ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಕರ್ನಾಟಕದಲ್ಲಿ ಲಾಕ್ಡೌನ್ ಜಾರಿ ಆದಾಗಿನಿಂದ ಸೆಲೆಬ್ರಿಟಿಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಷ್ಟು ದಿನ ಶೂಟಿಂಗ್, ಡಬ್ಬಿಂಗ್ ಎಂದು ಹೊರಗಡೆ ಸುತ್ತುತ್ತಿದ್ದ ಅವರಿಗೆ ಫ್ಯಾಮಿಲಿ ಜೊತೆ ಇರಲು ಸಮಯ ಸಿಗುತ್ತಿರಲಿಲ್ಲ. ಈಗ ಲಾಕ್ಡೌನ್ ಕಾರಣದಿಂದಾಗಿ ಎಲ್ಲರೂ ಅವರವರ ಕುಟುಂದವರ ಜೊತೆ ದಿನ ಕಳೆಯುತ್ತಿದ್ದಾರೆ. ಆದಷ್ಟು ಬೇಗ ಪರಿಸ್ಥಿತಿ ಸರಿಯಾಗಬಹುದು ಎಂಬ ಭರವಸೆಯೊಂದಿಗೆ ಮುಂದಿನ ದಿನಗಳನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ನಟ ಶರಣ್ ಕೂಡ ಮನೆಯಲ್ಲಿ ಮಕ್ಕಳ ಜೊತೆ ಕಾಲ ಕಳೆಯುತ್ತ, ತಮ್ಮದೇ ರೀತಿಯಲ್ಲಿ ಈ ಲಾಕ್ಡೌನ್ಗೆ ಹೊಂದಿಕೊಂಡಿದ್ದಾರೆ. ಟಿವಿ9 ಟಿಜಿಟಲ್ ಜೊತೆ ಮಾತನಾಡಿ ಅನೇಕ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಹೇಗಿವೆ ನಿಮ್ಮ ಲಾಕ್ಡೌನ್ ದಿನಗಳು? ಏನೆಲ್ಲ ಮಾಡುತ್ತಿದ್ದೀರಿ?
ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದೇನೆ. ಮಾಮೂಲಿ ಮಾಡುವುದಕ್ಕಿಂತ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಲಾಕ್ಡೌನ್ನಿಂದಾಗಿ ಸಮಯ ಸಿಕ್ಕಿದೆ. ಮೊದಲು ಬೇಗ ಬೇಗ ಶೂಟಿಂಗ್ ಮುಗಿಸಿ ಗಡಿಬಿಡಿಯಲ್ಲಿ ಮಾಡಬೇಕಿತ್ತು. ಈಗ ಆರಾಮಾಗಿ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಸಾಧ್ಯವಾಗಿದೆ. ಕ್ರಿಯಾಶೀಲವಾಗಿ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಸಿನಿಮಾಗಳನ್ನು ನೋಡುತ್ತಿದ್ದೇನೆ. ನನಗೆ ಅಡುಗೆಯಲ್ಲಿ ಆಸಕ್ತಿ ಜಾಸ್ತಿ. ಅದರ ಕಡೆಗೂ ಗಮನ ಹರಿಸುತ್ತಿದ್ದೇನೆ.
ಅಡುಗೆ ಮೇಲೆ ನಿಮಗೆ ಆಸಕ್ತಿ ಮೂಡಿರುವುದು ಹೇಗೆ?
ಬ್ಯಾಚುಲರ್ ಆಗಿದ್ದ ದಿನಗಳಲ್ಲಿ ನಾನೇ ಅಡುಗೆ ಮಾಡಿಕೊಳ್ಳುತ್ತಿದ್ದೆ. ಅದು ಅಲ್ಲಿಗೆ ನಿಂತಿತ್ತು. ಲಾಕ್ಡೌನ್ನಲ್ಲಿ ಮತ್ತೆ ಅಡುಗೆ ಮಾಡುವ ಅವಕಾಶ ಸಿಕ್ಕಿದೆ. ನಿಧಾನಕ್ಕೆ ಹೆಂಡತಿಗೆ ಸಹಾಯ ಮಾಡುವ ರೂಪದಲ್ಲಿ ಅಡುಗೆ ಮನೆಯಲ್ಲಿ ನುಸುಳಿಕೊಂಡಿದ್ದೇನೆ. ಅಂದು ಮಾಡುತ್ತಿದ್ದ ಯಾವ ಅಡುಗೆಯನ್ನೂ ನಾನು ಮರೆತಿಲ್ಲ. ಈಗ ಎಲ್ಲ ಚಿಕ್ಕಪುಟ್ಟ ಆಹಾರ ಪದಾರ್ಥಗಳನ್ನು ಮಾಡುತ್ತಿದ್ದೇನೆ.
