‘ಪ್ರೇಮದ ಊರಲಿ’ ನಟಿ ಆರಾಧ್ಯಾ ನಾಯರ್ಗೆ ಮಲಯಾಳಂ ಸೀರಿಯಲ್ ಆಫರ್
‘ಪ್ರೇಮದ ಊರಲಿ’ ಸಿನಿಮಾ ಮೂಲಕ ಭರ್ಜರಿ ಜನಪ್ರಿಯತೆ ಗಳಿಸಿರುವ ಬೆಳಗಾವಿಯ ಪ್ರತಿಭಾವಂತ ನಟಿ ಆರಾಧ್ಯಾ ನಾಯರ್, ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಮುಂಬರುವ ದಿನಗಳಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ತೆರೆ ಹಂಚಿಕೊಳ್ಳುವ ದೊಡ್ಡ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಸ್ಯಾಂಡ್‌ವುಡ್‌ನಲ್ಲಿ ಸದ್ಯ ಸಖತ್ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ನಟಿ ಆರಾಧ್ಯಾ ನಾಯರ್ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಥಾನಾಯಕಿ ರುಕ್ಮಿಣಿ (ತಪಸ್ವಿನಿ ಪೂಣಚ್ಚ) ಅವರ ಗೆಳತಿಯಾಗಿ ಬಣ್ಣ ಹಚ್ಚಿರುವ ಆರಾಧ್ಯಾ, ತಮ್ಮ ಲವಲವಿಕೆಯ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.
ಸಿನಿಮಾದಲ್ಲಿ ಆರಾಧ್ಯಾ ನಾಯರ್ ಹೊಡೆಯುವ ‘ನೀನೇನ್ ದೊಡ್ಡ ಸೊನ್ನೆನಾ’ ಎಂಬ ಡೈಲಾಗ್ ಸಿನಿಪ್ರಿಯರಿಗೆ ಸಖತ್ ಇಷ್ಟವಾಗಿದೆ. ಈ ಪಾತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದ್ದು, ನಟಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿದೆ. ‘ಪ್ರೇಮದ ಊರಲಿ’ ಚಿತ್ರದ ಯಶಸ್ಸು ಆರಾಧ್ಯಾ ಅವರ ಸಿನಿಪಯಣಕ್ಕೆ ಹೊಸ ತಿರುವು ನೀಡಿದ್ದು, ಕನ್ನಡ ಚಿತ್ರರಂಗದಲ್ಲಿ ಅವರಿಗೆ ಒಳ್ಳೆಯ ಗುರುತು ಸಿಗುವಂತೆ ಮಾಡಿದೆ.
ಮೂಲತಃ ಬೆಳಗಾವಿಯವರಾದ ಆರಾಧ್ಯಾ ನಾಯರ್ ಅವರಿಗೆ ಉತ್ತರ ಕರ್ನಾಟಕ ಶೈಲಿಯ ಭಾಷೆಯ ಮೇಲೆ ವಿಶೇಷ ಪ್ರೀತಿಯಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಷೆಯ ಸಿನಿಮಾದಲ್ಲೂ ನಟಿಸಿದ್ದು, ರಿಲೀಸ್ಗೆ ರೆಡಿ ಇದೆ. ವಿಶೇಷವೆಂದರೆ ಆರಾಧ್ಯಾ ಅವರ ತಾಯಿ ಕೇರಳದವರಾಗಿರುವುದರಿಂದ ಅವರಿಗೆ ಮಲಯಾಳಂ ಭಾಷೆಯೂ ನಿರರ್ಗಳವಾಗಿ ಹಾಗೂ ಸ್ಪಷ್ಟವಾಗಿ ಬರುತ್ತದೆ.
View this post on Instagram
ಮಲಯಾಳಂ ಭಾಷೆಯ ಮೇಲಿನ ಈ ಹಿಡಿತವೇ ಅವರಿಗೆ ಕೇರಳದ ಕಿರುತೆರೆಯಲ್ಲಿ ಅವಕಾಶದ ಬಾಗಿಲು ತೆರೆಯುವಂತೆ ಮಾಡಿದೆ. ಸದ್ಯ ಆರಾಧ್ಯಾ ಮಲಯಾಳಂ ಧಾರಾವಾಹಿಯೊಂದರಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಈ ಹೊಸ ಧಾರಾವಾಹಿ ಪ್ರಸಾರವಾಗುವ ಸಾಧ್ಯತೆಯಿದ್ದು, ಕಿರುತೆರೆಯಲ್ಲೂ ಅವರು ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: 50ನೇ ದಿನಕ್ಕೆ ಕಾಲಿಟ್ಟ ‘ಪ್ರೇಮದ ಊರಲಿ’ ಸಿನಿಮಾ; ಅಬ್ಬಬ್ಬಾ, ಒಟ್ಟಾರೆ ಕಲೆಕ್ಷನ್ ಇಷ್ಟೊಂದಾ?
ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ವಿಭಿನ್ನ ಸಿನಿಮಾಗಳಲ್ಲಿ ನಟಿಸುವ ಆಲೋಚನೆಯನ್ನು ಆರಾಧ್ಯಾ ನಾಯರ್ ಹೊಂದಿದ್ದಾರೆ. ಅದರಲ್ಲೂ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬ ದೊಡ್ಡ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಪ್ರತಿಭಾವಂತ ನಟಿ ಆರಾಧ್ಯಾ ಅವರ ಈ ಸಿನಿಮಾ ಪಯಣಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




