ಡಾಲಿ ಧನಂಜಯ್ (Daali Dhananjay) ನಟಿಸಿರುವ ‘ಕೋಟಿ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಮೊದಲ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. ಮಧುರ ಗಾಯಕ ಅರ್ಮಾನ್ ಮಲ್ಲಿಕ್ ಹಾಡು ಹಾಡಿದ್ದಾರೆ. ಸಾಹಿತ್ಯ ಬರೆದಿರುವುದು ಯೋಗರಾಜ್ ಭಟ್. ಹಾಡಿಗೆ ಸಂಗೀತವನ್ನು ವಾಸುಕಿ ವೈಭವ್ ಒದಗಿಸಿದ್ದಾರೆ. ವಾಸುಕಿ ವೈಭವ್ ಹಾಗೂ ಅರ್ಮಾಣ್ ಮಲ್ಲಿಕ್ ಜೋಡಿಯ ಮೊಟ್ಟ ಮೊದಲ ಹಾಡು ಇದಾಗಿದೆ. ಹಾಡಿನ ಲಿರಿಕಲ್ ವಿಡಿಯೋ ಇದೀಗ ಬಿಡುಗಡೆ ಆಗಿದ್ದು, ಮಧುರವಾದ ಹಾಡು ಮನಮುಟ್ಟುವ ಜೊತೆಗೆ ದೃಶ್ಯಗಳು ಸಹ ಮನ ಸೆಳೆಯುವಂತೆ ಹಾಡನ್ನು ಚಿತ್ರೀಕರಣ ಮಾಡಿರುವುದು ತಿಳಿಯುತ್ತಿದೆ.
‘ಮಾತು ಸೋತು’ ಎಂದು ಆರಂಭವಾಗುವ ಹಾಡಿನಲ್ಲಿ ಪ್ರೇಯಸಿ ಎದುರು ಬಂದಾಗ ಪ್ರೇಮಿಯ ಮನದೊಳಗೆ ಆಗುವ ಒದ್ದಾಟಗಳನ್ನು ಭಟ್ಟರು ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ. ಹಾಡನ್ನು ಚಿತ್ರೀಕರಿಸಿರುವ ರೀತಿಯೂ ಸಹ ಮುದ್ದಾಗಿದೆ. ಸಂತೆಯಲ್ಲಿಯೋ ಜಾತ್ರೆಯಲ್ಲಿಯೋ ಪ್ರೇಮಿ, ತನ್ನ ಪ್ರೇಯಸಿಯ ಹಿಂದೆ ಹಿಂದೆ ಸುತ್ತುತ್ತಾ, ಆಕೆಯ ನಗು ನೋಡಿ ಖುಷಿ ಪಡುತ್ತಿರುವ ಸನ್ನಿವೇಶವನ್ನು ಹಾಡಿಗಾಗಿ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಸೃಷ್ಟಿಸಿದಂತಿದೆ.
ಹಾಡು ಬಿಡುಗಡೆಗೆ ಮುನ್ನ ಮಾತನಾಡಿದ್ದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್, ‘‘ವಾಸುಕಿ ಭವನ್ ಹೊಸ ತಲೆಮಾರಿನ ಪ್ರತಿಭಾವಂತ ಮ್ಯೂಸಿಕ್ ಡೈರೆಕ್ಟರ್. ಇನ್ನು, ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಫ್ಯಾನ್ ನಾನು. ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಕಾಂಬಿನೇಷನ್ನ ಈ ಗೀತೆಯನ್ನು ಅರ್ಮಾನ್ ಮಲಿಕ್ ಬಹಳ ಚೆನ್ನಾಗಿ ಹಾಡಿದ್ದಾರೆ. ಕನ್ನಡಿಗರಿಗೆ ಈ ಹಾಡು ಇಷ್ಟ ಆಗುವುದರಲ್ಲಿ ಅನುಮಾನವಿಲ್ಲ’ ಎಂದಿದ್ದರು. ಇನ್ನು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತನಾಡಿ, ‘ನನ್ನ ಹಾಗೂ ಅರ್ಮಾನ್ ಮಲ್ಲಿಕ್ ನಡುವೆ ಬರುತ್ತಿರುವ ಮೊದಲ ಹಾಡಿದು, ಭಟ್ಟರು ಅದ್ಭುತವಾದ ಸಾಹಿತ್ಯ ಬರೆದಿದ್ದಾರೆ. ಹಾಡು ಜನರನ್ನು ತಲುಪುವುದು ಪಕ್ಕಾ’ ಎಂದಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಡಾಲಿ ಧನಂಜಯ್ ರಾಯಭಾರಿ
‘ಕೋಟಿ’ ಮಧ್ಯಮವರ್ಗದ ಯುವಕನ ಕತೆಯುಳ್ಳ ಸಿನಿಮಾ. ‘ಕೋಟಿ’ ಸಿನಿಮಾನಲ್ಲಿ ಡಾಲಿ ಧನಂಜಯ್ ಎದುರು ಮೋಕ್ಷ ಕುಶಾಲ್ ನಾಯಕಿಯಾಗಿ ನಟಿಸಿದ್ದಾರೆ. ನಟಿ ತಾರಾ, ರಂಗಾಯಣ ರಘು, ರಮೇಶ್ ಇಂದಿರಾ, ತನುಜಾ ವೆಂಕಟೇಶ್ ಇನ್ನೂ ಹಲವರು ನಟಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಕ್ರಿಯೇಟಿವ್ ಹೆಡ್ ಆಗಿದ್ದ ಪರಮೇಶ್ವರ್ ಗುಂಡ್ಕಲ್ ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಸಿನಿಮಾವನ್ನು ವೈಷ್ಣೋ ಸ್ಟುಡಿಯೋಸ್ನ ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ.
‘ಕೋಟಿ’ ಸಿನಿಮಾ ಬಗ್ಗೆ ತಮಗೆ ಸಾಕಷ್ಟು ನಿರೀಕ್ಷೆ ಇರುವುದಾಗಿ ಈ ಹಿಂದೆ ಡಾಲಿ ಧನಂಜಯ್ ಹೇಳಿದ್ದರು. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಜಾರಿಯಲ್ಲಿದೆ. ಮುಂದಿನ ತಿಂಗಳು 14ನೇ ತಾರೀಖು ಸಿನಿಮಾ ತೆರೆಗೆ ಬರಲಿದೆ. ‘ಕೋಟಿ’ಯ ಹೊರತಾಗಿ ‘ಉತ್ತರಕಾಂಡ’, ‘ಪುಷ್ಪ 2’, ‘ಜೀಬ್ರಾ’, ‘ಅಣ್ಣ ಫ್ರಂ ಮೆಕ್ಸಿಕೊ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