ಹಲವು ಸೆಲೆಬ್ರಿಟಿಗಳು ಜಿಮ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿಮಗೂ ಹಾಗೇನಾ?
ಹಾಗೇನೂ ಇಲ್ಲ. ಹಲವು ವರ್ಷಗಳಿಂದ ನಾನು ಜಿಮ್ಗೆ ಹೋಗುತ್ತಿಲ್ಲ. ನನಗೇನೂ ವೃತ್ತಿಪರ ಬಾಡಿ ಬಿಲ್ಡರ್ ರೀತಿ ದೇಹ ಹುರಿಗೊಳಿಸಿಕೊಳ್ಳುವ ಅನಿವಾರ್ಯತೆ ಇಲ್ಲ. ಈ ಹಿಂದೆ ‘ಜೈ ಮಾರುತಿ 800’ ಸಿನಿಮಾದಲ್ಲಿ 6 ಪ್ಯಾಕ್ಸ್ ಮಾಡಿದ್ದೆ. ಆ ಬಳಿಕ ಅದೇ ರೀತಿಯ ಪಾತ್ರಗಳು ಯಾವತ್ತೂ ಬರಲಿಲ್ಲ. ಹಾಗಾಗಿ ಮನೆಯಲ್ಲೇ ವ್ಯಾಯಾಮ ಮಾಡಿದರೆ ಸಾಕುತ್ತದೆ. ಆ ರೀತಿ ಪಾತ್ರ ಬಂದರೆ ಮತ್ತೆ ನೋಡೋಣ.
ಮಕ್ಕಳ ಜೊತೆ ಕಾಲ ಕಳೆಯಲು ನಿಮಗೆ ಸಮಯ ಸಿಕ್ಕಿದೆ. ಆ ಬಗ್ಗೆ ಹೇಳಿ…
ಶೂಟಿಂಗ್ ಇದ್ದಾಗ ಬೆಳಗ್ಗೆ ಹೋದರೆ ರಾತ್ರಿ ಬರುತ್ತೇವೆ. ಎಷ್ಟೋ ದಿನ ನಾವು ಊರಲ್ಲೇ ಇರುವುದಿಲ್ಲ. ಹಾಗಾಗಿ ಮಕ್ಕಳ ಜೊತೆ ಇರಲು ಸಾಧ್ಯವೇ ಆಗುತ್ತಿರಲಿಲ್ಲ. ಈಗ ಅವರ ಜೊತೆ ಕಾಲ ಕಳೆಯಲು ಅವಕಾಶ ಸಿಕ್ಕಿದೆ. ಮಕ್ಕಳ ಜೊತೆ ನಾವು ಮಕ್ಕಳಾಗಿ ಇರುವುದು ಅಷ್ಟು ಸುಲಭವಲ್ಲ. ಮಕ್ಕಳೊಂದಿಗೆ ಬೆರೆಯುವುದಕ್ಕೆ ಬೇರೆ ಮನಸ್ಥಿತಿಯೇ ಬೇಕು.
ಈ ಕೊರೊನಾ ಲಾಕ್ಡೌನ್ ಸಮಯವನ್ನು ನೀವು ಯಾವ ರೀತಿ ಅರ್ಥೈಸುತ್ತೀರಿ?
ಮನುಷ್ಯರಿಗೆ ಕೊರೊನಾ ಒಂದು ಪಾಠ ಕಲಿಸಿದೆ. ಅದನ್ನು ಜನರು ಮರೆಯಬಾರದು. ಲಾಕ್ಡೌನ್ ಮುಗಿದರೂ ಕೂಡ ಅದು ಕಲಿಸಿದ ಪಾಠಗಳನ್ನು ನಾವು ಜೀವನ ಪರ್ಯಂತ ನೆನಪಿಟ್ಟುಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚಾಗಿ ಏನೂ ಬೇಡ ಎಂಬುದನ್ನು ಇದು ಮನವರಿಕೆ ಮಾಡಿಕೊಟ್ಟಿದೆ. ಆರ್ಥಿಕತೆಯ ದೃಷ್ಟಿಯಲ್ಲಿ ನೋಡಿದರೆ ಜನರಿಗೆ ಇದರಿಂದ ತುಂಬ ತೊಂದರೆ ಆಗಿದೆ. ಇಂದಲ್ಲ ನಾಳೆ ಎಲ್ಲವೂ ಸರಿ ಆಗುತ್ತದೆ. ಮತ್ತೆ ನಾವು ಕೆಲಸಕ್ಕೆ ಹೊರಡುತ್ತೇವೆ. ಆಗ ಲಾಕ್ಡೌನ್ ಕಲಿಸಿದ ಪಾಠಗಳನ್ನು ನೆನಪಿನಲ್ಲಿ ಇಟ್ಟುಕೊಂಡು ವರ್ತಿಸಬೇಕು.
