ಡಾ ರಾಜ್ಕುಮಾರ್ ಅದ್ಭುತ ವ್ಯಕ್ತಿತ್ವಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ
Dr Rajkumar: ಡಾ ರಾಜ್ಕುಮಾರ್ ಕುರಿತಾಗಿ ಹಲವಾರು ಮಂದಿ ತಮ್ಮ ಅನುಭವಕ್ಕೆ ಬಂದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ದೇಶಕರಾಗಿರುವ, ಚಿತ್ರರಂಗದ ಬಗ್ಗೆ ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಬರುತ್ತಿರುವ ರಘುರಾಮ್ ಡಿಪಿ ಅವರು, ರಾಜ್ಕುಮಾರ್ ಅವರ ಸರಳ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ರಘುರಾಮ್ ಅವರ ಫೇಸ್ಬುಕ್ ಪೋಸ್ಟ್ನ ಯಥಾವತ್ ರೂಪ ಇಲ್ಲಿದೆ...

ಡಾ ರಾಜ್ಕುಮಾರ್ (Dr Rajkumar), ಕನ್ನಡಿಗರ ಪಾಲಿಗೆ ಕೇವಲ ನಟ ಮಾತ್ರವೇ ಅಲ್ಲ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ. ಕರ್ನಾಟಕದ ಜನರ ಪಾಲಿಗೆ ಮನೆ ದೇವರು ಸಹ ಆಗಿಬಿಟ್ಟಿದ್ದಾರೆ. ಕನ್ನಡಿಗರು ಅಣ್ಣಾವ್ರನ್ನು ಜೀವಕ್ಕೆ ಹಚ್ಚಿಕೊಂಡಿರುವುದಕ್ಕೆ ಕೇವಲ ಅವರ ನಟನೆಯೊಂದೆ ಕಾರಣವಲ್ಲ. ಅವರಲ್ಲಿದ್ದ ಸರಳತೆ, ಮುಗ್ಧತೆ, ಅವರ ಒಳ್ಳೆಯತನ ಹೀಗೆ ಪಟ್ಟಿ ಉದ್ದ ಸಾಗುತ್ತದೆ. ಅಣ್ಣಾವ್ರ ಕುರಿತಾಗಿ ಹಲವಾರು ಮಂದಿ ತಮ್ಮ ಅನುಭವಕ್ಕೆ ಬಂದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ದೇಶಕರಾಗಿರುವ, ಚಿತ್ರರಂಗದ ಬಗ್ಗೆ ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಬರುತ್ತಿರುವ ರಘುರಾಮ್ ಡಿಪಿ ಅವರು, ರಾಜ್ಕುಮಾರ್ ಅವರ ಸರಳ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ರಘುರಾಮ್ ಅವರ ಫೇಸ್ಬುಕ್ ಪೋಸ್ಟ್ನ ಯಥಾವತ್ ರೂಪ ಇಲ್ಲಿದೆ…
‘ಡಾ ರಾಜ್ ರನ್ನು ಶೂಟಿಂಗ್ ಗೆ ಹುಡುಕಿಕೊಂಡು ಹೋದ ಆ ಹೆಣ್ಣು ಮಗಳು ಯಾರು ?
