‘ಭಲೇ ಹುಚ್ಚ’ ಸಿನಿಮಾದಲ್ಲಿ ಡಾ. ರಾಜ್ ಅಭಿಮಾನಿ ಪಾತ್ರ ಮಾಡಿದ ರವಿಶಂಕರ್

‘ಭಲೇ ಹುಚ್ಚ: ಡಾ. ರಾಜ್ ಅಭಿಮಾನಿ’ ಸಿನಿಮಾದಲ್ಲಿ ರವಿಶಂಕರ್, ತಬಲ ನಾಣಿ, ಭವ್ಯಾ, ಅವಿನಾಶ್ ಮುಂತಾದವರು ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ನಟ ರವಿಶಂಕರ್ ಅವರ ಪಾಲಿಗೆ ಇದು ವಿಶೇಷವಾದ ಸಿನಿಮಾ ಆಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

‘ಭಲೇ ಹುಚ್ಚ’ ಸಿನಿಮಾದಲ್ಲಿ ಡಾ. ರಾಜ್ ಅಭಿಮಾನಿ ಪಾತ್ರ ಮಾಡಿದ ರವಿಶಂಕರ್
Bhale Huccha Movie Team

Updated on: Nov 17, 2026 | 8:24 PM

ನಟ ಪಿ. ರವಿಶಂಕರ್ ಅವರು ‘ಭಲೇ ಹುಚ್ಚ’ ಸಿನಿಮಾದಲ್ಲಿ ಡಾ. ರಾಜ್​ಕುಮಾರ್ ಅವರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ‘ಭಲೇ ಹುಚ್ಚ, ಡಾ. ರಾಜ್ ಅಭಿಮಾನಿ’ ಎಂಬುದು ಈ ಚಿತ್ರದ ಪೂರ್ಣ ಶೀರ್ಷಿಕೆ. ಇತ್ತೀಚೆಗೆ ಈ ಸಿನಿಮಾದಿಂದ ಹೊಸ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು. ‘ಬಾಲಾಜಿ ಸಿನಿ ಕಂಬೈನ್ಸ್’ ಬ್ಯಾನರ್ ಮೂಲಕ ಹೆಚ್.ಕೆ. ಶಿವಪ್ರಕಾಶ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ‘ಕಾಲ್ಗೆಜ್ಜೆ’ ಸಿನಿಮಾ ನಿರ್ದೇಶಿಸಿದ್ದ ಎಸ್. ಬಂಗಾರು ಅವರು ಈಗ ‘ಭಲೇ ಹುಚ್ಚ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.

ಅಣ್ಣಾವ್ರ ಅಭಿಮಾನಿಯೊಬ್ಬನ ಕಥೆಯನ್ನ ನಿರ್ದೇಶಕರು ಈ ಸಿನಿಮಾದ ಮೂಲಕ ಹೇಳಹೊರಟಿದ್ದಾರೆ. ರವಿಶಂಕರ್, ಭವ್ಯಾ, ತಬಲ ನಾಣಿ, ಅವಿನಾಶ್ ಅವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡನ್ನು ಹಿರಿಯ ನಿರ್ದೇಶಕ ಎಸ್. ಮಹೇಂದರ್ ಅವರು ಬಿಡುಗಡೆಗೊಳಿಸಿದರು. ‘ಕನ್ನಡದ ಕುರಿತು ಅಭಿಮಾನ ಮೂಡಿಸುವ ಈ ಹಾಡು ಚೆನ್ನಾಗಿ ಮೂಡಿಬಂದಿದೆ. ಭಲೇ ಹುಚ್ಚ ಹೆಸರೇ ಸರ್ವಕಾಲಿಕ. ನಿರ್ದೇಶಕನಿಗೆ ತಾಳ್ಮೆ ಬಹಳ ಮುಖ್ಯ. ಅದು ಬಂಗಾರು ಅವರಿಗಿದೆ. ಈ ಚಿತ್ರ ಯಶಸ್ವಿಯಾಗಲಿ’ ಎಂದು ಎಸ್. ಮಹೇಂದರ್ ಶುಭಕೋರಿದರು.

