ತಮ್ಮ ಶಂಕರ್ ನಾಗ್ಗಾಗಿ ಆಯುಧ ಹಿಡಿದು ಜಗಳಕ್ಕೆ ನಿಂತಿದ್ದ ಅನಂತ್ ನಾಗ್
ಅನಂತ್ ನಾಗ್ ಹಾಗೂ ಶಂಕರ್ ನಾಗ್ ನಡುವೆ ಸುಮಾರು ಆರೇಳು ವರ್ಷಗಳ ವಯಸ್ಸಿನ ಅಂತರ. ಹಾಗಾಗಿ ಶಂಕರ್ ಅವರನ್ನು ತಮ್ಮನಾಗಿ ಎನ್ನುವುದಕ್ಕಿಂತಲೂ ಮಗನಂತೆ ಅನಂತ್ ಕಾಳಜಿ ಮಾಡುತ್ತಿದ್ದರು. ಮುಂಬೈನಲ್ಲಿ ಸಹ ತಮ್ಮ ಜೊತೆಗೇ ಇರಿಸಿಕೊಂಡು ‘ಸಾಕಿದ್ದರು’ ಅನಂತ್ ನಾಗ್. ಒಮ್ಮೆ ಶಂಕರ್ ನಾಗ್ ಅವರ ಕಾರಣಕ್ಕ ಕೈಯಲ್ಲಿ ಆಯುಧ ಹಿಡಿದು ನಿರ್ದೇಶಕನ ಮೇಲೆ ಜಗಳ ಮಾಡಿದ್ದರು ಅನಂತ್ ನಾಗ್.

ಮುಖ್ಯಾಂಶಗಳು
- ಶಂಕರ್ ನಾಗ್ ಬಗ್ಗೆ ಅನಂತ್ ಅವರಿಗಿತ್ತು ವಿಶೇಷ ಪ್ರೀತಿ
- ಸಹೋದರನಿಗಾಗಿ ಒಮ್ಮೆ ‘ಆಯುಧ’ ಹಿಡಿದಿದ್ದರು ಅನಂತ್ ನಾಗ್
- ಆ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ ಅನಂತ್ ನಾಗ್
ಶಂಕರ್ ನಾಗ್, ಕನ್ನಡ ಚಿತ್ರರಂಗ ಎಂದೂ ಮರೆಯಲಾಗದ ಮಾಣಿಕ್ಯ. ಸಿನಿಮಾಗಳು ಮಾತ್ರವೇ ಅಲ್ಲದೆ ತಮ್ಮ ಅಭಿವೃದ್ಧಿಪರ ಚಿಂತನೆಗಳು, ಕ್ರಿಯಾಶೀಲತೆ, ಪ್ರಯೋಗಗಳ ಮೂಲಕ ಕನ್ನಡಿಗರಲ್ಲಿ ಹಲವು ಕನಸುಗಳನ್ನು ಬಿತ್ತಿದ್ದ ನಟ ಮತ್ತು ಸಾಮಾಜಿಕ ಜೀವಿ. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಅವರದ್ದು ಅಪರೂಪದಲ್ಲಿ ಅಪರೂಪದ ಸಹೋದರ ಜೋಡಿ. ರೊಮ್ಯಾಂಟಿಕ್ ಪಾತ್ರವಿದ್ದರೆ ಅನಂತ್ ನಾಗ್, ಆಕ್ಷನ್ ಕತೆಯಿದ್ದರೆ ಶಂಕರ್ ನಾಗ್ ಎಂದು ನಿರ್ದೇಶಕರುಗಳು ನಿರ್ಣಯಿಸಿಬಿಟ್ಟಿದ್ದ ಕಾಲವೂ ಚಿತ್ರರಂಗದಲ್ಲಿ ಇತ್ತು. ಆದರೆ ದುರಾದೃಷ್ಟವಶಾತ್ ಶಂಕರ್ ನಾಗ್ ಅಪಘಾತದಲ್ಲಿ ನಿಧನ ಹೊಂದಿದರು. ಸಹೋದರನನ್ನು ಕಳೆದುಕೊಂಡು ಅನಂತ್ ನಾಗ್ ಒಂಟಿ ಆಗಿಬಿಟ್ಟರು. ಶಂಕರ್ ನಾಗ್ ಕಾಲವಾಗಿ ದಶಕಗಳೇ ಆಗಿವೆ, ಆದರೆ ಇಂದಿಗೂ ಅನಂತ್ ಅವರ ಯಾವ ಸಂದರ್ಶನವೇ ಆಗಲಿ ಶಂಕರ್ ಉಲ್ಲೇಖ ಇರದೇ ಅಂತ್ಯವಾಗಿದ್ದೇ ಇಲ್ಲ. ಇದೀಗ ಟಿವಿ9ಗೆ ವಿಶೇಷ ಸಂದರ್ಶನ ನೀಡಿರುವ ಅನಂತ್ ನಾಗ್, ಶಂಕರ್ ನಾಗ್ ಅವರಿಗಾಗಿ ಒಮ್ಮೆ ಆಯುಧ ಹಿಡಿದು ಜಗಳಕ್ಕೆ ಹೋದ ಘಟನೆ ನೆನಪು ಮಾಡಿಕೊಂಡಿದ್ದಾರೆ.