ಒಂದು ಹಳ್ಳಿ, ಆ ಹಳ್ಳಿಯಲ್ಲಿ ಒಂದು ವಯಸ್ಸಾದ ಹೆಣ್ಣುಮಗಳು. ಆಕೆಗೆ ಅವರ ಮಗ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದಿದ್ದಾರೆ ಅನ್ನೋ ವಿಷಯ ಗೊತ್ತಾಗಿದೆ. ಅವರ ಹಳ್ಳಿ ಬಿಳಿಗಿರಿರಂಗನ ಬೆಟ್ಟಕ್ಕೆ ಹತ್ತಿರ ಇದ್ದ ಜಾಗ. ಮಗನನ್ನು ನೋಡಬೇಕು ಅನ್ನೋ ಆತುರ ಕಾತುರ ಹಂಬಲ ಎಲ್ಲವೂ ಉಂಟಾಗಿದೆ. ಮಧ್ಯಾಹ್ನ ಸುಮಾರು 3:45 – 4:00 ಘಂಟೆಗೆ ಮಗನನ್ನು ನೋಡಲೇಬೇಕು ಎಂದು ತೀರ್ಮಾನಿಸಿ ಅವರ ಊರಿಂದ Bus ನ ಹತ್ತಿದ್ದಾರೆ. ಆ ಬಸ್ಸು, ಮತ್ತೊಂದು ಊರಿನ ಹತ್ತಿರ ಬಂದು ನಿಂತಿದೆ. ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಬೇಕೆಂದರೆ ಇಲ್ಲಿಂದ ಇನ್ನೊಂದು ಬಸ್ಸನ್ನು ಹಿಡಿದು ಮುಂದಕ್ಕೆ ಸಾಗಬೇಕು. ಆಗ ಸಮಯ, ಸಂಜೆ ಸುಮಾರು 5:45.. ಸೂರ್ಯ ತನ್ನ ಕೆಲಸವನ್ನು ಮುಗಿಸಿ ತನ್ನ ಮನೆಯ ಕಡೆ ಹೊರಡಲು ಸಿದ್ಧವಾಗಿದ್ದಾನೆ. ಬಸ್ ನಿಲ್ಲಿಸಿದ ಜಾಗ ಯಾವುದೇ ಹಳ್ಳಿಯ ಬಸ್ ನಿಲ್ದಾಣ ಅಲ್ಲ ಅಥವಾ ಊರಿನ ಮಧ್ಯ ಭಾಗದಲ್ಲೂ ಅಲ್ಲ. ಸುತ್ತಮುತ್ತ ಬೆಟ್ಟಗುಡ್ಡ ಕಾಡು, ಬರಿ ಒಂದು ಪೆಟ್ಟಿಗೆ ಅಂಗಡಿ ಮಾತ್ರ ಇದೆ. ಹತ್ತಿರದ ಯಾವುದಾದರೂ ಊರಿಗೆ ಹೋಗಬೇಕೆಂದರೂ 5-6 ಕಿ.ಮೀ ನಡೆಯಬೇಕಿತ್ತು.
ಆ ಅಜ್ಜಿ, ಹೆದರಿಕೆ , ಕೊಂಚ ಗಾಬರಿಯಿಂದಲೇ ಪೆಟ್ಟಿಗೆ ಅಂಗಡಿಯವನ ಬಳಿ ಬಂದು ” ಏನಪ್ಪಾ! ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ಬಸ್ಸು ಎಷ್ಟು ಹೊತ್ತಿಗೆ ಬರುತ್ತೆ?” ಅಂತ ಕೇಳಿದ್ದಾರೆ. ಆಗ ಆ ಪೆಟ್ಟಿಗೆ ಅಂಗಡಿಯವ ” ಅಜ್ಜಿ ಬಸ್ ಬಂದ್ ಹೊರಟುಹೋಯಿತು. ಇನ್ನು ನಾಳೆ ಬೆಳಗ್ಗೆ ನೇ ಬರೋದು ” ಅಂತ ಹೇಳಿದಾಗ ಅಜ್ಜಿ ಮುಖದಲ್ಲಾದ ಗಾಬರಿ ಆತಂಕ ಜಾಸ್ತಿ ಆದದ್ದನ್ನು ಆತ ಗಮನಿಸಿ ” ಏನು ಯೋಚನೆ ಮಾಡ್ಬೇಡಿ ಅಜ್ಜಿ. ನಾನು ಪ್ರತಿನಿತ್ಯ ಅಂಗಡಿ ಒಳಗಡೆನೆ ಮಲಗೋದು. ಇವತ್ತು ನೀವು ಅಲ್ಲಿ ಮಲಗಿ ನಾನು ಹೊರಗೆ ಮಲಗ್ತೀನಿ” ಎಂದು ಹೇಳಿ, ಅಜ್ಜಿಗೆ ರಾತ್ರಿ ಆಶ್ರಯ ನೀಡಿ, ಹೊಟ್ಟೆ ತುಂಬಾ ಊಟ ಕೊಟ್ಟು, ಮರುದಿನ ಸ್ನಾನಕ್ಕೆ ಬಿಸಿ ನೀರು, ಹಣೆಗೆ ಹಚ್ಚಿಕೊಳ್ಳಲು ಶಿವನ ವಿಭೂತಿ ನೀಡಿ ಬಸ್ಸನ್ನು ಹತ್ತಿಸಿ ಕಳುಹಿಸಿದರು. ಬಿಳಿಗಿರಿರಂಗನ ಬೆಟ್ಟದಲ್ಲಿ ಅಜ್ಜಿ ಬಸ್ಸಿಂದ ಬಂದು ಇಳಿದಾಗ ಜನಜಾತ್ರೆ. ಅಲ್ಲಿ ಯಾವುದೇ ದೇವರ ಉತ್ಸವ ನಡಿತಿರಲಿಲ್ಲ. ಅಭಿಮಾನಿ ದೇವರುಗಳ ದೇವರು ವರ ನಟ ಡಾ ರಾಜ್ಕುಮಾರ್ ಅವರ ಒಂದು ಚಿತ್ರದ ಚಿತ್ರೀಕರಣ ನಡೀತಿತ್ತು. ಅಣ್ಣಾವ್ರನ್ನು ನೋಡಲು ಜನಸಾಗರವೇ ಹರಿದುಬಂದಿತ್ತು. ಆ ಜಾತ್ರೆಯಲ್ಲಿ ಅಜ್ಜಿ ನುಗ್ಗಿ ಮುಂದೆ ಬಂದಿದ್ದಾರೆ. ಆಗ ಡಾ ರಾಜಕುಮಾರ್ ಅವರು ಮೇಕಪ್ ಮಾಡಿಸಿಕೊಳ್ಳುತ್ತಿದ್ದರು. ಕನ್ನಡಿಯಿಂದ ಹತ್ತಿರದ ಗುಂಪಿನಲ್ಲಿದ್ದ ಈ ವಯಸ್ಸಾದ ಹೆಣ್ಣುಮಗಳನ್ನು ಗಮನಿಸಿದ ಡಾ ರಾಜಕುಮಾರ್ ಕನ್ನಡಿ ಅನ್ನು ಅವರ ಮೇಕಪ್ ಮ್ಯಾನ್ ಕೈಲಿ ಕೊಟ್ಟು, ಬಹಳ ಆಶ್ಚರ್ಯದಿಂದ ಆ ಹೆಣ್ಣುಮಗಳ ಕಡೆ ತಿರುಗಿ ನೋಡಿ “ಅವ್ವೆ” ಎಂದು ಕೂಗಿ ಕರು ಹಸುವಿನ ಬಳಿ ಓಡಿದಂತೆ ಅಣ್ಣಾವ್ರು ಕೂಡ ಹೋಗಿದ್ದಾರೆ. ಆ ಹೆಣ್ಣುಮಗಳು ಬೇರೆ ಯಾರು ಅಲ್ಲ, ವರನಟ ಡಾ ರಾಜ್ಕುಮಾರ್ ಅವರ ಹೆತ್ತ ತಾಯಿ, ಶ್ರೀಮತಿ ಲಕ್ಷ್ಮಮ್ಮ ಅವರು. ಅಮ್ಮನನ್ನು ನೋಡಿ ಸಂತೋಷದಿಂದ ಬಾಚಿ ತಬ್ಬಿಕೊಂಡು ” ಅವ್ವ!! ಹೇಗೆ ಬಂದೆ ಯಾರು ಕರ್ಕೊಂಡ್ ಬಂದ್ರು ” ಎಂದು ಪ್ರಶ್ನೆಗಳನ್ನು ಕೇಳಿದಾಗ ಲಕ್ಷ್ಮಮ್ಮ ನವರು ನಡೆದ ಘಟನೆಗಳನ್ನೆಲ್ಲ ವಿವರಿಸಿದ್ದಾರೆ.
