ಚೇತನ್ ಅಹಿಂಸಾ ವೀಸಾ ರದ್ದು, ಕೇಂದ್ರದ ವಿರುದ್ಧ ನಟ ಆಕ್ರೋಶ

|

Updated on: Apr 15, 2023 | 6:53 PM

Chetan Ahimsa: ಚೇತನ್ ಅಹಿಂಸಾ ಅವರ ವೀಸಾ ರದ್ದು ಮಾಡುವುದಾಗಿ ನೊಟೀಸ್ ನೀಡಲಾಗಿದ್ದು ಅವರ ಓವರ್​ಸೀಸ್ ಇಂಡಿಯನ್ ಸಿಟಿಜನ್​ಶಿಪ್ ಅನ್ನು ರದ್ದು ಮಾಡುವುದಾಗಿಯೂ ಹೇಳಲಾಗಿದೆ.

ಚೇತನ್ ಅಹಿಂಸಾ ವೀಸಾ ರದ್ದು, ಕೇಂದ್ರದ ವಿರುದ್ಧ ನಟ ಆಕ್ರೋಶ
ಚೇತನ್ ಅಹಿಂಸಾ
Follow us on

ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧ ಹೆಸರು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣ ನಟ, ಸಾಮಾಜಿಕ ಹೋರಾಟಗಾರ (Social Worker) ಚೇತನ್ ಅಹಿಂಸಾ (Chetan Ahimsa) ಅವರ ವೀಸಾ ಅನ್ನು ಕೇಂದ್ರ ಗೃಹ ಇಲಾಖೆ ರದ್ದು ಮಾಡಿದೆ. ಈ ಬಗ್ಗೆ ಚೇತನ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನನ್ನ ಸಮಾಜಮುಖಿ ಕೆಲಸ ಹಾಗು ವೈಚಾರಿಕ ಕೆಲಸಗಳಿಂದ ಸೋಲಿಸಲಾಗದೇ, ನನ್ನ ವೀಸಾ ರದ್ದು ಮಾಡಲಾಗಿದೆ. ತಮ್ಮ ಓಸಿಐ ಅನ್ನು ಮರಳಿಸುವಂತೆ ನೊಟೀಸ್ ನೀಡಲಾಗಿದೆ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.

ನನ್ನ ವೀಸಾ ಅನ್ನು ರದ್ದು ಮಾಡಲಾಗಿದ್ದು, ಓಸಿಐ (ಓವರ್​ಸೀಸ್ ಸಿಟಿಜನ್​ಶಿಪ್ ಆಫ್ ಇಂಡಿಯಾ) ಅನ್ನು ಮರಳಿಸುವಂತೆ ನೊಟೀಸ್ ನೀಡಲಾಗಿದೆ. ನಾನು 2018 ರಲ್ಲಿ ಓಸಿಐ ಪಡೆದಿದ್ದೆ. ಈಗ ಓಸಿಐ ರದ್ದಾದರೆ ನಾನು ಇಲ್ಲಿ ಚುನಾವಣೆಗೆ ಸ್ಪರ್ಧಿಸಲಾಗುವುದಿಲ್ಲ, ಸರ್ಕಾರಿ ಉದ್ಯೋಗಗಳನ್ನು ಪಡೆಯಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಚೇತನ್.

