ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ಪತ್ನಿ ಜ್ಯೋತಿಕಾ ತಂಜಾವೂರು ಸರ್ಕಾರಿ ಆಸ್ಪತ್ರೆಗೆ ಆರ್ಥಿಕವಾಗಿ ಸಹಾಯ ಹಸ್ತ ಚಾಚಿದ್ದಾರೆ.
ಜ್ಯೋತಿಕಾ ಕೆಲ ದಿನಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣಕ್ಕೆಂದು ತಮಿಳುನಾಡಿನ ತಂಜಾವೂರು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಆಗ ಅಲ್ಲಿನ ಪರಿಸ್ಥಿತಿ ಕಂಡು ದಂಗಾಗಿದ್ದ ಜ್ಯೋತಿಕಾ, ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಆಡಳಿತದ ವಿರುದ್ದ ಹರಿಹಾಯ್ದಿದ್ದರು. ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ಸ್ವಚ್ಛತೆ ಇಲ್ಲ, ಮಕ್ಕಳ ವಾರ್ಡ್ ಅಂತೂ ಗಬ್ಬು ನಾರುತ್ತಿದೆ ಎಂದು ಟೀಕಿಸಿದ್ದರು.
ಜ್ಯೋತಿಕಾ ಟೀಕೆಗೆ ಪ್ರತಿಯಾಗಿ ಕೆಲ ಸ್ಥಳೀಯರು ಟೀಕೆ ಮಾಡೋದು ಸುಲಭ, ಆಸ್ಪತ್ರೆ ನಡೆಸೋದು ಕಷ್ಟ ಅಂತಾ ಪ್ರತಿಟೀಕೆ ಮಾಡಿದ್ದರು. ಇದನ್ನೇ ಸವಾಲಾಗಿ ತೆಗೆದುಕೊಂಡ ನಟಿ, ತಂಜಾವೂರಿನ ಸರ್ಕಾರಿ ಆಸ್ಪತ್ರೆಯ ನೆರವಿಗೆ ಧಾವಿಸಿದ್ದಾರೆ. ಆಸ್ಪತ್ರೆಗೆ ತಮ್ಮ ಖಾತೆಯಿಂದ 25 ಲಕ್ಷ ರೂ. ದೇಣಿಗೆಯಾಗಿ ನೀಡಿದ್ದಾರೆ.
ಇಷ್ಟೇ ಅಲ್ಲ ಕೆಲ ಅವಶ್ಯ ವೈದ್ಯಕೀಯ ಉಪಕರಣಗಳು ಸೇರಿದಂತೆ ಆಸ್ಪತ್ರೆಯ ದುರಸ್ತಿ, ಆಧುನಿಕರಣ ಮತ್ತು ಅಲ್ಲಿನ ಮಕ್ಕಳ ವಾರ್ಡ್ ಅನ್ನು ಕೂಡಾ ದುರಸ್ತಿ ಮಾಡಿ ಬಣ್ಣ ಬಳಿಸುತ್ತಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಮ್ ಹಾಗೂ ಹಿಂದಿ ಸೇರಿದಂತೆ ಭಾರತೀಯ ಹಲವಾರು ಬಾಷೆಗಳಲ್ಲಿ ನಟಿಸಿರುವ ಜ್ಯೋತಿಕಾ, ಸಮಾಜಕ್ಕೆ ತನ್ನಿಂದಾದಷ್ಟು ಸಹಾಯದ ಹಸ್ತ ಚಾಚುತ್ತಿರೋದು ಶ್ಲಾಘನೀಯ.