
‘ಬಲರಾಮನ ದಿನಗಳು’ ಸಿನಿಮಾದ ಪ್ರಚಾರದಲ್ಲಿ ನಿರತವಾಗಿದ್ದ ನಟ ವಿನೋದ್ ಪ್ರಭಾಕರ್ (Vinod Prabhakar) ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಂಡು ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋದ್ ಪ್ರಭಾಕರ್ ಅವರ ರಕ್ತದೊತ್ತಡದಲ್ಲಿ ಏರು-ಪೇರು ಕಂಡು ಬಂದಿದ್ದು ಅವರನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ವೈದ್ಯರು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಸಿನಿಮಾ ಪ್ರಚಾರಕ್ಕಾಗಿ ತೆರಳುತ್ತಿದ್ದಾಗ ವಿನೋದ್ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದು ಕೂಡಲೇ ಅವರನ್ನು ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದನ್ನು ದಾಖಲಿಸಲಾಗಿದೆ. ವಿನೋದ್ ಪ್ರಭಾಕರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಕಾರ್ಡಿಯಾ ಕೇರ್ ಆಸ್ಪತ್ರೆಯಲ್ಲಿ ವಿನೋದ್ ಪ್ರಭಾಕರ್ ಅವರನ್ನು ದಾಖಲಿಸಲಾಗಿದ್ದು, ವೈದ್ಯರು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಿದ್ದಾರೆ.
ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿನೋದ್ ಪ್ರಭಾಕರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಈ ನಡುವೆ ವಿನೋದ್ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಆತಂಕ ತಂದಿದೆ.
ಆದರೆ ಸುದ್ದಿ ವೈರಲ್ ಆಗುತ್ತಿದ್ದಂತೆ ವಿನೋದ್ ಪ್ರಭಾಕರ್ ಅವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಲಾಗಿದ್ದು, ವಿನೋದ್ ಆರೋಗ್ಯವಾಗಿದ್ದಾರೆ ಯಾವುದೇ ಆತಂಕ ಬೇಡವೆಂದು ಹೇಳಲಾಗಿದೆ. ‘ಬಲರಾಮನ ದಿನಗಳು’ ಚಿತ್ರದ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ವಿನೋದ್ ಪ್ರಭಾಕರ್, ನಿರಂತರ ಕೆಲಸದ ಒತ್ತಡದಿಂದ ಲೋಬಿಪಿ ಆಗಿದೆ. ಇಂದು (ಜೂನ್ 20) ಮುಂಜಾನೆ ಆರೋಗ್ಯದಲ್ಲಿ ಏರುಪೇರು ಕಂಡಾಗ ಪತ್ನಿಯೊಂದಿಗೆ ನಾಗರಭಾವಿಯ ಜಿಎಂ ಖಾಸಗಿ ಆಸ್ಪತ್ರೆಗೆ ಧಾವಿಸಿದ್ದರು. ವೈದ್ಯರ ಸಲಹೆಯಂತೆ ಎಲ್ಲಾ ಬಗೆಯ ಚೆಕಪ್ ಗಳನ್ನ ವಿನೋದ್ ಪ್ರಭಾಕರ್ ಮಾಡಿಸಿಕೊಂಡಿದ್ದು ಈಗ ಆರಾಮಾಗಿದ್ದಾರೆ ನಾಳೆ (ಜೂನ್ 21) ಬೆಳಿಗ್ಗೆ ವಿನೋದ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದು, ಸೋಮವಾರದಿಂದ ಮತ್ತೆ ಬಲರಾಮ ಚಿತ್ರದ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಬಲರಾಮ ಚಿತ್ರ ಇದೇ 26ನೇ ತಾರೀಖು ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 pm, Sat, 20 June 26