರ ಆತಂಕಕ್ಕೆ ಒಳಗಾಗಿ ಮೌನಕ್ಕೆ ಜಾರಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಆಪ್ತನ ಈ ನಡೆ ದರ್ಶನ್‌ಗೆ ಒಂದರ ಮೇಲೊಂದರಂತೆ ಸಂಕಷ್ಟ ತಂದೊಡ್ಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:39 am, Fri, 7 August 26

Follow Us