ಇದನ್ನೆಲ್ಲ ಕೇಳಿಸಿಕೊಂಡ ನಂತರ ಅಣ್ಣಾವ್ರು ಸಿನಿಮಾ ಪ್ರೊಡಕ್ಷನ್ ಇಂದ ಒಬ್ಬ ಹುಡುಗನನ್ನು ಕರೆದು, ಕಿವಿಯಲ್ಲಿ ಏನೋ ಹೇಳಿದ್ದಾರೆ. ನಂತರ ಚಿತ್ರೀಕರಣದಲ್ಲಿ ಭಾಗಿಯಾಗಿ, ಸಂಜೆಯ ವೇಳೆ ಶೂಟಿಂಗ್ ಮುಗಿಸಿ ಕಾರು ಹತ್ತಿದ್ದಾರೆ. ಆ ಕಾರು ಸೀದಾ ಅಜ್ಜಿ ಕಳೆದ ರಾತ್ರಿ ತಂಗಿದ್ದ ಪೆಟ್ಟಿಗೆ ಅಂಗಡಿಯ ಬಳಿ ಬಂದು ನಿಂತಿದೆ. ಕಾರು ಇಂದ ಇಳಿಯುತ್ತಿದ್ದ ಅಜ್ಜಿಯನ್ನು ನೋಡಿ ಅಂಗಡಿಯವ ” ಏನ್ ಅಜ್ಜಿ!! ನಿನ್ನ ಮಗ ಅಷ್ಟು ದೊಡ್ಡ ವ್ಯಕ್ತಿ ನಾ? ಹೋಗ್ತಾ ಬಸ್ಸಲ್ಲಿ ಹೋದೆ ಈಗ ಕಾರಿನಲ್ಲಿ ಬಂದ್ಬಿಟ್ಟಿದ್ದೀಯಾ ” ಎಂದು ಪ್ರಶ್ನಿಸಿದಾಗ ಕಾರಿನಿಂದ ಅಭಿಮಾನಿಗಳ ಆರಾಧ್ಯ ದೈವ, ಕರ್ನಾಟಕ ರತ್ನ, ನಟಸಾರ್ವಭೌಮ, ಡಾ ರಾಜಕುಮಾರ್ ಇಳಿದಾಗ ಅವರು ದಿಗ್ಭ್ರಾಂತರಾಗಿದ್ದಾರೆ. ಏನು ಮಾತಾಡಲು ತೋಚಲಿಲ್ಲ. ಕೆಲ ನಿಮಿಷ ಅಣ್ಣಾವ್ರನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದಾರೆ.