ಅನಂತ್ ನಾಗ್ ಹಾಗೂ ಶಂಕರ್ ನಾಗ್ ನಡುವೆ ಸುಮಾರು ಆರೇಳು ವರ್ಷಗಳ ವಯಸ್ಸಿನ ಅಂತರ. ಹಾಗಾಗಿ ಶಂಕರ್ ಅವರನ್ನು ತಮ್ಮನಾಗಿ ಎನ್ನುವುದಕ್ಕಿಂತಲೂ ಮಗನಂತೆ ಅನಂತ್ ಕಾಳಜಿ ಮಾಡುತ್ತಿದ್ದರು. ಮುಂಬೈನಲ್ಲಿ ಸಹ ತಮ್ಮ ಜೊತೆಗೇ ಇರಿಸಿಕೊಂಡು ‘ಸಾಕಿದ್ದರು’ ಅನಂತ್ ನಾಗ್. ಹಾಗೆಯೇ ಚಿತ್ರರಂಗಕ್ಕೆ ಬಂದಾಗಲೂ ಸಹ ಶಂಕರ್ ನಾಗ್ ಬಗ್ಗೆ ಅನಂತ್ ಅವರ ಆ ಕಾಳಜಿ ಹಾಗೆಯೇ ಮುಂದುವರೆದಿತ್ತು. ಆದರೆ ಶಂಕರ್ ಅವರ ಕೆಲವು ‘ಉತ್ಸಾಹ’ದ ನಿರ್ಣಯಗಳಿಂದ ಅವರಿಗೇ ಸಮಸ್ಯೆ ಆಗುವ ಪರಿಸ್ಥಿತಿ ನಿರ್ಮಾಣವಾದಾಗ ಅನಂತ್ ಅವರು ಸಹೋದರನಾಗಿ ಕಣಕ್ಕೆ ಇಳಿಯುತ್ತಿದ್ದರು.
ಅನಂತ್ ನಾಗ್ ಅವರು ಇದಕ್ಕೆ ಉದಾಹರಣೆಯಾಗಿ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ‘ಜೀವಕ್ಕೆ ಜೀವ’ ಸಿನಿಮಾದ ಚಿತ್ರೀಕರಣ ಈಗಿನ ಚೆನ್ನೈ ಆಗಿನ ಮದ್ರಾಸಿನಲ್ಲಿ ನಡೆಯುತ್ತಿತ್ತಂತೆ. ಸಿನಿಮಾನಲ್ಲಿ ಶಂಕರ್ ನಾಗ್, ಅನಂತ್ ನಾಗ್ ಇಬ್ಬರೂ ನಟಿಸುತ್ತಿದ್ದರು. ಸಿನಿಮಾನಲ್ಲಿ ಇಬ್ಬರದ್ದೂ ವಕೀಲರ ಪಾತ್ರ. ನ್ಯಾಯಕ್ಕಾಗಿ ಕಾನೂನಿನ ಚೌಕಟ್ಟಿನ ಹೊರಗೂ ಹೋಗಿ ಹೋರಾಡುವ ಪಾತ್ರಗಳು ಅವು. ಒಂದು ಫೈಟ್ ದೃಶ್ಯದ ಚಿತ್ರೀಕರಣಕ್ಕೆ ಕ್ರೇನ್ ಒಂದನ್ನು ತರಿಸಲಾಗಿತ್ತಂತೆ. ಆ ಕ್ರೇನ್ ಮೇಲೆ ಶಂಕರ್ ನಾಗ್ ಹತ್ತಿ, ನಡೆದು, ಕ್ರೇನಿನ ಮತ್ತೊಂದು ತುದಿಯಲ್ಲಿದ್ದ ಮಗು (ಗೊಂಬೆ) ಜೀವ ಉಳಿಸಬೇಕಿತ್ತು. ಅನಂತ್ ನಾಗ್ ಅವರು ಸಹಜವಾಗಿಯೇ ಇದು ಬೇಡ ಎಂದರಂತೆ. ಆದರೆ ನಿರ್ದೇಶಕ ಹಾಗೂ ಫೈಟ್ ಮಾಸ್ಟರ್ ಹೇಗೋ ಮಾಡಿ ಒಪ್ಪಿಸಿ ಶಂಕರ್ ಅವರನ್ನು ಕ್ರೇನ್ ಹತ್ತಿಸಿಬಿಟ್ಟರಂತೆ.
ಇದನ್ನೂ ಓದಿ:ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ನೃತ್ಯ ಮಾಡದಕ್ಕೆ ಅನಂತ್ ನಾಗ್ ನೀಡಿದ ಕಾರಣ ಹೀಗಿದೆ
ಕ್ರೇನ್ ಹತ್ತಿದ ಶಂಕರ್ ಅವರಿಗೆ ಹತ್ತಿದ ಮೇಲೆ ಕೆಳಗಿನ ಆಳ ನೋಡಿ ಭಯವಾಗಿದೆ, ಆದರೆ ಅನಂತ್ ಅವರು ಅವರಿಗೆ ಕೆಳಗಿನಿಂದಲೇ ಸೂಚನೆಗಳನ್ನು ನೀಡುತ್ತಾ ಇದ್ದರಂತೆ. ಆದರೆ ಒಂದು ಸಮಯದಲ್ಲಿ ರೋಸಿ ಹೋದ ಅನಂತ್ ನಾಗ್, ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ರಾಡ್ ಅನ್ನು ಕೈಗೆ ತೆಗೆದುಕೊಂಡು ನಿರ್ದೇಶಕ ಹಾಗೂ ಫೈಟ್ ಮಾಸ್ಟರ್ ಮುಂದೆ ಹೋಗಿ, ‘ಅವನು (ಶಂಕರ್) ಕೆಳಗೆ ಬಿದ್ದು ಏನಾದರೂ ಆದರೆ ನಿಮ್ಮಬ್ಬರ ತಲೆ ಬುರುಡೆಯನ್ನು ಇಲ್ಲಿಯೇ ಒಡೆಯುತ್ತೇನೆ’ ಎಂದು ಅಕ್ಷರಷಃ ಅಬ್ಬರಿಸಿಬಿಟ್ಟರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