Loading...

ನಿರ್ಮಾಪಕ ಹೆಚ್.ಕೆ. ಶಿವಪ್ರಕಾಶ್ ಅವರು ವೇದಿಕೆಯಲ್ಲಿ ಮಾತನಾಡಿ, ‘ಡಾ. ರಾಜ್‌ಕುಮಾರ್ ಎಂದರೆ ಕೇವಲ ನಟರಲ್ಲ, ಕನ್ನಡಿಗರ ಭಾವನೆ. ಅವರ ಅಭಿಮಾನಿಯೊಬ್ಬನ ಕಥೆಯನ್ನು ನಾವು ಈ ಸಿನಿಮಾದಲ್ಲಿ ಹೇಳಹೊರಟಿದ್ದೇವೆ. ಪ್ರತಿಯೊಬ್ಬ ರಾಜ್‌ಕುಮಾರ್ ಅಭಿಮಾನಿಗೂ ಇದು ತನ್ನದೇ ಕಥೆ ಎನಿಸುತ್ತದೆ. ಒಳ್ಳೆಯ ಕಥೆ, ಒಳ್ಳೆಯ ಹಾಡುಗಳಿಗಾಗಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಪ್ರೇಕ್ಷಕರು ನಮ್ಮ ಚಿತ್ರವನ್ನು ಅಭಿಮಾನದಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ಕಾಮಿಡಿ ಜೊತೆಗೆ ಭಾವನಾತ್ಮಕ ಕಥೆ ಈ ಚಿತ್ರದಲ್ಲಿದೆ ಎಂದು ನಿರ್ದೇಶಕ ಎಸ್. ಬಂಗಾರು ಅವರು ಹೇಳಿದ್ದಾರೆ. ‘ಸದಭಿರುಚಿಯ ಸಿನಿಮಾ ಮಾಡಬೇಕೆಂದು ನಾನು ಕಾಯುತ್ತಿದ್ದೆ. ಅಣ್ಣಾವ್ರನ್ನು ದೇವರಂತೆ ಪೂಜಿಸುವ ಅಭಿಮಾನಿಯ ಪಾತ್ರದ ಸುತ್ತ ನಮ್ಮ ಸಿನಿಮಾದ ಕಥೆ ಸಾಗುತ್ತದೆ. ರವಿಶಂಕರ್, ಭವ್ಯಾ, ತಬಲ ನಾಣಿ, ಅವಿನಾಶ್ ಅವರಂತಹ ಅನುಭವಿ ಕಲಾವಿದರು ಈ ಚಿತ್ರಕ್ಕೆ ದೊಡ್ಡ ಶಕ್ತಿ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಡಾ ರಾಜ್​ಕುಮಾರ್ ಅದ್ಭುತ ವ್ಯಕ್ತಿತ್ವಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ

ರಾಜ್‌ಕುಮಾರ್ ಅವರ ಅಭಿಮಾನಿಯ ಪಾತ್ರ ಮಾಡಿರುವುದು ತಮ್ಮ ಪಾಲಿನ ಹೆಮ್ಮೆಯ ವಿಷಯ ಎಂದು ರವಿಶಂಕರ್ ಅವರು ಹೇಳಿದ್ದಾರೆ. ಮಾತೃಭಾಷೆ ತೆಲುಗು ಆಗಿದ್ದರೂ ಕೂಡ ತಮಗೆ ಯಶಸ್ಸು ತಂದುಕೊಟ್ಟಿದ್ದು ಕನ್ನಡ ಭಾಷೆ ಎಂದು ಅವರು ಹೇಳಿದರು. ಈ ಸಿನಿಮಾಗೆ ಪಳನಿ ಡಿ. ಸೇನಾಪತಿ ಅವರು ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us