ನಂತರ ಅಪ್ಪಾಜಿ, ಅವರ ಬಳಿ ಹೋಗಿ, ಬಾಚಿ ಅವರನ್ನು ತಬ್ಬಿಕೊಂಡು ಒಂದೆರಡು ನಿಮಿಷಗಳ ಕಾಲ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ತದನಂತರ ಅಂಗಡಿಯವನ ಶರ್ಟ್ ಎಲ್ಲಾ ಒದ್ದೆ ಆಗಿತ್ತು. ಅಣ್ಣಾವ್ರ ಕಣ್ಣೀರಿನ ಹನಿಗಳು ಆತನ ಭುಜಭಾಗದ ಅಂಗಿಯನ್ನು ಒದ್ದೆ ಮಾಡಿತ್ತು. ಶೂಟಿಂಗ್ ನಲ್ಲಿ ಪ್ರೊಡಕ್ಷನ್ ಹುಡುಗನ ಬಳಿ ಕಿವಿಯಲ್ಲಿ ಅಣ್ಣಾವ್ರು ಹೇಳಿದ್ದು ಈ ಅಂಗಡಿ ಅವರಿಗೆ ಗೌರವಪೂರ್ವಕವಾಗಿ ಹಣ್ಣು-ಹಂಪಲು, ಸಿಹಿ ತಿಂಡಿಗಳು, ರೇಷ್ಮೆ ಪಂಚೆ ಇತ್ಯಾದಿಗಳನ್ನು ವ್ಯವಸ್ಥೆ ಮಾಡಲು. ಇವೆಲ್ಲವನ್ನೂ ಆತನಿಗೆ ಕೊಟ್ಟು ಹೃದಯಪೂರ್ವಕವಾಗಿ ಕೃತಜ್ಞತೆಗಳನ್ನು ತಿಳಿಸಿ, ಆತನ ಜೇಬಿಗೆ ಒಂದಿಷ್ಟು ಹಣವನ್ನು ನೀಡಲು ಹೋದಾಗ ಅಂಗಡಿಯ ವ್ಯಕ್ತಿ ಒಂದು ಮಾತು ಹೇಳಿದ್ರಂತೆ ” ಅಣ್ಣ! ಈ ಹಣ್ಣು ತಿಂಡಿ ಬಟ್ಟೆ ಎಲ್ಲವನ್ನೂ ನಾನು ತೆಗೆದುಕೊಳ್ಳುತ್ತಿನಿ. ದುಡ್ಡು ಮಾತ್ರ ಬೇಡ ಅಣ್ಣ. ಇವರು ಯಾರು ಅಂತಾನೇ ನನಗೆ ಗೊತ್ತಿರಲಿಲ್ಲ. ವಯಸ್ಸಾದ ಹೆಣ್ಣು ಮಗಳೆಂದು ಆಶ್ರಯ ನೀಡಿ ನೋಡಿಕೊಂಡೆ. ನಿಮ್ಮ ತಾಯಿ ಅಂತ ಗೊತ್ತಾದಮೇಲೆ ನಾನಿರುವವರೆಗೂ ಅಣ್ಣಾವ್ರ ತಾಯಿಯನ್ನು ಒಂದು ದಿಸ ನೋಡ್ಕೊಂಡ್ ಇದ್ದೀನಿ ಅನ್ನೋ ಸಂತೋಷ ಹಾಗೆ ಇರಲಿ. ಹಣ ತೆಗೆದುಕೊಂಡರೆ ಆ ಸಂತೋಷವನ್ನು ನಾನು ಮಾರಿದ ಹಾಗೆ ಆಗುತ್ತೆ. ದಯವಿಟ್ಟು ಬೇಡ ಅಣ್ಣ” ಎಂದು ಪ್ರೀತಿಯಿಂದ, ವಿನಯದಿಂದ ಕೇಳಿಕೊಂಡಿದ್ದಾರೆ. ಮತ್ತೊಮ್ಮೆ ಆತನನ್ನು ಅಣ್ಣಾವ್ರು ಬಿಗಿದಪ್ಪಿ ಶುಭಹಾರೈಸಿ ತಾಯಿಯೊಂದಿಗೆ ಊರಿಗೆ ಹೊರಟಿದ್ದಾರೆ. ಯಾರು ಯಾವಾಗ ಹೇಗೆ ನಮ್ಮ ಬದುಕಲ್ಲಿ ಬರ್ತಾರೆ ಅನ್ನೋದೇ ಯಕ್ಷ ಪ್ರಶ್ನೆ. ಹೀಗೆ ಸಿಕ್ಕಿದ ಬದುಕಿ ಗೊಬ್ಬ ಬಂಧು, ಡಾ ರಾಜ್ ಮರೆಯಲಿಲ್ಲ ಆತನನ್ನು ಎಂದೆಂದೂ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