ನಾನು ಮೊದಲು ಅಮೇರಿಕದಲ್ಲಿದ್ದೆ, ಬಳಿಕ ಭಾರತಕ್ಕೆ ಬಂದು ಮೈಸೂರಿನ ಆಚೆ ಹಳ್ಳಿಯೊಂದರಲ್ಲಿ ಇದ್ದೆ. ಆ ಬಳಿಕ ಇಲ್ಲಿ ಸಿನಿಮಾ ಮಾಡಿದೆ, 2011 ರಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಗಳನ್ನು ಶುರು ಮಾಡಿದೆ. ಸಮಾಜ ಒಪ್ಪಿಕೊಳ್ಳೋ ಹೋರಾಟಗಳಾಗಿ ಅವು ರೂಪುಗೊಂಡವು. ಅದಾದ ಬಳಿಕ ಇನ್ನೂ ಹಲವು ಹೋರಾಟಗಳನ್ನು ಮಾಡಿದೆ. ಅದಾದ ನಂತರ ನನ್ನ ಒಂದು ಟ್ವಿಟ್​ಗೆ ನನ್ನನ್ನು ಅರೆಸ್ಟ್ ಮಾಡಿದರು. ನಂತರ ಒಂದರ ಮೇಲೊಂದು ಕೇಸುಗಳನ್ನು ಹಾಕೋಕೆ ಶುರು ಮಾಡಿದರು. ಈಗ ನನ್ನ ವೀಸಾ ಹಾಗೂ ಓಸಿಐ ರದ್ದು ಮಾಡುವ ನೊಟೀಸು ಕಳಿಸಿದ್ದಾರೆ ಎಂದಿದ್ದಾರೆ ಚೇತನ್ ಅಹಿಂಸ.

ನಟ ಚೇತನ್ ತಮ್ಮ ಹೇಳಿಕೆಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ತಮ್ಮ ನಿಷ್ಠುರ ಟ್ವೀಟ್​ಗಳಿಂದಾಗಿ ಈಗಾಗಲೇ ಎರಡು ಬಾರಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಹಲವು ಕೇಸುಗಳು ಸಹ ಚೇತನ್ ವಿರುದ್ಧ ದಾಖಲಾಗಿವೆ. ಇತ್ತೀಚೆಗಷ್ಟೆ ನಟ ಚೇತನ್ ಅವರು, ಭಾರತದಲ್ಲಿ ಗಾಂಜಾ ಕೃಷಿಯನ್ನು ಅಧಿಕೃತಗೊಳಿಸಬೇಕು ಎಂದಿದ್ದರು. ಅದು ವಿವಾದ ಸೃಷ್ಟಿಸಿತ್ತು.

ನಿನ್ನೆಯಷ್ಟೆ ಮತ್ತೊಂದು ಟ್ವೀಟ್ ಮಾಡಿದ್ದ ನಟ ಚೇತನ್ ಅಹಿಂಸ, ಪ್ರಖ್ಯಾತ ತಿರುಪತಿ ದೇವಾಲಯವು ಬೌದ್ಧ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ನಟ ಚೇತನ್ ಅಹಿಂಸಾ, ಇತಿಹಾಸಕಾರರ ಪ್ರಕಾರ ದೇವಾಲಯಗಳು ಎಂದಿಗೂ ವೈದಿಕ ಸಂಸ್ಥೆಗಳಾಗಿರಲಿಲ್ಲ. ಅವುಗಳನ್ನು ಬೌದ್ಧ ಧರ್ಮದಿಂದ ವಶಪಡಿಸಿಕೊಳ್ಳಲಾಗಿದೆ. ಆಕ್ರಮಣ ಮಾಡಿ ಬೌದ್ಧ ದೇವಾಲಯಗಳನ್ನು ಕೆಡವಿ ಹಿಂದು ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದಿದ್ದಾರೆ. ಕೆ ಜಮನದಾಸ್ ಅವರು ‘ತಿರುಪತಿ ಬಾಲಾಜಿ ಮೂಲತಃ ಬೌದ್ಧ ಮಂದಿರ’ (ಏಪ್ರಿಲ್ 14, 2001) ಎಂಬ ತಮ್ಮ ಪುಸ್ತಕದಲ್ಲಿ ಈ ಹೇಳಿಕೆಯನ್ನು ಮಾನ್ಯ ಮಾಡಿದ್ದಾರೆ ಎಂದಿದ್ದಾರೆ. ಇತ್ತೀಚೆಗೆ ಉರಿಗೌಡ-ನಂಜೇಗೌಡ ಕುರಿತಾಗಿ ಚೇತನ್ ಮಾಡಿದ್ದ ಟ್ವೀಟ್​ನ ವಿರುದ್ಧ ದೂರು ದಾಖಲಾಗಿ ಅವರ ಬಂಧನವೂ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Sat, 15 April 23