ಮನೆ ಮುರಿಯುವ ಕೆಲಸ: ಉರಿಗೌಡ-ನಂಜೇಗೌಡ ವಿವಾದ ಬಗ್ಗೆ ನಟ ಕಿಶೋರ್ ಎಚ್ಚರಿಕೆ

|

Updated on: Mar 23, 2023 | 4:00 PM

ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಉರಿಗೌಡ-ನಂಜೇಗೌಡ ವಿವಾದದ ಬಗ್ಗೆ ನಟ ಕಿಶೋರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮನೆ ಮುರಿಯುವ ಕೆಲಸ: ಉರಿಗೌಡ-ನಂಜೇಗೌಡ ವಿವಾದ ಬಗ್ಗೆ ನಟ ಕಿಶೋರ್ ಎಚ್ಚರಿಕೆ
ನಟ ಕಿಶೋರ್
Follow us on

ರಾಜ್ಯ ರಾಜಕಾರಣದಲ್ಲಿ ಉರಿಗೌಡ-ನಂಜೇಗೌಡ (Urigowda-Nanjegowda) ಪಾತ್ರಗಳು ವಿವಾದ ಎಬ್ಬಿಸಿವೆ. ಟಿಪ್ಪುವನ್ನು (Tipu) ಉರಿಗೌಡ-ನಂಜೇಗೌಡ ಕೊಂದರು ಎಂದು ಬಿಜೆಪಿ ನರೇಟಿವ್ ಬಿತ್ತಲು ಯತ್ನಿಸುತ್ತಿದ್ದು, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಕೆಲವು ಇತಿಹಾಸಕಾರರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದರ ನಡುವೆ ಉರಿಗೌಡ-ನಂಜೇಗೌಡ ಪಾತ್ರಗಳನ್ನು ಪ್ರಧಾನವಾಗಿರಿಸಿ ನಿರ್ಮಾಪಕ, ಸಚಿವ ಮುನಿರತ್ನ ಸಿನಿಮಾ ಮಾಡುವುದಾಗಿ ಘೋಷಿಸಿದ ಬಳಿಕವಂತೂ ವಿವಾದ ಇನ್ನಷ್ಟು ಬುಗಿಲೆದ್ದಿತ್ತು. ಹಲವರು ಈ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಿದ್ದರು. ಅಂತೆಯೇ ನಟ ಕಿಶೋರ್ (Actor Kishore) ಸಹ ಪ್ರಸಕ್ತ ವಿವಾದದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

”ಯಾವುದೋ ಕಾಲದ ರಾಜರ ಹೆಸರಲ್ಲಿ ಇಂದಿನ ರಾಜಕೀಯ ಇದು ಇಂದಿನ ಪ್ರಜಾಪ್ರಭುತ್ವ. ನಂಜೇಗೌಡ ಉರಿಗೌಡರ ಸೃಷ್ಟಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯತ್ನವೇ? ಇತ್ತ ಟಿಪ್ಪುವನ್ನು ಕೊಂದವರೆೆಂದು ಹೇಳಿ ಮುಸ್ಲಿಮರನ್ನೂ, ಒಕ್ಕಲಿಗರನ್ನೂ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಲೇ ಒಕ್ಕಲಿಗರು ಬ್ರಿಟೀಷರ ಪರವಾಗಿದ್ದರೆಂದು ಹೇಳಿ ಮುಂದೊಂದು ದಿನ ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ?” ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ.

