ಅಭಿಮಾನಿ ಎಂದರೆ ಕುಟುಂಬವನ್ನೂ ಗೌರವಿಸಬೇಕು; ಧನ್ವೀರ್ಗೆ ಅಶ್ವಿನಿ ತಿರುಗೇಟು
ನಟ ಧನ್ವೀರ್ ಹಾಗೂ ದರ್ಶನ್ ನಡುವಿನ ವಿವಾದ ಮತ್ತು ಆರೋಪಗಳ ಬೆನ್ನಲ್ಲೇ ನಟಿ ಅಶ್ವಿನಿ ಗೌಡ ಅಭಿಮಾನದ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಮಾನವೆಂದರೆ ಕೇವಲ ಹೆಸರನ್ನು ಕೂಗುವುದಲ್ಲ, ಹೆಣ್ಣಿನ ಗೌರವ ಕಾಪಾಡುವುದು. ಮಾನವೀಯತೆ ಮತ್ತು ಸಂಬಂಧಗಳನ್ನು ಗೌರವಿಸುವುದೇ ನಿಜವಾದ ಮನುಷ್ಯತ್ವ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ಜಟಾಪಟಿ ಜೋರಾಗಿದೆ. ಧನ್ವೀರ್ ಅವರು ದರ್ಶನ್ ಅವರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ವೈರಲ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಹಂಚಿಕೊಂಡು ಅಭಿಮಾನ, ಹೆಣ್ಣಿನ ಗೌರವ ಹಾಗೂ ಮನುಷ್ಯತ್ವದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಅಶ್ವಿನಿ ಗೌಡ ತಮ್ಮ ಪೋಸ್ಟ್‌ನಲ್ಲಿ, ‘ಅಭಿಮಾನವೆಂಬುದು ಕೇವಲ ಹೆಸರಿನ ಮೇಲಿನ ಪ್ರೀತಿಯಲ್ಲ, ಅದು ಹೃದಯಗಳ ನಡುವಿನ ಒಂದು ಸುಂದರವಾದ ನಂಟು. ಒಬ್ಬ ಕಲಾವಿದನನ್ನು ಪ್ರೀತಿಸುವ ಅಭಿಮಾನಿಗಳು, ಆ ಕಲಾವಿದನ ಜೊತೆ ನಿಂತಿರುವ ಕುಟುಂಬವನ್ನೂ ಗೌರವಿಸುವ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಮನೆಯ ಹೆಣ್ಣುಮಕ್ಕಳನ್ನು, ಪತ್ನಿಯನ್ನು, ಮಕ್ಕಳನ್ನು ಗೌರವಿಸುವುದು ನಮ್ಮ ಸಂಸ್ಕಾರವಾಗಬೇಕು’ ಎಂದು ಹೇಳಿದ್ದಾರೆ. ಈ ಮೂಲಕ ಧನ್ವಿರ್ಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.
‘ಕಾಲ ಬದಲಾದಾಗ, ಸಂಬಂಧಗಳಲ್ಲಿ ಮನಸ್ತಾಪ ಬಂದಾಗ, ಇಷ್ಟು ದಿನ ಜೊತೆಯಾಗಿ ಹಂಚಿಕೊಂಡ ಪ್ರೀತಿ, ವಿಶ್ವಾಸ, ಕಷ್ಟ-ಸುಖಗಳನ್ನೆಲ್ಲ ಮರೆತು, ಅದೇ ಸಂಬಂಧವನ್ನು ನೋಯಿಸುವ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಮನಸ್ಸಿಗೆ ನೋವು ತರುವ ಸಂಗತಿ. ಒಂದು ಹೆಣ್ಣಿನ ಮೌನವನ್ನು ದೌರ್ಬಲ್ಯವೆಂದು ಭಾವಿಸಬೇಡಿ. ಒಂದು ಕುಟುಂಬದ ಗೌರವವನ್ನು ನಿಮ್ಮ ಮಾತುಗಳಿಂದ ಅಳೆಯಬೇಡಿ. ಭಿನ್ನಾಭಿಪ್ರಾಯಗಳಿರಬಹುದು, ಆದರೆ ಯಾರದ್ದೇ ಹೆಣ್ಣಿನ ಘನತೆಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ’ ಎಂದು ಖಡಕ್ ಆಗಿ ಬರೆದುಕೊಂಡಿದ್ದಾರೆ.
View this post on Instagram
ಕಲಾವಿದ ಹಾಗೂ ಅಭಿಮಾನಿಯ ಬಾಂಧವ್ಯದ ಬಗ್ಗೆ ಉಲ್ಲೇಖಿಸಿ, ‘ಅಭಿಮಾನವೆಂದರೆ ಅವರ ಹೆಸರನ್ನು ಕೂಗುವುದಷ್ಟೇ ಅಲ್ಲ, ಅವರ ಮೇಲಿನ ಪ್ರೀತಿಯನ್ನು ಗೌರವದಿಂದ ಉಳಿಸಿಕೊಳ್ಳುವುದು. ಕಲಾವಿದ ಮತ್ತು ಅಭಿಮಾನಿಯ ನಡುವಿನ ಸಂಬಂಧವು ಕೇವಲ ಪರದೆಯ ಮೇಲಿನ ಆಕರ್ಷಣೆಯಲ್ಲ. ಅದು ಪ್ರೀತಿ, ನಂಬಿಕೆ ಮತ್ತು ಭಾವನೆಗಳ ಬಂಧ. ನಿಜವಾದ ಅಭಿಮಾನಿ ಕಲಾವಿದನ ಏಳಿಗೆಯಲ್ಲಿ ಸಂಭ್ರಮಿಸುತ್ತಾನೆ, ಕಷ್ಟದಲ್ಲಿ ಬೆಂಬಲಿಸುತ್ತಾನೆ. ಆದರೆ ಯಾರನ್ನೂ ನೋಯಿಸುವ ಮೂಲಕ ತನ್ನ ಅಭಿಮಾನವನ್ನು ಸಾಬೀತುಪಡಿಸುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ‘ಅವನಿಗೆ ಧಮ್ ಇದ್ರೆ ಹೊರಗೆ ಬಂದಾಗ ನನ್ನ ಫೇಸ್ ಮಾಡಲಿ’: ಧನ್ವೀರ್ ಬಗ್ಗೆ ದರ್ಶನ್ ಗರಂ
‘ಅಭಿಮಾನ ಇರಲಿ, ಆದರೆ ಮಾನವೀಯತೆ ಕಳೆದುಹೋಗದಿರಲಿ. ಪ್ರೀತಿ ಇರಲಿ, ಆದರೆ ಹೆಣ್ಣಿನ ಗೌರವಕ್ಕೆ ಧಕ್ಕೆ ಬರದಿರಲಿ. ನಂಟು ಇರಲಿ, ಆದರೆ ಮನಸ್ಸುಗಳನ್ನು ಮುರಿಯುವಷ್ಟು ದ್ವೇಷ ಬೆಳೆಯದಿರಲಿ. ಅದೇ ನಿಜವಾದ ಅಭಿಮಾನ, ಅದೇ ನಿಜವಾದ ಮನುಷ್ಯತ್ವ’ ಎಂದು ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