ಲಾಕ್ಡೌನ್ನಿಂದಾಗಿ ಸಿನಿಮಾ ನೋಡುವ ಮತ್ತು ಮಾಡುವ ಶೈಲಿ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ನಿಮ್ಮ ಮುಂದಿನ ಸಿನಿಮಾ ಆಯ್ಕೆಗಳ ಬಗ್ಗೆ ಈಗ ಏನಾದರೂ ಆಲೋಚನೆ ಮಾಡಿದ್ದೀರ?
ಈ ವಿಚಾರದಲ್ಲಿ ನಾನು ಲಕ್ಕಿ ಎಂದುಕೊಳ್ಳುತ್ತೇನೆ. ಯಾಕೆಂದರೆ ಲಾಕ್ಡೌನ್ ಆರಂಭ ಆಗುವುದಕ್ಕೂ ಮುನ್ನ ನನಗೆ ಸಿಕ್ಕಿದ ತಂಡಗಳು ತುಂಬ ಚೆನ್ನಾಗಿವೆ. ಈಗ ಜನರು ಯಾವ ರೀತಿ ಯೋಚಿಸುತ್ತಿದ್ದಾರೋ ಅದಕ್ಕೆ ತಕ್ಕಂತಹ ರೀತಿಯಲ್ಲೇ ಸಿದ್ಧವಾಗುತ್ತಿದೆ ನನ್ನ ‘ಅವತಾರ ಪುರುಷ’ ಸಿನಿಮಾ. ಕಾಮಿಡಿಯಲ್ಲೇ ಬೇರೆ ರೀತಿಯ ಚಿತ್ರ ಇದಾಗಲಿದೆ. ನನ್ನ ಹಿಂದಿನ ಸಿನಿಮಾಗಳಿಗೆ ಇದನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಕೊರೊನಾ, ಲಾಕ್ಡೌನ್ ಬಳಿಕ ಜನರು ಸಿನಿಮಾ ನೋಡುವ ರೀತಿ ಬದಲಾಗುತ್ತದೆ ಅಂತೀರಲ್ಲ, ಅದಕ್ಕೆ ತಕ್ಕಂತಯೇ ಈ ಚಿತ್ರ ಸಿದ್ಧವಾಗುತ್ತಿದೆ.
ಕಾಮಿಡಿ ಬಿಟ್ಟು ಶರಣ್ ಬೇರೆ ಸಿನಿಮಾಗಳನ್ನು ಮಾಡುವುದಿಲ್ಲವೇ?
ಹಾರರ್ ಕಾಮಿಡಿ, ಸಸ್ಪೆನ್ಸ್ ಕಾಮಿಡಿ, ಡಾರ್ಕ್ ಕಾಮಿಡಿ ಸೇರಿದಂತೆ ಕಾಮಿಡಿಯಲ್ಲೇ ಹಲವು ಪ್ರಕಾರಗಳಿವೆ. ಅವುಗಳನ್ನೆಲ್ಲ ಮಾಡೋಕೆ ನನ್ನ ಒಂದು ಜನ್ಮ ಕೂಡ ಸಾಕಾಗುವುದಿಲ್ಲ. ಹೀಗಿರುವಾಗ ಬೇರೆ ಪ್ರಕಾರದ ಸಿನಿಮಾಗಳನ್ನು ಮಾಡೋದು ಕಷ್ಟ. ನನ್ನ ಗುಣ ಏನು ಎಂಬುದು ಗೊತ್ತಿರುವ ಎಲ್ಲರೂ ಕೂಡ ಬರೀ ಕಾಮಿಡಿ ಕಥೆಗಳನ್ನೇ ತೆಗೆದುಕೊಂಡು ಬರುತ್ತಾರೆ.
ಪ್ರೇಕ್ಷಕನಾಗಿ ನಿಮಗೆ ಯಾವ ಪ್ರಕಾರದ ಸಿನಿಮಾ ಇಷ್ಟ?
ನಾನು ಎಲ್ಲ ಪ್ರಕಾರದ ಸಿನಿಮಾವನ್ನೂ ನೋಡುತ್ತೇನೆ. ಹತ್ತು ಸಿನಿಮಾ ನೋಡಿದರೆ ಅದರಲ್ಲಿ ಎರಡು ಆ್ಯಕ್ಷನ್ ಚಿತ್ರ, ಎರಡು ಕಾಮಿಡಿ, ಎರಡು ಹಾರರ್, ಎರಡು ಫ್ಯಾಮಿಲಿ ಡ್ರಾಮಾ.. ಹೀಗೆ ಸರಿಯಾಗಿ ಭಾಗ ಮಾಡಿಕೊಂಡು ನೋಡುತ್ತೇನೆ. ಎಲ್ಲವನ್ನೂ ಅಷ್ಟೇ ಎಂಜಾಯ್ ಮಾಡುತ್ತೇನೆ.
ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇರುವ ನಿಮಗೆ ನಿರ್ದೇಶಕನಾಗುವ ಆಸೆ ಇದೆಯೇ?
ನಾನಾಗಿಯೇ ಅದನ್ನು ಹುಡುಕಿಕೊಂಡು ಹೋಗಲ್ಲ. ನಟನೆ ಮತ್ತು ನಿರ್ಮಾಣದಲ್ಲಿ ತೊಡಗಿಕೊಂಡಿರುವುದರಿಂದ ನನಗೆ ಸಮಯ ಹೆಚ್ಚು ಬೇಡುತ್ತಿದೆ. ಇದರ ಮೇಲೆ ಮೂರನೆಯದನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಎಷ್ಟೇ ವರ್ಷಗಳ ಅನುಭವ ಇದ್ದರೂ ಕೂಡ ಅದು ಒಬ್ಬ ನಟನಾಗಿ ಪಡೆದ ಅನುಭವ ಮಾತ್ರ. ಆದರೆ ನಿರ್ದೇಶನಕ್ಕೆ ಬೇಕಾದ ಕೌಶಲವೇ ಬೇರೆ. ಅಲ್ಲಿ ನಾನು ಎಡವಿದರೆ ಇಷ್ಟು ವರ್ಷಗಳ ಅನುಭವ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಎಲ್ಲ ನಿರ್ದೇಶಕರಿಗೆ ನಾನು ಹ್ಯಾಟ್ಸಾಫ್ ಹೇಳುತ್ತೇನೆ.
ಲಾಕ್ಡೌನ್ನಲ್ಲಿ ಜನರಿಗೆ ಏನು ಹೇಳಲು ಬಯಸುತ್ತೀರಿ?
ಮನುಷ್ಯನು ಸಾಮಾಜಿಕ ಪ್ರಾಣಿ. ಎಲ್ಲರ ಜೊತೆ ಸೇರಿ ಬದುಕುವ ಗುಣ ನಮ್ಮ ರಕ್ತದಲ್ಲಿದೆ. ಅದು ನಾವು ರೂಢಿಸಿಕೊಂಡಿರುವುದಲ್ಲ. ಸೋಶಿಯಲ್ ಅನಿಮಲ್ ಆಗಿದ್ದವರು ಸೋಶಿಯಲ್ ಡಿಸ್ಟೆನ್ಸ್ ಅಭ್ಯಾಸ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಕ್ವಾರಂಟೈನ್, ಲಾಕ್ಡೌನ್, ಸೀಲ್ಡೌನ್ ಎಂಬ ಪದಗಳನ್ನೇ ನನ್ನ 49 ವರ್ಷಗಳ ಜೀವನದಲ್ಲಿ ನಾನು ಕೇಳಿರಲಿಲ್ಲ.
ನನ್ನ ತಿಳುವಳಿಯ ಚೌಕಟ್ಟಿನಲ್ಲಿ ಹೇಳುವುದಾದರೆ ಮನುಷ್ಯ ಕುಲಕ್ಕೆ ಈ ರೀತಿ ಆಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕಾಲರಾ, ಪ್ಲೇಗ್ ಮುಂತಾದ ಕಾಯಿಲೆಗಳು ಬಂದಾಗ ಜನರು ಅಲ್ಲಲ್ಲೇ ಸಾಯುತ್ತಿದ್ದರು. ಊರಿಗೆ ಊರೇ ಬಿಟ್ಟುಹೋಗಬೇಕಾದ ಪರಿಸ್ಥಿತಿ ಇತ್ತು. ಅದನ್ನು ಮನುಷ್ಯ ಗೆದ್ದುಕೊಂಡು ಬಂದಿದ್ದಾನೆ. ಹಾಗಾಗಿ ಕೊರೊನಾವನ್ನೂ ನಾವು ಗೆಲ್ಲುತ್ತೇವೆ. ಅಲ್ಲಿಯವರೆಗೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಹೊಸ ಭರವಸೆಯ ರೀತಿಯಲ್ಲಿ ವ್ಯಾಕ್ಸಿನ್ ಬಂದಿದೆ. ಕೊರೊನಾವನ್ನು ಲೈಟ್ ಆಗಿ ತಗೋಬಾರ್ದು. ಹಾಗಂತ ಧೃತಿಗೆಡುವ ಅವಕಶ್ಯಕತೆ ಕೂಡ ಇಲ್ಲ.
ಇದನ್ನೂ ಓದಿ:
ವರ್ಕೌಟ್ನಿಂದ ಚಾರಿಟಿವರೆಗೆ; ಇದು ‘ಐರಾವನ್’ ನಟ ಜೆಕೆ ಲಾಕ್ಡೌನ್ ದಿನಚರಿ