ಮುಂದುವರೆದು, ”ಮೊದಲು ಹಿಂದೂ ಮುಸ್ಲಿಂ ಅಂದರು ಮನೆಯ ಸದಸ್ಯರನ್ನು ಎತ್ತಿಕಟ್ಟಿದರು, ಗಾಂಧಿಯೆಂದರು, ಗಾಂಧಿ ಕೊಂದರು, ರೈತರನ್ನು ಭಯೋತ್ಪಾದಕರೆಂದರು, ಉರಿ ಹೊತ್ತಿಸಿದರು ನಂಜು ಕಾರಿದರು ಒಕ್ಕಲಿಗರೆಂದರು ಟಿಪ್ಪುವೆಂದರು ಬಿಹಾರಿಗಳೆಂದರು ತಮಿಳರೆಂದರು, ಧರ್ಮವೆಂದರು, ಜಾತಿಯೆಂದರು, ದಲಿತರೆಂದರು ಭಾಷೆಯೆಂದರು ದೇಶವೆಂದರು, ಇತಿಹಾಸ ತಿರುಚಿದರು, ಸುಳ್ಳು ಸುದ್ದಿ ಹರಡಿದರು. ಕೇವಲ ಅಧಿಕಾರದಾಸೆಯಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ಕದಡಿ, ವಸುದೇವ ಕುಟುಂಬಕಂನ ಹೆಮ್ಮೆಯ ಕುಟುಂಬವನ್ನು ಮುರಿಯಲು ಬರುತ್ತಿದ್ದಾರೆ ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು. ಚುನಾವಣೆಯ ಕಾಲವಿದು ಎಚ್ಚರ” ಎಂದು ಯಾವುದೇ ಸಂಘಟನೆ, ಪಕ್ಷದ ಹೆಸರು ಹೇಳದೆ ಎಚ್ಚರಿಕೆ ನೀಡಿದ್ದಾರೆ ನಟ ಕಿಶೋರ್.

ಬಹುಭಾಷಾ ನಟ ಕಿಶೋರ್, ಮೊದಲಿನಿಂದಲೂ ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಮೈಕ್​ಗಳನ್ನು 19 ನಿಮಿಷಗಳ ಕಾಲ ಮ್ಯೂಟ್ ಮಾಡಿದ್ದ ಘಟನೆ ಕುರಿತಾಗಿಯೂ ಪೋಸ್ಟ್ ಹಂಚಿಕೊಂಡಿದ್ದ ಕಿಶೋರ್, ”ಮೂಕ ಸಂಸತ್ತು, ಮೂಕ ಪ್ರಜಾಪ್ರಭುತ್ವ, ಮೂಕ ನ್ಯಾಯಾಂಗ, ಮೂಕ ಆಡಳಿತಶಾಹಿ, ಮೂಕ ಮಾಧ್ಯಮಗಳು,, ಮೂಕ ರಾಷ್ಟ್ರ, ಮೂಕ ಪ್ರಜೆಗಳು, ಆದರೆ, ನಮ್ಮ ಚುನಾಯಿತ ಪ್ರತಿನಿಧಿಗಳಿಗೇ ಅದರ ಬಗ್ಗೆ ದನಿಯೆತ್ತಲು ಅವಕಾಶವಿಲ್ಲದಿದ್ದರೂ ಇಂದಿಗೂ ನಮ್ಮ ದೇಶ ಎದುರಿಸುತ್ತಿರುವ ಎಲ್ಲಾ ನೈಜ ಸಮಸ್ಯೆಗಳನ್ನು ಕಣ್ಣಾರೆ ನೋಡಬಲ್ಲಷ್ಟು ಶಕ್ತಿ ನಮಗಿದೆ ಎನ್ನುವ ಭರವಸೆ ಇನ್ನೂ ಇದೆ,. ಇದೆಲ್ಲಾ ಏಕೆ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲ, ಯೋಚಿಸಬಲ್ಲ ಶಕ್ತಿ ನಮಗಿದೆ ಎನ್ನುವ ಭರವಸೆ ಇನ್ನೂ ಇದೆ” ಎಂದಿದ್ದರು.

ಕೆಲವು ದಿನಗಳ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಕಮರ್ಶಿಯಲ್ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಕಿಶೋರ್ ಅವರು, ಕೆಜಿಎಫ್ ಅನ್ನು ಬ್ರೈನ್​ಲೆಸ್ ಸಿನಿಮಾ ಎಂದಿದ್ದಾರೆ ಎಂಬುದು ವಿವಾದವಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದ ಕಿಶೋರ್, ಬ್ರೈನ್​ಲೆಸ್ ಸಿನಿಮಾ ಎಂಬುದು ನಾನು ಬಳಸಿದ ಪದವಲ್ಲ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